ರಾಜ್ಯ U19 ಕ್ರಿಕೆಟ್ಗೆ ಕುಂದಾಪುರದ ರಚಿತಾ ಹತ್ವಾರ್ ನಾಯಕಿ
ಕುಂದಾಪುರ: ಆಟದಲ್ಲಿ ಶಿಸ್ತು, ಬದ್ಧತೆ, ಗೆಲ್ಲುವ ಛಲ ಇವೆಲ್ಲ ಒಗ್ಗೂಡಿದಾಗ ಉತ್ತಮ ಕ್ರೀಡಾಪಟು ಹುಟ್ಟಿಕೊಳ್ಳಲು ಸಾಧ್ಯ. ಕುಂದಾಪುರದಂಥ ಚಿಕ್ಕ ಊರಿನಲ್ಲಿ ಹುಟ್ಟಿದ ಪ್ರತಿಭೆಯೊಂದು ಬೆಂಗಳೂರಿನಂಥ ಮಹಾನಗರಿಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ರಾಜ್ಯದ ತಂಡದ ನಾಯಕಿಯಾಗುವುದೆಂದರೆ ಅದು ಸಾಮಾನ್ಯ ಸಾಧನೆಯಲ್ಲ. ಕುಂದಾಪುರದಲ್ಲಿ ತರಬೇತಿ ಪಡೆದು ಬೆಂಗಳೂರಿನಲ್ಲಿ ಖ್ಯಾತಿ ಪಡೆದ ರಚಿತಾ ಹತ್ವಾರ್ ಈಗ ಕರ್ನಾಟಕ U19 ವನಿತಾ ಕ್ರಿಕೆಟ್ ತಂಡದ ನಾಯಕಿ ಎಂಬುದು ಕರಾವಳಿಯ ಕ್ರೀಡಾಭಿಮಾನಿಗಳ ಹೆಮ್ಮೆ. Rachita Hatwar from Kundapura is the captain of the Karnataka state U19 women’s cricket team.
ಕುಂದಾಪುರದ ವಕೀಲ ದಂಪತಿ ರಮೇಶ್ ಹತ್ವಾರ್ ಹಾಗೂ ಸರಿತಾ ಹತ್ವಾರ್ ಅವರ ಕಿರಿಯ ಮುತ್ರಿ ರಚಿತಾ ಹತ್ವಾರ್ಗೆ ಚಿಕ್ಕಂದಿನಲ್ಲೇ ಕ್ರಿಕೆಟ್ ಅಂದರೆ ಪ್ರೀತಿ. ಕುಂದಾಪುರದ ವೆಂಕಟರಮಣ ಶಾಲೆಯಲ್ಲಿ ಓದುತ್ತಿರುವಾಗಲೇ ಚಕ್ರವರ್ತಿ ಕ್ರಿಕೆಟ್ ಅಕಾಡೆಮಿಯಲ್ಲಿ ಮೊಹಮ್ಮದ್ ಅರ್ಮಾನ್ ಅವರಲ್ಲಿ ಉತ್ತಮ ತರಬೇತಿ ಪಡೆದರು. ನಂತರ ಬೆಂಗಳೂರಿಗೆ ಬಂದು ನೆಲೆಸಿದ ಬಳಿ ದೇಶದ ಉತ್ತಮ ಕ್ರಿಕೆಟ್ ಅಕಾಡೆಮಿಗಳಲ್ಲಿ ಒಂದಾಗಿರುವ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (Karnataka Institute of Cricket KIOC) ನಲ್ಲಿ ತರಬೇತಿ ಪಡೆದರು. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ರಚಿತಾ ಹತ್ವಾರ್ ಕ್ರಿಕೆಟ್ನಲ್ಲಿ ಹೆಚ್ಚು ತರಬೇತಿ ಪಡೆಯುತ್ತಿರುವುದರಿಂದ ಈಗ ಓಪನ್ ನ್ಯಾಷನಲ್ ಸ್ಕೂಲ್ನಲ್ಲಿ ಓದನ್ನು ಮುಂದುವರಿಸಿದ್ದಾರೆ.

ಕ್ರಿಕೆಟ್ ಬಗ್ಗೆ ಆಸಕ್ತಿ ತಂದ ಲಾಕ್ಡೌನ್:
ಲಾಕ್ಡೌನ್ನಿಂದಾಗಿ ಅನೇಕರ ಬದುಕು ಸಂಕಷ್ಟಕ್ಕೆ ಸಿಲುಕಿರುವುದು ನಿಜ, ಆದರೆ ಸಂಕಷ್ಟದ ಸಮಯವನ್ನೇ ಕ್ರಿಯಾಶೀಲ ಕೆಲಸಗಳಿಗೆ ಬಳಸಿಕೊಂಡು ಬದುಕು ಕಟ್ಟಿಕೊಂಡಿರುವುದಕ್ಕೆ ಸಾಕಷ್ಟು ಉದಾರಹಣೆಗಳಿವೆ. ಹೀಗೆ ಸಂಕಷ್ಟದ ಸಮಯವನ್ನೇ ಬದುಕಿನ ಕ್ರಿಯಾಶೀಲತೆಗೆ ಬಳಸಿಕೊಂಡವರು ರಚಿತಾ ಹತ್ವಾರ್. ಟೀವಿಯಲ್ಲಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದ ರಚಿತಾ ಹತ್ವಾರ್ಗೆ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ದೊರೆಯಿತು. ತಂದೆ ರಮೇಶ್ ಹತ್ವಾರ್ ಹಾಗೂ ತಾಯಿ ಸರಿತಾ ಅವರು ಮಗಳಲ್ಲಿರುವ ಆಸಕ್ತಿಗೆ ಪ್ರೋತ್ಸಾಹ ನೀಡಿದರು. ಮನೆಯಲ್ಲಿಯೇ ಎರಡು ಚಿಲ್ಗಳನ್ನು ತಯಾರು ಮಾಡಿದರು. ನಂತರ ಚಕ್ರವರ್ತಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿಗೆ ಕಳುಹಿಸದರು. ಬೆಂಗಳೂರಿಗೆ ಬಂದು ನೆಲೆಸಿದ ಬಳಿಕ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (KIOC)ನ ನಿರ್ದೇಶಕ ಹಾಗೂ ಪ್ರಧಾನ ಕೋಚ್ ಇರ್ಫಾನ್ ಸೇಟ್ ಅವರಲ್ಲಿ ತರಬೇತಿಗೆ ಕಳಹಿಸಿದರು. ಇದರ ಪರಿಣಾಮ ರಚಿತಾ ಇಂದು ಭರವಸೆಯ ಆಟಗಾರ್ತಿಯಾಗಿದ್ದು ಮಾತ್ರವಲ್ಲ ಕರ್ನಾಟಕ U19 ತಂಡ ಈ ಬಾರಿಯ ಬಿಸಿಸಿಐ U19 ಟಿ20 ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಉತ್ತಮ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿರುವ ರಚಿತಾ ಹತ್ವಾರ್ ಗ್ರಾಮೀಣ ಪ್ರದೇಶದಿಂದ ಬಂದು ರಾಜ್ಯ ತಂಡದ ನಾಯಕಿಯಾಗಿರುವುದು ನಿಜವಾಗಿಯೂ ಅದ್ಭುತ ಸಾಧನೆ.

ಎಬಿ ಡಿವಿಲಿಯರ್ಸ್ ಅಭಿಮಾನಿ
ಕ್ರಿಕೆಟ್ ಜಗತ್ತಿನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಿಲಿಯರ್ಸ್ ಅವರ ಅಭಿಮಾನಿಗಳ ಸಂಖ್ಯೆ ಅಪಾರ. ಅವರು ಐಪಿಎಲ್ನಲ್ಲಿ ಆರ್ಸಿಬಿ ಆಟಗಾರರಾದಾಗಿನಿಂದ ಕನ್ನಡಿಗರಿಗೂ ಅಭಿಮಾನಿ. ಎಬಿಡಿಯ ಬ್ಯಾಟಿಂಗ್ಗೆ ಮಾರುಹೋದವರಲ್ಲಿ ರಚಿತಾ ಹತ್ವಾರ್ ಕೂಡ ಒಬ್ಬರು. “ಕ್ರಿಕೆಟ್ ಬಗ್ಗೆ ಆಸಕ್ತಿ ಹುಟ್ಟಿದಾಗಿನಿಂದ ನಾನು ಎಬಿಡಿ ಆಭಿಮಾನಿ. ಅವರಂತೆಯೇ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪ್ ಆಗಬೇಕೆಂದು ಹಂಬಲಿಸಿ ಈಗ ಅದೇ ಜವಾಬ್ದಾರಿಯನ್ನು ನಿಭಾಹಿಸುತ್ತಿರುವೆ. ನನ್ನ ಯಶಸ್ಸಿಗಾಗಿ ಶ್ರಮಿಸುತ್ತಿರುವ ಹೆತ್ತವರಿಗೆ ನಾನು ಸದಾ ಚಿರ ಋಣಿ,” ಎಂದು ರಚಿತಾ ಹೇಳಿದ್ದಾರೆ.
ಮನೆಯಲ್ಲೇ ನೆಟ್ & ಪಿಚ್:
ಹತ್ವಾರ್ ದಂಪತಿಗೆ ಮಗಳನ್ನು ಕ್ರಿಕೆಟ್ ತಾರೆಯನ್ನಾಗಿ ಮಾಡಬೇಕೆಂಬ ಹಂಬಲ ದಟ್ಟವಾಗಿತ್ತು. ಈ ಕಾರಣಕ್ಕಾಗಿಯೇ ಮನೆಯಲ್ಲಿಯೇ ಒಂದು ಮಿನಿ ಒಳಾಗಣವನ್ನು ನಿರ್ಮನಿಸಿದ್ದರು. “ನನ್ನ ತಂದೆ ತಾಯಿಗೆ ನಾನು ಕ್ರಿಕೆಟ್ ಆಡುತ್ತಿರುವುದು ಬಹಳ ಖುಷಿ. ಅಕ್ಕ ರಮಿತಾ ಹತ್ವಾರ್ 99% ಅಂಕ ಪಡೆದು ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾಳೆ. ನಾನೂ ಎಸ್ಎಸ್ಎಲ್ಸಿಯಲ್ಲಿ 9೨% ಅಂಕ ಪಡೆದಿರುವೆ, ಕ್ರಿಕೆಟ್ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದರಿಂದ ಹೆತ್ತವರಿಗೆ ಅದಕ್ಕೆ ಪೂರಕವಾಗ ಸಲವತ್ತುಗಳನ್ನು ನೀಡಿದರು. ಈಗ ಓದಿನ ಜೊತೆಯಲ್ಲೇ ಕ್ರಿಕೆಟ್ ಆಡುತ್ತಿರುವುದು ಖುಷಿ ಕೊಟ್ಟಿದೆ. ಬೆಂಗಳೂರಿಗೆ ಬಂದು ತರಬೇತಿ ಪಡೆಯುವುದಕ್ಕೆ ಮುನ್ನ ತಂದೆಯವರೂ ನನಗೆ ಮನೆಯಲ್ಲಿ ತರಬೇತಿ ನೀಡುತ್ತಿದ್ದರು,” ಎಂದು ರಚಿತಾ ಹತ್ವಾರ್ ಹೇಳಿದರು.

ರಚಿತಾ ಹತ್ವಾರ್ ಅದ್ಭುತ ಆಟಗಾರ್ತಿ: ಕೋಚ್ ಇರ್ಫಾನ್ ಸೇಟ್
ರಚಿತಾ ಹತ್ವಾರ್ ಈಗ ಬೆಂಗಳೂರಿನ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬೆಳಿಗ್ಗೆ ವಾರದಲ್ಲಿ ಐದು ದಿನ ನಿರಂತರ ತರಬೇತಿ. ಇದರಿಂದಾಗಿ ರಚಿತಾ ಅವರಿಗೆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. “ರಚಿತಾ ಅದ್ಭುತ ಆಟಗಾರ್ತಿ. ಬದ್ಧತೆ, ಶಿಸ್ತು ಸಾಧನೆ ಮಾಡಬೇಕೆಂಬ ಹಂಬಲ ಆಕೆಯಲ್ಲಿ ಉತ್ಕಟವಾಗಿದೆ. ಕರ್ನಾಟಕ ತಂಡ ಪ್ರಶಸ್ತಿ ಗೆಲ್ಲುವಲ್ಲಿ ರಚಿತಾ ಅವರ ಪಾತ್ರ ಪ್ರಮುಖವಾಗಿತ್ತು. ನಾಯಕಿಯ ಜವಾಬ್ದಾರಿ ನೀಡಿರುವುದು ಅರ್ಥಪೂರ್ಣ. ಇದೇ ರೀತಿಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದರೆ ಭಾರತ ತಂಡದಲ್ಲಿ ಕರ್ನಾಟಕದ ಆಟಗಾರ್ತಿಗೆ ಅವಕಾಶ ಸಿಗುವುದು ಸ್ಪಷ್ಟ,” ಎಂದು KIOC ನಿರ್ದೇಶಕ ಹಾಗೂ ಪ್ರಧಾನ ಕೋಚ್, ಇರ್ಫಾನ್ ಸೇಟ್ ಅವರು ಹೇಳಿದ್ದಾರೆ.


