KIUG2025: ರಾಜ್ಯಕ್ಕೆ ಕೀರ್ತಿ ತಂದ ಓಟಗಾರ್ತಿ ಉಡುಪಿಯ ಕೀರ್ತನಾ
ಜೈಪುರ: ತಾಯಿಯ ಆರೈಕೆ, ಅಣ್ಣನ ಕಾಳಜಿಯಲ್ಲಿ ಕ್ರೀಡಾಪಟುವಾಗಿ ಬೆಳೆದ ಉಡುಪಿ ಜಿಲ್ಲೆಯ ಕಿರಿಮಂಜೇಶ್ವರದ ಕೀರ್ತನಾ ಎಸ್. ಅವರು ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ವನಿತೆಯ 100 ಮೀ. ಓಟದಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Udupi Keerthana S. bought laurels to Karnataka state by winning gold medal in 100mtr in KIUG2025
ಬೆಂಗಳೂರಿನ ಜೈನ್ ಕಾಲೇಜನ್ನು ಪ್ರತಿನಿಧಿಸುತ್ತಿರುವ ಕೀರ್ತನಾ ಕುಂದಾಪುರ ತಾಲೂಕಿನ ಕಿರಿಮಂಜೇಶ್ವರದವರು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡರೂ, ತಾಯಿಯ ಆರೈಕೆಯಲ್ಲಿ ಮಿಂಚಿನ ಓಟಗಾರ್ತಿಯಾಗಿ ಬೆಳೆಯುತ್ತಿದ್ದಾರೆ.
ಸೋಮವಾರ ನಡೆದ ವನಿತೆಯ 100 ಮೀ, ಓಟದಲ್ಲಿ ಕೀರ್ತನಾ, 11.94 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ವಿಶೇಷವೆಂದರೆ ಬೈಂದೂರು ತಾಲೂಕಿನಲ್ಲಿ ಇಬ್ಬರು ರಾಷ್ಟ್ರೀಯ ಮಟ್ಟದ ವೇಗದ ಓಟಗಾರರಿದ್ದಾರೆ ಎಂಬುದು ವಿಶೇಷ. ಪುರುಷರ ವಿಭಾಗದಲ್ಲಿ ಮಣಿಕಂಠ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಪಾಸ್‌ಪೋರ್ಟ್ ವಿಳಂಬವಾಗಿ ವಿಶ್ವ ಯೂನಿವರ್ಸಿಟಿ ಚಾಂಪಿಯನ್‌ಷಿಪ್ ಸ್ಪರ್ಧೆಯಿಂದ ವಂಚಿತರಾದ ಕೀರ್ತನಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದಾರೆ. ರಾಷ್ಟ್ರೀಯ ಮಟ್ಟದ ರಿಲೇ ಓಟದಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ ಕೀರ್ತನಾಗೆ ವೈಯಕ್ತಿಕ ವಿಭಾಗಲ್ಲಿ ದಕ್ಕಿದ ಮೊದಲ ಚಿನ್ನದ ಪದಕ ಇದಾಗಿದೆ.
“ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ನನಗೆ, ತಾಯಿಯೇ ಸರ್ವಸ್ವ. ಅಣ್ಣ ಕಿಶೋರ್‌ನಿಂದಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು. ಹಿಂದಿನ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದೆ. ವೈಕ್ತಿಕ ವಿಭಾಗದಲ್ಲಿ ಚಿನ್ನ ಗೆಲ್ಲುತ್ತಿರುವುದು ಇದೇ ಮೊದಲು. ರಿಲೇ ವಿಭಾಗಲ್ಲಿ ಚಿನ್ನ ಗೆದ್ದಿರುವೆ, ಉತ್ತಮ ತರಬೇತಿ ಪಡೆದು ದೇಶವನ್ನು ಪ್ರತಿನಿಧಿಸುವುದು ಮುಂದಿನ ಗುರಿ,” ಎಂದು ಕೀರ್ತನಾ ಹೇಳಿದ್ದಾರೆ.
ಬಡ ಕುಟುಂಬದಿಂದ ಬಂದ ಕೀರ್ತನಾ ಅವರಿಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹಂಬಲ, “ಚಿಕ್ಕ ಹಳ್ಳಿಯಿಂದ ಬಂದ ನಾನು ಇವತ್ತು ಬೆಂಗಳೂರಿನ ಉತ್ತಮ ಕಾಲೇಜಿನಲ್ಲಿ ಓದುತ್ತಿದ್ದೇನೆಂದರೆ ಅದಕ್ಕೆ ಕ್ರೀಡಾ ಸಾಧನೆಯೇ ಕಾರಣ, ಈ ಬಾರಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸನ್‌ನಲ್ಲಿ ಗೆದ್ದಿರುವ ಪದಕ ಆತ್ಮವಿಶ್ವಾಸವನ್ನು ಹೆಚ್ಚಿದಿದೆ. ಮುಂದಿನ ದಿನಗಳಲ್ಲಿ ವೇಗವನ್ನು ಉತ್ತಮಪಡಿಸಿಕೊಳ್ಳುವೆ,” ಎಂದರು.

