ಬೆಂಗಳೂರು ಬುಲ್ಸ್ ವಿರುದ್ಧ ಬೆಂಗಾಲ್ ಕಂಗಾಲ್
ನವದೆಹಲಿ: ಅಲಿರೇಜಾ ಮಿರ್ಜಾಯೀನ್ ಅವರ ಮತ್ತೊಂದು ಸೂಪರ್ ಟೆನ್ ಸಹಾಸದ ಜತೆಗೆ ಆಲ್ ರೌಂಡ್ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ 104ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ 30 ಅಂಕಗಳ ಭರ್ಜರಿ ಗೆಲುವು ಸಾಧಿಸಿತು. Alireza’s Super 10 ends Bengal Warriorz campaign helps Bengaluru Bulls jump to third place
ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 54-24 ಅಂಕಗಳಿಂದ ಬೆಂಗಾಲ್ ತಂಡವನ್ನು ಪರಾಭವಗೊಳಿಸಿತು. ಈ ಗೆಲುವಿನೊಂದಿಗೆ ಬೆಂಗಳೂರು ತಂಡ ಒಟ್ಟಾರೆ 20 ಅಂಕಗಳನ್ನು ಕಲೆಹಾಕಿತು.
ಬೆಂಗಳೂರು ಬುಲ್ಸ್ ತಂಡದ ಪರ ಅಲಿರೇಜಾ ಮಿರ್ಜಾಯಿನ್ (14 ಅಂಕ), ಆಶಿಶ್ ಮಲಿಕ್ (7 ಅಂಕ) ಮಿಂಚಿದರೆ, ಬೆಂಗಾಲ್ ವಾರಿಯರ್ಸ್ ತಂಡದ ಪರ ವಿಶ್ವಾಸ್ (5 ಅಂಕ), ಹಿಮಾಂಶು ನರ್ವಾಲ್ (10 ಅಂಕ) ಕಂಗೊಳಿಸಿದರು.
32ನೇ ನಿಮಿಷದಲ್ಲಿ ದಾಳಿಗಿಳಿದ ಆಕಾಶ್ ಶಿಂದೆ, ಸಂದೀಪ್ ಸೈನಿ ಮತ್ತು ಅಮಾನ್ ದೀಪ್ ಅವರನ್ನು ಔಟ್ ಮಾಡಿದರು. ಹೀಗಾಗಿ ಪಂದ್ಯದಲ್ಲಿ ಬುಲ್ಸ್ ಮೂರನೇ ಬಾರಿ ಎದುರಾಳಿ ತಂಡವನ್ನು ಆಲೌಟ್ ಗೆ ಗುರಿಪಡಿಸಿತು. ಪಂದ್ಯ ಮುಕ್ತಾಯಕ್ಕೆ ಇನ್ನೈದು ನಿಮಿಷಗಳಿರುವಾಗ ಬುಲ್ಸ್ ತಂಡದ ಮುನ್ನಡೆಯು 45-21ಕ್ಕೆ ಹೆಚ್ಚಳಗೊಂಡಿತು. ಗೆಲುವು ಕೂಡ ಖಾತರಿಗೊಂಡಿತು.
ಮುನ್ನಡೆ ಕಾಯ್ದುಕೊಳ್ಳುವ ಇರಾದೆಯೊಂದಿಗೆ ಬುಲ್ಸ್ ಆಟಗಾರರು ದ್ವಿತೀಯಾರ್ಧ ಆರಂಭಿಸಿದರು. ಆದರೆ ಎದುರಾಳಿ ತಂಡ ಪುಟಿದೇಳುವ ಸುಳಿವು ನೀಡಿತು. ಹಿಮಾಂಶು ನರ್ವಾಲ್ ಮತ್ತು ನಾಯಕ ವಿಶ್ವಾಸ್ ಸ್ಥಿರತೆಗೆ ಒತ್ತು ನೀಡದ ಕಾರಣ 17-35ರಲ್ಲಿ ಮರು ಹೋರಾಟ ಸಂಘಟಿಸುವ ಪ್ರಯತ್ನ ನಡೆಸಿತು. ಆದರೆ, ಬುಲ್ಸ್ ಗೆ ಅಲಿರೇಜಾ ಮಾತ್ರವಲ್ಲದೆ, ಆಶಿಶ್, ದೀಪಕ್ ಶಂಕರ್ ಉತ್ತಮ ಸಾಥ್ ನೀಡಿದ ಕಾರಣ ಬೆಂಗಳೂರು ತಂಡ ತನ್ನ ಮೇಲುಗೈಯನ್ನು ಕಾಯ್ದುಕೊಂಡಿತು. ಹೀಗಾಗಿ 30 ನಿಮಿಷಗಳ ಆಟ ಮುಕ್ತಾಯಕ್ಕೆ ಬುಲ್ಸ್ ತಂಡವು 37-10ರಲ್ಲಿ ಅಂತರ ಸಾಧಿಸಿತು.
ಪಂದ್ಯದ ಪೂರ್ವಾರ್ಧಕ್ಕೆ ಬೆಂಗಳೂರು ಬುಲ್ಸ್ ತಂಡ 29 -12 ಅಂಕಗಳಿಂದ ಮೇಲುಗೈ ಸಾಧಿಸುವ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.
ಪ್ಲೇಆಫ್ ಹಂತವನ್ನು ಖಚಿತಪಡಿಸಿಕೊಂಡಿರುವ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಮೇಲೇರುವ ಗುರಿಯೊಂದಿಗೆ ಕಣಕ್ಕಿಳಿಯಿತು. ಪಂದ್ಯ ಆರಂಭವಾದ ಕೇವಲ 6 ನಿಮಿಷಗಳಲ್ಲಿ ಬೆಂಗಾಲ್ ತಂಡದ ಅಂಗಣವನ್ನು ಖಾಲಿ ಮಾಡಿಸಿದ ಬುಲ್ಸ್ ಆಟಗಾರರು ಪಂದ್ಯದ ಮೇಲೆ ಹಿಡಿತ ಕಂಡುಕೊಂಡರು.
ಟ್ಯಾಕಲ್ ಮತ್ತು ರೇಡಿಂಗ್ ನಲ್ಲಿ ಅತ್ಯುತ್ತಮ ಹೊಂದಾಣಿಕೆ ಆಟ ಕಾಯ್ದುಕೊಂಡ ಕಾರಣ ಬುಲ್ಸ್ ಆಟಗಾರರಿಗೆ ಸವಾಲೊಡ್ಡಲು ವಾರಿಯರ್ಸ್ ಆಟಗಾರರಿಗೆ ಸಾಧ್ಯವಾಗಲಿಲ್ಲ. 16ನೇ ನಿಮಿಷದಲ್ಲಿ ಸಂದೀಪ್ ಸೈನಿ ಮತ್ತು ಅಮನ್ ದೀಪ್ ಅವರನ್ನು ರೇಡಿಂಗ್ ನಲ್ಲಿ ಔಟ್ ಮಾಡಿದ ಆಲ್ ರೌಂಡರ್ ಅಲಿರೇಜಾ ಮಿರ್ಜಾಯಿನ್ ಮತ್ತೊಮ್ಮೆ ಸೂಪರ್ ಟೆನ್ ಸಾಹಸ ಮಾಡಿದರು. ಇದು ಸಹಜವಾಗಿಯೇ ಪಂದ್ಯದ ಮೇಲೆ ತಂಡದ ಹಿಡಿತವನ್ನು ವಿಸ್ತರಿಸಿತು.
ಬೆಂಗಳೂರು ಬುಲ್ಸ್ ತಂಡವು ತನ್ನ ಅಂತಿಮ ಲೀಗ್ ಹಾಗೂ ಮುಂದಿನ ಪಂದ್ಯದಲ್ಲಿ ಅಕ್ಟೋಬರ್ 23ರಂದು ಗುಜರಾತ್ ಜಯಂಟ್ಸ್ ತಂಡದ ಸವಾಲು ಎದುರಿಸಲಿದೆ.

