ಕರಾವಳಿಯ ಬಾಕ್ಸಿಂಗ್ ಕ್ವೀನ್ ಜಾಯ್ಲಿನ್ ಡಿಸೋಜಾ
ಉಡುಪಿ: “If my mind can conceive it, and my heart can believe it then, I can achieve it,” ಉಡುಪಿಯ ಯುವ ಬಾಕ್ಸರ್ ಜಾಯ್ಲಿನ್ ನಥಾಲಿಯನ್ ಡಿಸೋಜಾ (Joylin Nathalian Dsouza) ಅವರ ಬದುಕಿನ ಕತೆ ಕೇಳಿದಾಗ ಈ ಜಗತ್ತು ಕಂಡ ಶ್ರೇಷ್ಠ ಬಾಕ್ಸರ್ ಮೊಹಮ್ಮದ್ ಆಲಿಯ ಈ ಮಾತು ನೆನಪಿಗೆ ಬಂತು. ಕಷ್ಟಗಳ ಮೆಟ್ಟಿನಿಂತು, ಬದುಕಿಗಾಗಿ ಸ್ಪಷ್ಟ ಗುರಿಯನ್ನು ಹೊತ್ತು, ಇಷ್ಟದ ಹಾದಿಯಲ್ಲಿ ನಡೆಯುವ ಜಾಯ್ಲಿನ್ ಡಿಸೋಜಾ ರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ ಮಿಂಚುತ್ತಿರುವ ಉಡುಪಿ ಜಿಲ್ಲೆಯ ಯುವ ಬಾಕ್ಸರ್. Boxing Queen of Coastal Karnataka Joylin Nathalian Dsouza want to shine in National and International level.
ಉಡುಪಿ ಜಿಲ್ಲೆಯಲ್ಲಿ ಬಾಕ್ಸಿಂಗ್ ಕ್ರೀಡೆ ಅಷ್ಟು ಜನಪ್ರಿಯಗೊಂಡಿಲ್ಲ. ಆದರೂ ಬಾಕ್ಸಿಂಗ್ ಕೋಚ್ ಶಿವಪ್ರಸಾದ್ ಆಚಾರ್ಯ ಅವರ ಶ್ರಮದಿಂದಾಗಿ ನೂರಾರು ಬಾಕ್ಸರ್‌ಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಿದೆ. ಅಂಥ ಯುವ ಬಾಕ್ಸರ್‌ಗಳಲ್ಲಿ ಯಶಸ್ಸು ಕಂಡ ಮಹಿಳಾ ಬಾಕ್ಸರ್‌ಗಳಲ್ಲಿ ಜಾಯ್ಲಿನ್ ಡಿಸೋಜಾ ಪ್ರಮುಖರು. ಟೆನಿಸ್‌ಬಾಲ್ ಕ್ರಿಕೆಟ್, ಕರಾಟೆ, ಬಾಕ್ಸಿಂಗ್ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜಾಯ್ಲಿನ್ ಇದುವರೆಗೂ ರಾಜ್ಯ ಮಟ್ಟದಲ್ಲಿ 11 ಚಿನ್ನದ ಪದಕ ಗೆದ್ದಿರುತ್ತಾರೆ. ಉಡುಪಿ ಕೆಮ್ಮಣ್ಣುವಿನ ನಿವಾಸಿ ಫ್ಲಾವಿಯಾ ಸುನೀತಾ ಡಿಸೋಜಾ ಅವರ ಎರಡನೇ ಪುತ್ರಿಯಾಗಿರುವ ಜಾಯ್ಲಿನ್ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿದಿ ಮಾಹೆಯ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್‌ನಲ್ಲಿ ಎಮರ್ಜೆನ್ಸಿ ಮೆಡಿಕಲ್ ಟೆಕ್ನಾಲಜಿಯಲ್ಲಿ ಬಿಎಸ್‌ಸಿ ಮುಗಿಸಿ ಕೆಲ ಕಾಲ ಎಮರ್ಜೆನ್ಸಿ ಮೆಡಿಸಿನ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸಿರುತ್ತಾರೆ, ಸದ್ಯ ಎಮರ್ಜೆನ್ಸಿ ಮೆಡಿಕಲ್ ಟೆಕ್ನಾಲಜಿಯಲ್ಲಿ ಎಂಎಸ್‌ಸಿ ಅಧ್ಯಯ ಮಾಡುತ್ತಿದ್ದಾರೆ. ಜಾಯ್ಲಿನ್ ಅವರ ಕ್ರೀಡಾ ಯಶಸ್ಸಿನಲ್ಲಿ ಸಹೋದರಿ ಜಾಯ್ಸಿ ಡಿಸೋಜಾ ಹಾಗೂ ಸಹೋದರ ಬ್ರಿಯಾನ್ ಡಿಸೋಜಾ ಅವರು ಪ್ರೋತ್ಸಾಹ ನೀಡುತ್ತಿದ್ದಾರೆ.

ಬಾಕ್ಸರ್ ಆದ ಕರಾಟೆ ಚಾಂಪಿಯನ್ ಜಾಯ್ಲಿನ್: ಬಾಕ್ಸಿಂಗ್ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ಮುನ್ನ ಜಾಯ್ಲಿನ್ 11 ವರ್ಷಗಳ ಕಾಲ ಕರಾಟೆಯಲ್ಲಿ ಪಳಗಿದ್ದರು. ನಿತ್ಯಾನಂದ ಕೆಮ್ಮಣ್ಣು ಅವರು ಕಾಟೆಯ ತರಬೇತುದಾರರಾಗಿದ್ದರು. ಜಾಯ್ಲಿನ್ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದಿರುವುದು ಮಾತ್ರವಲ್ಲ ಬ್ಲ್ಯಾಕ್ ಬೆಲ್ಟ್ ಸೆಕೆಂಡ್ ಡಾನ್ ಗೌರವ ಪಡೆದಿದ್ದಾರೆ.
ಕಳೆದ ಆರು ವರ್ಷಗಳಿಂದ ಶಿವಪ್ರಸಾದ್ ಆಚಾರ್ಯ ಅವರಲ್ಲಿ ತರಬೇತಿ ಪಡೆಯುತ್ತಿರುವ ಜಾಯ್ಲಿನ್ ಅವರು ಗೆದ್ದಿರುವ ಪದಕಗಳನ್ನು ಗಮನಿಸಿದಾಗ ಅಚ್ಚರಿಯಾಗುತ್ತದೆ. ಜಾಯ್ಲಿನ್ ವೃತ್ತಿಪರ ಬಾಕ್ಸಿಂಗ್‌ನಲ್ಲೂ ಸ್ಪರ್ಧಿಸಿದ್ದರು. ತಮಿಳುನಾಡಿನ ನಮಕ್ಕಲ್‌ನಲ್ಲಿ ನಡೆದ ಮೊದಲ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದು, ನಂತರ ಮುಂಬಯಿಯಲ್ಲಿ ನಡೆದ ಎರಡನೇ ಪ್ರೋ ಬಾಕ್ಸಿಂಗ್‌ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

2019ರಿಂದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಚಿನ್ನ ಗೆಲ್ಲುತ್ತಿರುವ ಜಾಯ್ಲಿನ್ ದಸರಾ ಕ್ರೀಡಾಕೂಟದ ಸೇರಿದಂತೆ ಹಲವಾರು ಚಾಂಪಿಯನ್‌ಷಿಪ್‌ಗಳಲ್ಲಿ 11ಕ್ಕೂ ಹೆಚ್ಚು ಚಿನ್ನದ ಪದಕ ಗೆದ್ದಿರುತ್ತಾರೆ. ಈ ಬಾರಿ ಫೆಡರೇಷನ್ ಕಪ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾಗಹಿಸಿರುತ್ತಾರೆ.
ಹಾಸ್ಟೆಲ್‌ಗಳಲ್ಲಿ ಆತ್ಮಸಂರಕ್ಷಣೆಯ ತರಬೇತಿ: ಬಾಕ್ಸಿಂಗ್ ಹಾಗೂ ಕರಾಟೆ ಮೂಲಕ ಆತ್ಮರಕ್ಷಣೆಯನ್ನು ಮಾಡಿಕೊಳ್ಳಬಹುದು. ಇಂದಿನ ಕಾಲಗಟ್ಟದಲ್ಲಿ ಮಹಿಳೆಯರಿಗೆ ಆತ್ಮಸಂರಕ್ಷಣೆ ಅತ್ಯಗತ್ಯ. ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಿರುವಂಥ ವಿದ್ಯಾರ್ಥಿನಿಯರಿಗೆ ಸರಕಾರ ಕರಾಟೆ ಕಲಿಸುವ ಯೋಜನೆ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಜಾಯ್ಲಿನ್ ಉಡುಪಿಯ ಕಿನ್ನಿಮೂಲ್ಕಿಯಲ್ಲಿರುವ ಬಾಲಕಿಯರ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ TAPMI ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ವಿದ್ಯಾರ್ಥಿನಿಯರಿಗೆ ಹಾಗೂ ಮಣಿಪಾಲದ ಮಹಿಳಾ ಸಿಬ್ಬಂದಿಗಳಿಗೆ ಕರಾಟೆ ತರಬೇತಿ ನೀಡಿರುತ್ತಾರೆ. ಇದು ಜಾಯ್ಲಿನ್ ಅವರ ಸಾಮಾಜಿಕ ಕಾಳಜಿಗೆ ನಿದರ್ಶನ.

ಅಮ್ಮನಿಗಾಗಿ ಅಂತಾರಾಷ್ಟ್ರೀಯ ಪದಕ: ತನ್ನ ಭವಿಷ್ಯದ ಬಾಕ್ಸಿಂಗ್ ಬಗ್ಗೆ ಮಾತನಾಡಿದ ಜಾಯ್ಲಿನ್, “ಶಿಕ್ಷಣ ಹಾಗೂ ಕ್ರೀಡೆ ಎರಡನ್ನೂ ಸಮತೋಲನದಲ್ಲಿ ಕಾಯ್ದುಕೊಂಡು ಹೋಗುವುದು ಸುಲಭವಲ್ಲ. ಉನ್ನತ ಮಟ್ಟದ ಸಾಧನೆ ಮಾಡಬೇಕಾದರೆ ಇನ್ನೂ ಹೆಚ್ಚಿನ ತರಬೇತಿಯ ಅಗತ್ಯವಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಸರಕಾರದ ಯೋಜನೆಗಳು ಇದಕ್ಕೆ ಪೂರಕವಾಗಿವೆ. ನನ್ನ ಶಿಕ್ಷಣ ಹಾಗೂ ಕ್ರೀಡಾ ಬದುಕಿಗೆ ನನ್ನ ಅಮ್ಮ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಬೇಕು. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶ್ರಮವಹಿಸುವೆ. ರಾಜ್ಯ ಹಾಗೂ ದೇಶಕ್ಕೆ ಇನ್ನೂ ಹೆಚ್ಚಿನ ಕೀರ್ತಿ ತರಬೇಕು. ಉಡುಪಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಿಯರು ಬಾಕ್ಸಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಶಿವಪ್ರಸಾದ್ ಅವರ ಕಠಿಣ ಶ್ರಮ ಫಲ ನೀಡಿದೆ. ಸರಕಾರ ಅವರಿಗೂ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು,” ಎಂದು ಹೇಳಿದರು.
ಸ್ಫೂರ್ತಿಯಾದ ವಿರಾಜ್ ಮೆಂಡನ್: ಒಬ್ಬ ಹಳ್ಳಿ ಹುಡುಗನ ಸಾಧನೆ ಆ ಹಳ್ಳಿಯ ಯುವ ಜನರಿಗೆ ಯಾವ ರೀತಿಯಲ್ಲಿ ಸ್ಫೂರ್ತಿಯನ್ನುಂಟು ಮಾಡಬಹುಬುದು ಎಂಬುದಕ್ಕೆ ಇತ್ತೀಚಿಗೆ ನಮ್ಮನ್ನಗಲಿದ ಚಾಂಪಿಯನ್ ಬಾಕ್ಸರ್ ವಿರಾಜ್ ಮೆಂಡನ್ ಉತ್ತಮ ನಿದರ್ಶನ. ಕರಾವಳಿಯ ಯಾವುದೇ ಬಾಕ್ಸರ್‌ಗಳನ್ನು ಮಾತನಾಡಿಸಿದರೂ ಅವರು “ನನಗೆ ಸ್ಪೂರ್ತಿ ವಿರಾಜ್ ಅಣ್ಣ” ಎನ್ನುತ್ತಾರೆ. ಮಲ್ಪೆ ಬಂದರಿನಲ್ಲಿ ಕಣ್ಣಿ ಕೆಲಸ ಮಾಡಿ ಬಾಕ್ಸಿಂಗ್‌ನಲ್ಲಿ ಮಿಂಚಿದ್ದ ವಿರಾಜ್ ಕರಾವಳಿಯಲ್ಲಿ ಬಾಕ್ಸಿಂಗ್‌ನಲ್ಲಿ ಮಿಂಚಿನ ಸಂಚಲನವನ್ನು ಉಂಟು ಮಾಡಿದ ಸಾಧಕ.

ಮಿಂಚಿ ಬಾಕ್ಸರ್ ಜಾಯ್ಲಿನ್: ಕೋಚ್ ಶಿವಪ್ರಸಾದ್
ಜಾಯ್ಲಿನ್ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಕೋಚ್ ಶಿವಪ್ರಸಾದ್ ಆಚಾರ್ಯ, “ಜಾಯ್ಲಿನ್ ಮಿಂಚಿನ ಬಾಕ್ಸರ್. ಕ್ಷಿಪ್ರವೇಗದಲ್ಲಿ ಎದುರಾಳಿಯನ್ನು ಸೋಲಿಸುವ ಸಾಮರ್ಥ್ಯಹೊಂದಿರುವ ಬಾಕ್ಸರ್. ಶೈಕ್ಷಣಕಿ ಸಾಧನೆಯ ಜೊತೆಯಲ್ಲಿ ಕ್ರೀಡೆಯಲ್ಲೂ ಸಾಧನೆ ಮಾಡಿರುವ ಜಾಯ್ಲಿನ್ ಇಂದಿನ ಯುವ ಜನರಿಗೆ ಮಾದರಿ,” ಎಂದು ಹೇಳಿದರು.
ದೇಶಕ್ಕಾಗಿ ಕೀರ್ತಿ ತರಲಿ ಎಂಬುದೇ ಹಾರೈಕೆ: ತಾಯಿ ಫ್ಲಾವಿಯಾ
ಕಷ್ಟಗಳ ನಡುವೆಯೂ ಜಾಯ್ಲಿನ್ ಅವರ ಕ್ರೀಡಾ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವ ಫ್ಲಾವಿಯಾ ಅವರು ಮಕ್ಕಳು ಕ್ರೀಡಾ ಸಾಧನೆಯಲ್ಲಿ ದೇಶಕ್ಕೆ ಕೀರ್ತಿ ತರಲಿ ಎಂಬ ಆಶಯ ಹೊಂದಿದ್ದಾರೆ. “ದೊಡ್ಡ ಮಗಳು ಜಾಯ್ಸಿ ಪೊಲೀಸ್ ಅಧಿಕಾರಿಯಾಗಲಿ ಎಂದು ಆಶಿಸಿದ್ದೆ, ಆದರೆ ಅದು ಸಾಧ್ಯವಾಗಲಿಲ್ಲ. ಆದರೂ ಆಕೆ ಹೊಸ ಚಾಂಪಿಯನ್ನರನ್ನು ಸೃಷ್ಟಿಸುತ್ತಿದ್ದಾಳೆ. ಕರಾಟೆ ಕ್ರೀಡೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾಳೆ.

ಕಿರಿಯ ಮಗಳು ಜಾಯ್ಲಿನ್ ಮುಂದಿದ ದಿನಗಳಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಜಾಗತಿಕ ಮಟ್ಟದಲ್ಲಿ ಪದಕ ಗೆಲ್ಲಲಿ, ಒಲಿಂಪಿಕ್ಸ್‌ನಲ್ಲೂ ಪಾಲ್ಗೊಂಡು ಯಶಸ್ಸು ಕಾಣಲಿ ಎಂಬುದೇ ಹಾರೈಕೆ,ʼ ಎನ್ನುತ್ತಾರೆ ಫ್ಲಾವಿಯಾ.

