ಟೈಬ್ರೇಕರ್ನಲ್ಲಿ ಬೆಂಗಳೂರು ಬುಲ್ಸ್ಗೆ ಮತ್ತೊಂದು ಸೋಲು
ಚೆನ್ನೈ: ಟೈಬ್ರೇಕರ್ ಒತ್ತಡವನ್ನು ನಿಭಾಯಿಸುವಲ್ಲಿ ಮತ್ತೊಮ್ಮೆ ಎಡವಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ಎರಡನೇ ಟೈಬ್ರೇಕರ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡದ ವಿರುದ್ಧ 4-6ರಲ್ಲಿ ಪರಾಭವಗೊಂಡಿತು. Bulls tamed in tie-breaker thriller! Puneri Paltan’s all-round performance takes them to top of points table
ಹಿಂದಿನ ಪಂದ್ಯದಲ್ಲಿ ಯು.ಪಿ. ಯೋಧಾಸ್ ತಂಡದ ವಿರುದ್ಧವೂ ಟೈಬ್ರೇಕರ್ ನಲ್ಲಿ ಬುಲ್ಸ್ ತಂಡದ ವೀರೋಚಿತವಾಗಿ ಸೋಲನುಭವಿಸಿತ್ತು. ಇದರೊಂದಿಗೆ ಹಾಲಿ ಟೂರ್ನಿಯಲ್ಲಿ ಸತತ 2ನೇ ಬಾರಿ ಟೈಬ್ರೇಕರ್ ನಲ್ಲಿ ಬುಲ್ಸ್ ತಂಡ ಸೋಲು ಕಂಡಿತು.
ಎಸ್ ಡಿಎಟಿ ವಿವಿದ್ದೋದೇಶ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೊದಲ ಹಣಾಹಣಿಯಲ್ಲಿ ಬೆಂಗಳೂರು ಬುಲ್ಸ್ ಪರಾಭವಗೊಂಡಿತು. ಇದಕ್ಕೂ ಮುನ್ನ ಪಂದ್ಯದ ಪೂರ್ಣಾವಧಿಯಲ್ಲಿ ಸಮಬಲದ ಹೋರಾಟ ನೀಡಿದ ಕಾರಣ ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳ ಹೈವೋಲ್ಟೇಜ್ ಪಂದ್ಯ 29-29ರಲ್ಲಿ ಸಮಬಲಗೊಂಡಿತು. ಹೀಗಾಗಿ ಪಂದ್ಯ ಟೈಬ್ರೇಕರ್ ಗೆ ಹೊರಳಿತು.
ಬೆಂಗಳೂರು ಬುಲ್ಸ್ ತಂಡದ ಪರ ಅಭಿಷೇಕ್ ಮಲಿಕ್ ಮತ್ತು ಅಲಿರೇಜಾ ಮಿರ್ಜಾಯಿನ್ ತಲಾ 6 ಅಂಕ ಗಳಿಸಿದ ತಂಡದ ಹೋರಾಟಕ್ಕೆ ಸಾಕ್ಷಿಯಾದರೂ ತಂಡಕ್ಕೆ ಪೂರ್ಣ ಅಂಕ ತಂದುಕೊಡುವಲ್ಲಿ ಸಾಧ್ಯವಾಗಲಿಲ್ಲ, ಅತ್ತ ಪುಣೇರಿ ಪಲ್ಟನ್ ತಂಡದ ಪರ ಆದಿತ್ಯ ಶಿಂದೆ (6 ಅಂಕ), ಗುರ್ ದೀಪ್, ಪಂಕಜ್ ಮೋಹಿತೆ ಮತ್ತು ಗೌರವ್ ಖತ್ರಿ ತಲಾ 4 ಅಂಕ ಗಳಿಸಿದರು.
ಪಂದ್ಯದ ಕೊನೆಯ ಐದು ನಿಮಿಷಗಳ ಆಟ ಉಭಯ ತಡಗಳ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಯಿತು.19-23ರಲ್ಲಿದ್ದ ಬುಲ್ಸ್ 22-24ರಲ್ಲಿ ಹಿನ್ನಡೆ ತಗ್ಗಿಸಿತು. ನಂತರ 25-25ರಲ್ಲಿ ಸಮಬಲ ಸಾಧಿಸಿತು. ಇದರೊಂದಿಗೆ ಪಂದ್ಯದಲ್ಲಿ ಮೊದಲ ಬಾರಿ ಬೆಂಗಳೂರು ತಂಡ ಅಂಕಗಳನ್ನು ಸಮಗೊಳಿಸಿತು.
ಸಂಘಟಿತ ಹೋರಾಟದ ಮೂಲಕ 37ನೇ ನಿಮಿಷದಲ್ಲಿ ಪುಣೇರಿ ಪಲ್ಟನ್ ತಂಡವನ್ನು ಆಲೌಟ್ ಮಾಡುವ ಮೂಲಕ ಸೇಡು ತೀರಿಸಿಕೊಂಡ ಬೆಂಗಳೂರು ತಂಡ ಪಂದ್ಯದಲ್ಲಿ ಮೊದಲ ಬಾರಿ 28-25ರಲ್ಲಿ ಮುನ್ನಡೆ ಸಾಧಿಸಿ ಅಭಿಮಾನಿಗಳ ಹರ್ಷೋದ್ಗಾರವನ್ನು ತೀವ್ರಗೊಳಿಸಿತು.
ಇದಕ್ಕೂ ಮುನ್ನ ಹಿನ್ನಡೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಬೆಂಗಳೂರು ಬುಲ್ಸ್ ತಂಡ ಎರಡನೇ ಅವಧಿಯನ್ನು ಆರಂಭಿಸಿತು. ಅಂತೆಯೇ ಪುಣೇರಿ ಪಲ್ಟನ್ ಕೂಡ ಮುನ್ನಡೆ ವಿಸ್ತರಿಸುವ ಯೋಜನೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿತು
27ನೇ ನಿಮಿಷಕ್ಕೆ ತಂಡದ ಹಿನ್ನಡೆಯನ್ನು 17-19ಕ್ಕೆ ತಗ್ಗಿಸಿದ ಬುಲ್ಸ್, ನಂತರ 18-19ರಲ್ಲಿ ಪ್ರಬಲವಾಗಿ ಪುಟಿದೆದ್ದಿತ್ತು. . ಆದರೆ ಉಭಯ ತಂಡಗಳು ರಕ್ಷಣಾತ್ಮಕ ಆಟಕ್ಕೆ ಆದ್ಯತೆ ನೀಡಿದ್ದು, ರೇಡರ್ ಗಳು ಅಂಕಗಳನ್ನು ಕಲೆಹಾಕಲು ಹೆಣಗಾಡಿದರು. 30 ನಿಮಿಷಗಳ ಅಂತ್ಯಕ್ಕೆ ಬುಲ್ಸ್ ತಂಡ 19-23ರಲ್ಲಿ ಹೋರಾಟ ನೀಡಿತು.
ಸಮನ್ವಯತೆ ಕಾಯ್ದುಕೊಳ್ಳಲು ವಿಫಲಗೊಂಡ ಬೆಂಗಳೂರು ಬುಲ್ಸ್ ತಂಡ ಪಂದ್ಯದ ಮೊದಲಾರ್ಧಕ್ಕೆ (17-13) 4 ಅಂಕಗಳಿಂದ ಹಿನ್ನಡೆ ಅನುಭವಿಸಿತು. ಆದಿತ್ಯ ಶಿಂದೆ 5 ಅಂಕ ಗಳಿಸಿದರಲ್ಲದೆ, ಪುಣೇರಿ ಪಲ್ಟನ್ ತಂಡದ ಎಲ್ಲರೂ ಖಾತೆ ತೆರೆದಿದ್ದು, ಬುಲ್ಸ್ ಮೇಲಿನ ಒತ್ತಡವನ್ನು ಹೆಚ್ಚು ಮಾಡಿತು.
ಆದರೆ ಮೊದಲಾರ್ಧ ಮುಕ್ತಾಯಗೊಂಡರೂ ನಾಯಕ ಯೋಗೇಶ್ ಖಾತೆ ತೆರೆಯಲು ವಿಫಲಗೊಂಡಿದ್ದು, ಬುಲ್ಸ್ ತಂಡದ ಹಿನ್ನಡೆಗೆ ಕಾರಣವಾಯಿತು. ಆಲ್ ರೌಂಡರ್ ಅಲಿರೆಜಾ ಮಿರ್ಜಾಯಿನ್ ಕೇವಲ 5 ಅಂಕಗಳಿಗೆ ಸೀಮಿತಗೊಂಡಿದ್ದು, ಎದುರಾಳಿ ಮುನ್ನಡೆ ಗಳಿಸಲು ಸಾಧ್ಯವಾಯಿತು.
ಮೊದಲ ಹತ್ತು ನಿಮಿಷಗಳ ಆಟದಲ್ಲಿ ಉಭಯ ತಂಡಗಳ ಪ್ರಬಲ ಪೈಪೋಟಿ ನಡೆಸಿದವು. ಬೆಂಗಳೂರು ತಂಡ 5-9 ರಲ್ಲಿ ಹಿನ್ನಡೆ ಕಂಡರೂ 9-12ರಲ್ಲಿ ಪುಟಿದೇಳುವ ಮೂಲಕ ಪುಣೇರಿ ಪಲ್ಟನ್ ತಂಡಕ್ಕೆ ದಿಟ್ಟ ತಿರುಗೇಟು ನೀಡಿತು.
ಇದಕ್ಕೂ ಬೆಂಗಳೂರು ಬುಲ್ಸ್ ತಂಡ ಹಿಂದಿನ ವೀರೋಚಿತ ಸೋಲಿನಿಂದ ಹೊರಬರುವ ನಿಟ್ಟಿನಲ್ಲಿ ಅಖಾಡಕ್ಕಿಳಿಯಿತು.
ಆದರೆ ಸಂಘಟಿತ ಹೋರಾಟ ನೀಡಲು ಎಡವಿತು. ಇದರ ಸಂಪೂರ್ಣ ಲಾಭ ಪಡೆದ ಪುಣೇರಿ ಪಲ್ಟನ್ ಬುಲ್ಸ್ ಮೇಲೆ ಸವಾರಿ ಮಾಡುವ ಯತ್ನ ಮಾಡಿತು. ಇದಕ್ಕೆ ಪೂರಕವೆಂಬಂತೆ 7 ನೇ ನಿಮಿಷದಲ್ಲಿ ಬುಲ್ಸ್ ತಂಡವನ್ನು ಖಾಲಿ ಮಾಡಿಸಿದ ಪುಣೇರಿ 9-5ರಲ್ಲಿ ಮುನ್ನಡೆ ಸಾಧಿಸಿತು. ರೇಡಿಂಗ್ ಮಾಡಿದ ಆಕಾಶ್ ಶಿಂದೆಯನ್ನು ಟ್ಯಾಕಲ್ ಮಾಡಿದ ಗುರ್ ದೀಪ್ ಪುಣೇರಿ ಪಲ್ಟನ್ ಗೆ 2 ಆಲೌಟ್ ಪಾಯಿಂಟ್ಸ್ ತಂದುಕೊಟ್ಟರು.
ಬೆಂಗಳೂರು ಬುಲ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಅಕ್ಟೋಬರ್ 5ರಂದು ತಮಿಳ್ ತಲೈವಾಸ್ ತಂಡವನ್ನು ಎದುರಿಸಲಿದೆ.

