Sunday, May 26, 2024

20 ಎಸೆತಗಳಲ್ಲಿ ಶತಕ ಸಿಡಿಸಿದ ಸಾಹ… ಕ್ರಿಸ್ ಗೇಲ್ ದಾಖಲೆ ಪೀಸ್ ಪೀಸ್!

ಕೋಲ್ಕತಾ: ಟಿ20 ಕ್ರಿಕೆಟ್‌ನಲ್ಲಿ ಅತೀ ವೇಗದ ಶತಕದ ದಾಖಲೆ ಇರುವುದು ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಅವರ ಹೆಸರಲ್ಲಿ. ಗೇಲ್ 30 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಆದರೆ ಆ ದಾಖಲೆ ಈಗ ಟೀಮ್ ಇಂಡಿಯಾ ಟೆಸ್ಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಾಹ ಅವರ ಬ್ಯಾಟಿಂಗ್ ಅರ್ಭಟಕ್ಕೆ ಪೀಸ್ ಪೀಸ್ ಆಗಿದೆ.
ಬಂಗಾಳದ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಾಹ ಕೋಲ್ಕತಾದಲ್ಲಿ ಶನಿವಾರ ನಡೆದ ಕ್ಲಬ್ ಪಂದ್ಯವೊಂದರಲ್ಲಿ ಕೇವಲ 20 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಜೆಸಿ ಮುಖರ್ಜಿ ಟ್ರೋಫಿ ಟಿ20 ಟೂರ್ನಿಯಲ್ಲಿ ಈ ವಿಶ್ವದಾಖಲೆ ದಾಖಲಾಗಿದೆ. ಪ್ರತಿಷ್ಠಿತ ಮೋಹನ್ ಬಾಗನ್ ತಂಡದ ಪರ ಬ್ಯಾಟ್ ಬೀಸಿದ ಸಾಹ, ಬೆಂಗಾಲ್ ನಾಗ್ಪುರ್ ರೈಲ್ವೇಸ್ ತಂಡದ ವಿರುದ್ಧ ಈ ಸಾಧನೆ ಮಾಡಿದರು.
ಸಿಡಿಲಬ್ಬರದ ಬ್ಯಾಟಿಂಗ್ ಸಂದರ್ಭದಲ್ಲಿ 14 ಸಿಕ್ಸರ್‌ಗಳನ್ನು ಸಿಡಿಸಿದ ಸಾಹ, 4 ಬೌಂಡರಿಗಳನ್ನೂ ಬಾರಿಸಿ 510ರ ಅಮೋಘ ಸರಾಸರಿಯಲ್ಲಿ ಬ್ಯಾಟ್ ಬೀಸಿದರು. ಅಲ್ಲದೆ ಮೀಡಿಯಂ ಪೇಸರ್ ಅಮಾನ್ ಪ್ರಸಾದ್ ಅವರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದರು. ಅದಕ್ಕೂ ಹಿಂದಿನ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದ ಸಾಹ, ಸತತ ಒಂಬತ್ತು ಸಿಕ್ಸರ್‌ಗಳನ್ನು ಸಿಡಿಸಿದ್ದು ವಿಶೇಷವಾಗಿತ್ತು.
ಬೆಂಗಾಲ್ ನಾಗ್ಪುರ್ ರೈಲ್ವೇಸ್ ತಂಡ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್‌ಗಳ ಉತ್ತಮ ಮೊತ್ತವನ್ನೇ ಕಲೆ ಹಾಕಿತ್ತು. ಆದರೆ ಇದು ಮೋಹನ್ ಬಾಗನ್‌ಗೆ ಸವಾಲೇ ಆಗಲಿಲ್ಲ. 152 ರನ್‌ಗಳ ಗುರಿಯನ್ನು ಮೋಹನ್ ಬಾಗನ್ ಕ್ಲಬ್ ಕೇವಲ 7 ಓವರ್‌ಗಳಲ್ಲಿ ಮೆಟ್ಟಿ ನಿಂತಿತು.
ಸಾಹ ಇನ್ನಿಂಗ್ಸ್ ವಿವರ
ಎಸೆತ 20
ರನ್ ಅಜೇಯ 102
ಬೌಂಡರಿ 04
ಸಿಕ್ಸರ್ 14
ಸ್ಟ್ರೈಕ್‌ರೇಟ್ 510

Related Articles