Wednesday, November 6, 2024

ಸೀರೆಯುಟ್ಟು ಒಲಿಂಪಿಕ್ಸ್‌ ಆಡಿದ್ದ ಮೆಹರ್‌ಬಾಯಿ ಟಾಟಾ!

ಉಡುಪಿ: ಭಾರತದ ಕ್ರೀಡೆಗೆ ಟಾಟಾ ಕುಟುಂಬದ ಕೊಡುಗೆ ಅಪಾರವಾದುದು. ನಮ್ಮ ದೇಶದ ಕಲೆ, ಸಂಸ್ಕೃತಿ ಹಾಗೂ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಬೆಳಗಿದ ಟಾಟಾ ಕುಟುಂಬವನ್ನು ಈ ದೇಶದ ಪ್ರತಿಯೊಬ್ಬರೂ ಸ್ಮರಿಸಬೇಕು. ಒಲಿಂಪಿಕ್ಸ್‌ನಲ್ಲಿ ಸೀರೆಯುಟ್ಟು ಟೆನಿಸ್‌ ಆಡಿ, ಭಾರತದ ಸಂಸ್ಕೃತಿ, ಸಂಸ್ಕಾರವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಟಾಟಾ ಕುಟುಂಬಕ್ಕೆ ಸಲ್ಲುತ್ತದೆ. ಮೆಹರ್‌ಬಾಯಿ ಟಾಟಾ 100 ವರ್ಷಗಳ ಹಿಂದೆ (1924) ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸೀರೆಯುಟ್ಟು ಟೆನಿಸ್‌ ಆಡಿ ಇತಿಹಾಸ ಬರೆದಿದ್ದರು. 100 years ago Meherbai Tata participated at Paris Olympics with Saree.

ಬೆಂಗಳೂರಿನ ಬಿಷಪ್‌ ಕಾಟನ್‌ ಶಾಲೆಯಲ್ಲಿ ಓದಿದ್ದ ಮೆಹರ್‌ಬಾಯಿ ಅವರ ತಂದೆ ಹಾರ್ಮಸ್ಜಿ ಜೆ ಭಾಭಾ ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿದ್ದರು. 1898ರಲ್ಲಿ ಜೆಮ್ಷೆಡ್ಜಿ ಎನ್‌. ಟಾಟಾ ಅವರ ಹಿರಿಯ ಪುತ್ರ ದೊರಾಬ್ಜಿ ಟಾಟಾ ಅವರೊಂದಿಗೆ ಮೆಹರ್‌ಬಾಯಿ ಟಾಟಾ ಅವರ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ದೊರಾಬ್ಜಿ ಅವರು ವಜ್ರದ ಸರವನ್ನು ಮೆಹರ್‌ಬಾಯಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ಟಿಸ್ಕೋ) ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಮೆಹರ್‌ಬಾಯಿ ಅವರು ಆ ವಜ್ರದ ಸರವನ್ನು ಅಡವಿಟ್ಟು ನೆರವಾಗಿದ್ದರು.

ಮೆಹರ್‌ಬಾಯಿ ಟಾಟಾ ಅವರಿಗೆ ಟೆನಿಸ್‌ನಲ್ಲಿ ಅಪಾರ ಆಸಕ್ತಿಯ ಪತಿ ದೊರಾಬ್ಜಿ ಅವರ ನೆರವಿನಿಂದ ಹಲವಾರು ಟೂರ್ನಿಗಳಲ್ಲಿ ಅವರು ಪಾಲ್ಗೊಂಡು 60ಕ್ಕೂ ಹೆಚ್ಚು ಪ್ರಶಸ್ತಿ ಗೆದ್ದಿದ್ದರು. ವಿಂಬಲ್ಡನ್‌ ಸೇರಿದಂತೆ ಹಲವಾರು ಟೂರ್ನಿಗಳಲ್ಲಿ ಮೆಹರ್‌ಬಾಯಿ ಹಾಗೂ ದೊರಾಬ್ಜಿ ಪಾಲ್ಗೊಂಡಿದ್ದರು. ಮೆಹರ್‌ಬಾಯಿ ಟಾಟಾ ಅವರ ಆಟಕ್ಕಿಂತ ಅವರ ಉಡುಪನ್ನು ನೋಡಲು ಪ್ರೇಕ್ಷಕರು ಜಮಾಯಿಸುತ್ತಿದ್ದರು. ಅವರು ಸೀರೆಯುಟ್ಟು ಆಡುತ್ತಿರುವುದು ವಿಶೇಷವಾಗಿತ್ತು. “ಎಲ್ಲಿಯವರೆಗೆ ಮಹಿಳೆಗೆ ಸ್ವಾತಂತ್ರ್ಯ ಸಿಗುವುದಿಲ್ಲವೋ ಅಲ್ಲಿಯ ತನಕ ಭಾರತ ಶ್ರೇಷ್ಠ ರಾಷ್ಟ್ರ ಎಂದೆನಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ಮೆಹರ್‌ಬಾಯಿ ಹೇಳಿದ್ದರು.

ಮಹಿಳೆಯರಿಗೆ ಶಿಕ್ಷಣ, ಬಾಲ್ಯ ವಿವಾಹವನ್ನು ತಡೆಗಟ್ಟುವಲ್ಲಿ ಮೆಹರ್‌ಬಾಯಿ ಅವರ ಕೊಡುಗೆ ಅಪಾರವಾಗಿತ್ತು. ರೆಡ್‌ ಕ್ರಾಸ್‌ ಸಂಸ್ಥೆಯ ಸದಸ್ಯೆಯೂ ಆಗಿದ್ದ ಮೆಹರ್‌ಬಾಯಿ ಅವರನ್ನು ಐದನೇ ಕಿಂಗ್‌ ಜಾರ್ಜ್‌ ಕಮಾಂಡರ್‌ ಆಫ್‌ ದಿ ಬ್ರಿಟಿಷ್‌ ಎಂಪಾಯರ್‌,” ಎಂದು ಗೌರವಿಸಿದ್ದರು. ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮೆಹರ್‌ಬಾಯಿ ಟಾಟಾ 1931, ಜೂನ್‌ 18ರಂದು ನಮ್ಮನ್ನಗಲಿದರು. 1932ರಲ್ಲಿ ಮೆಹರ್‌ಬಾಯಿ ಟಾಟಾ ಅವರ ನೆನಪಿಗಾಗಿ ದೊರಾಬ್ಜಿ ಟಾಟಾ ಅವರು, ಲೇಡಿ ಟಾಟಾ ಮೆಮೋರಿಯಲ್‌ ಟ್ರಸ್ಟ್‌ ಸ್ಥಾಪಿಸಿದರು. ರಕ್ತ ಕ್ಯಾನ್ಸರ್‌ ಕುರಿತು ಅಧ್ಯಯನ ಮಾಡುವವರಿಗೆ ಈ ಟ್ರಸ್ಟ್‌ ಆರ್ಥಿಕ ನೆರವನ್ನು ನೀಡುತ್ತದೆ. ಸರ್‌ ದೊರಾಬ್ಜಿ ಟಾಟಾ ನಂತರ ಲೇಡಿ ಮೆಹರ್‌ಬಾಯಿ ಡಿ ಟಾಟಾ ಎಜುಕೇಷನ್‌ ಟ್ರಸ್ಟ್‌ ಸ್ಥಾಪಿಸಿದರು. ಭಾರತದ ಯುವ ಮಹಿಳೆಯರಿಗೆ ಉನ್ನತ ಶಿಕ್ಷಣ ಪಡೆಯಲು ಈ ಟ್ರಸ್ಟ್‌ ನೆರವಾಗುತ್ತಿದೆ.

Information: TATA TRUST

Related Articles