ಫುಟ್ಬಾಲ್: ವಿರಾಟ್ ಕೊಹ್ಲಿಗೆ ಶಾಕ್, ಚೆನ್ನೈನಲ್ಲಿ ಧೋನಿ ಧಮಾಕ; ಫೈನಲ್‌ಗೆ ಚೆನ್ನೈಯಿನ್ ಎಫ್‌ಸಿ
ಚೆನ್ನೈ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಟೂರ್ನಿಯ 2ನೇ ತಂಡವಾಗಿ ಫೈನಲ್ ಪ್ರವೇಶಿಸಿದೆ. ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 2ನೇ ಸೆಮಿಫೈನಲ್‌ನ ದ್ವಿತೀಯ ಲೆಗ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಮಾಲೀಕತ್ವದ ಚೆನ್ನೈಯಿನ್ ಎಫ್‌ಸಿ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಎಫ್‌ಸಿ ಗೋವಾ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು.

ಶನಿವಾರ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಎಫ್‌ಸಿ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಆರಂಭದಲ್ಲಿ ಅತ್ಯಂತ ಆತ್ಮವಿಶ್ವಾಸದ ಆಟವಾಡಿ ಹಲವು ಬಾರಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದ ಗೋವಾ ಎಫ್‌ಸಿಯ ಡಿಫೆನ್ಸ್ ವಿಭಾಗ ಬರಬರುತ್ತ ಶಕ್ತಿಗುಂದತೊಡಗಿತು. ಪರಿಣಾಮ ಚೆನ್ನೈಯಿನ್ 26 ಮತ್ತು 29ನೇ ನಿಮಿಷಗಳಲ್ಲಿ ಗೋಲು ಗಳಿಸಿ ಫೈನಲ್ ತಲುಪಲು ಅಗತ್ಯವಿರುವ ವೇದಿಕೆ ಸೃಷ್ಟಿ ಮಾಡಿಕೊಂಡಿತು. 26ನೇ ನಿಮಿಷದಲ್ಲಿ ಜೆಜೆ ಸುಲಭವಾಗಿ ಚೆಂಡನ್ನು ನೆಟ್‌ಗೆ ತಲುಪಿದರು. ಹೆಡರ್ ಮೂಲಕ ದಾಖಲಾದ ಈ ಗೋಲಿನಿಂದ ಚೆನ್ನೈಯಿನ್ ತಂಡ 1-0 ಗೋಲಿನಿಂದ ಮುನ್ನಡೆ ಕಂಡಿತು.
ಮೊದಲ ಗೋಲಿನಿಂದ ಆಘಾತದಿಂದ ಗೋವಾ ಚೇತರಿಸಿಕೊಳ್ಳುವಷ್ಟರಲ್ಲಿಯೇ ಚೆನ್ನೈ ತಂಡ ಎರಡನೇ ಗೋಲು ಗಳಿಸಿತು. 29ನೇ ನಿಮಿಷದಲ್ಲಿ ಧನಪಾಲ್ ಗಣೇಶ್ ಗಳಿಸಿದ ಗೋಲಿನಿಂದ ಚೆನ್ನೈ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು.