Thursday, September 12, 2024

ವಿಶ್ವ ಮೋಟೋಕ್ರಾಸ್‌ನಲ್ಲಿ ೧೩ರ ಪೋರ ಯುವರಾಜ್

ಪುಣೆಯ ೧೩ ವರ್ಷದ ಬಾಲಕ ಯುವರಾಜ್ ಕೊಂಡೆ ದೇಶಮುಖ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವ ಮೋಟೋಕ್ರಾಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ರೈಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ಇತರ ಎಲ್ಲ ಕ್ರೀಡೆಯನ್ನು ಮುಳುಗಿಸಿತು ಎಂಬ ಅಪವಾದವಿದೆ. ಆದರೆ ಹಾಕಿ, ಬ್ಯಾಡ್ಮಿಂಟನ್, ಶೂಟಿಂಗ್, ವೇಟ್‌ಲಿಫ್ಟಿಂಗ್, ಟೆನಿಸ್ ಮೊದಲಾದ ಕ್ರೀಡೆಗಳು ಜಾಗತಿಕ ಮಟ್ಟದಲ್ಲಿ ಭಾರತದ  ಕೀರ್ತಿ ಪತಾಕೆ ಹಾರುವಂತೆ ಮಾಡಿವೆ. ರ್ಯಾಲಿಯಲ್ಲಿಯೂ ನಾವು ಹಿಂದೆ ಬಿದ್ದಿಲ್ಲ. ಸಿಎಸ್ ಸಂತೋಷ್ ಹಾಗೂ ಅರವಿಂದ್ ಕೆಪಿ ಅವರಂಥ ಜಾಗತಿಕ ರ್ಯಾಲಿಪಟುಗಳು ಡಕಾರ್ ರ್ಯಾಲಿಯಲ್ಲಿ ಸ್ಪರ್ಧಿಸಿ ಜಾಗತಿಕ ಮಟ್ಟದಲ್ಲಿ ಮಿಂಚಿದ್ದನ್ನು ವರದಿ ಮಾಡಲು ನಮಗೆ ಸಮಯವೇ ಇರಲಿಲ್ಲ. ಅಂತಾರಾಷ್ಟ್ರೀಯ ರ್ಯಾಲಿಪಟುಗಳಾದ ಸುಜಿತ್ ಕುಮಾರ್, ಚಿದಾನಂದ ಹಾಗೂ ಶ್ರೀಕಾಂತ್ ಈಗಲೂ ತಮ್ಮನ್ನು ರ್ಯಾಲಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ದಿಲ್ಲದೆ ಇವರು ರ್ಯಾಲಿಯಲ್ಲಿ ಗೆದ್ದು ಹೆಸರು ಮಾಡುತ್ತಿದ್ದಾರೆ. ಮೋಟೋಕ್ರಾಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ. ಯುವರಾಜ್ ಕೊಂಡೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವ ಜೂನಿಯರ್‌ಮೋಟೋ ಕ್ರಾಸ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ. ಏಷ್ಯಾ ರ್ಯಾಲಿ ಫೆಡರೇಷನ್‌ನಿಂದ ಯುವರಾಜ್‌ಗೆ ಅಭಿನಂದನೆಯ ಸುರಿಮಳೆ ಬಂದಿದೆ. ಆದರೂ ಆತನ ಸಾಧನೆಯ ಬಗ್ಗೆ ಎರಡಕ್ಷರ ಬರೆಯಲು ನಮಗೆ ಸಮಯವೂ ಇಲ್ಲ, ಪ್ರಕಟಿಸಲು ಸ್ಥಳವೂ ಇಲ್ಲ. ಸಾಹಸ ಕ್ರೀಡೆಗೆ ಸರಕಾರ ಕೂಡ ಹೆಚ್ಚಿನ ಪ್ರೋತ್ಸಾಹ ನೀಡದಿರುವುದು ಬೇಸರದ ಸಂಗತಿ.
ಮೂರು ವರ್ಷ ಆರು ತಿಂಗಳು!
ಯುವರಾಜ್ ರ್ಯಾಲಿ ಬೈಕ್ ಏರಿದಾಗ ಆತನಿಗೆ ಇನ್ನೂ ಮೂರೂವರೆ ವರ್ಷ. ಮಗುವಿಗೆ ಪುಟ್ಟ ಬೈಕೊಂದನ್ನು ಕೊಡಿಸಿದಾಗ ಆತ ಅದರಲ್ಲಿ ಕಸರತ್ತು ಮಾಡುವುದನ್ನು ಕಂಡು ಹೆತ್ತವರಿಗೆ ಅಚ್ಚರಿಯಾಯಿತು. ಅಂದಿನಿಂದ ಯುವರಾಜ್‌ಗೆ ಮನೆಯ ರ್ಯಾಲಿಯ ಟ್ರ್ಯಾಕ್ ಆಯಿತು. ೯ನೇ ವಯಸ್ಸಿನಲ್ಲೇ ಯುವರಾಜ್ ವೃತ್ತಿಪರ ರ್ಯಾಲಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ದುಬೈಯಲ್ಲಿ ಮಿಂಚು
೨೦೧೪ರಲ್ಲಿ ದುಬೈ ಮೋಟೋಕ್ರಾಸ್ ಚಾಂಪಿಯನ್‌ಷಿಪ್ ಗೆಲ್ಲುವ ಮೂಲಕ ಯುವರಾಜ್ ಭಾರತದ ಮೋಟೋ ಸ್ಪೋರ್ಟ್ಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು. ಈ ಸಾಧನೆ ಮಾಡಿದ ದೇಶದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ೨೦೧೭ರಲ್ಲಿ ಎಂಆರ್‌ಎಫ್  ಇಂಡಿಯಾ ಸೂಪರ್‌ಕ್ರಾಸ್ ಚಾಂಪಿಯನ್‌ಷಿಪ್ ಗೆದ್ದ ಯುವರಾಜ್, ಅಮೆರಿಕದಲ್ಲಿ ನಡೆದ ಎಎಂಎ ರೇಸ್‌ನಲ್ಲೂ ಅಗ್ರ ಸ್ಥಾನ ಗಳಿಸಿದರು. ಕಳೆದ ವರ್ಷ ನಡೆದ ಎಫ್ಐಎಂ  ಏಷ್ಯಾ ಮೋಟೋಕ್ರಾಸ್ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ಯುವರಾಜ್ ಹೊಸ  ಇತಿಹಾಸ ಬರೆದರು. ಪೋಡಿಯಂ ಫಿನಿಶ್ ಮಾಡಿದ ಭಾರತದ ಮೊದಲ ಸ್ಪರ್ಧಿ ಎನಿಸಿದರು.  ವಿಶ್ವ ಎಂಎಕ್ಸ್ ಜೂನಿಯರ್ಸ್ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಮೊದಲಿಗ ಎಂಬ ಹೆಗ್ಗಳಿಕೆಗೂ ಯುವರಾಜ್ ಪಾತ್ರರಾಗಿದ್ದಾರೆ. ಇದು ಜೂನಿಯರ್ ವಿಭಾಗದ  ಎಫ್೧ಗೆ ಸಮಾನವಾದ ರೇಸ್ ಆಗಿರುತ್ತದೆ.
ಮೂಳೆ ಮೂರಿದರೂ ಬಿಡದ ಛಲ 
ನಿರಂತರವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಯುವರಾಜ್ ಹಲವು ಬಾರಿ ಗಂಭೀರ ಗಾಯಗಳಿಗೆ ತುತ್ತಾಗಿದ್ದಾರೆ. ಜೀವಕ್ಕೆ ಅಪಾಯವೆನಿಸಿರುವ ಗಾಯಗಳಿಗೂ ತುತ್ತಾಗಿದ್ದಾರೆ. ಆದರೆ ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಮಿಂಚಬೇಕೆನ್ನುವ ಛಲ ಅವರನ್ನು ಇಲ್ಲಿಯವರೆಗೆ ಕರೆ ತಂದಿದೆ. ದುಬೈಯಲ್ಲಿ ತರಬೇತಿ ಪಡೆಯುತ್ತಿರುವಾಗ ತೊಡೆ ಮೂಳೆ ಮುರಿತಕ್ಕೊಳಗಾದ ಯುವರಾಜ್ ಮೋಟಾರ್ ಸ್ಪೋರ್ಟ್ಸ್‌ನಿಂದ ಹೊರಗುಳಿಯುವ ಲಕ್ಷಣ ತೋರಿದ್ದರು. ಆದರೆ ನಿರಂತರ ಶ್ರಮ, ಮತ್ತೆ ಟ್ರ್ಯಾಕ್‌ಗೆ ಇಳಿಯುತ್ತೇನೆಂಬ ಹಂಬಲ ಅವರನ್ನು ಮೋಟಾರ್ ಸ್ಪೋಟ್ಸ್‌ನಲ್ಲಿ ತೊಡಗುವಂತೆ ಮಾಡಿತು.
ಹಲವಾರು ರೇಸ್‌ಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲುತ್ತಿರುವ ಯುವರಾಜ್ ಅವರ ಸಾಧ‘ನೆ ಎಂಟು ಬಾರಿ ರಾಷ್ಟ್ರೀಯ ಚಾಂಪಿಯನ್ ಅಜ್ಮೆರಾ ರೇಸಿಂಗ್‌ನ ರಸ್ಟೋಮ್ ಪಟೇಲ್ ಅವರ ಗಮನಕ್ಕೆ ಬಂತು. ಅಜ್ಮೆರಾ ಐಲ್ಯಾಂಜ್ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ಅತುಲ್‌ಅಜ್ಮೆರಾ ತಮ್ಮ ಅಕಾಡೆಮಿಯಲ್ಲಿ ಯುವರಾಜ್‌ಗೆ ತರಬೇತಿ ನೀಡಲು ಅವಕಾಶ ಕಲ್ಪಿಸಿದರಲ್ಲದೆ, ಪ್ರಾಯೋಜಕತ್ವವನ್ನೂ ನೀಡಿದರು. ಪ್ರತಿಯೊಂದು ರ್ಯಾಲಿಯಲ್ಲೂ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಿದರು. ಮುಂಬೈಯಲ್ಲಿರುವ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಏಜೆನ್ಸಿ ಆ್ಯಡ್‌ಸ್ಟೋ ಯುವರಾಜ್ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿತ್ತು. ಈ ಏಜೆನ್ಸಿಯೂ ಯುವರಾಜ್‌ಗೆ ಎಲ್ಲ ರೀತಿಯ ನೆರವನ್ನು ನೀಡುತ್ತಿದೆ.
ಪ್ರತಿಭೆ  ಗುರುತಿಸಿದ ತಾಯಿ
ಪ್ರತಿಯೊಬ್ಬ ಮಗುವಿನ ಭವಿಷ್ಯದಲ್ಲಿ ಹೆತ್ತವರು ಪ್ರಮುಖ ಪಾತ್ರವಹಿಸುತ್ತಾರೆ. ಅದರಲ್ಲೂ ತಾಯಿಯ ಪ್ರಭಾವ ಹಾಗೂ ಆರೈಕೆ ಪ್ರ‘ಧಾನವಾಗಿರುತ್ತದೆ. ಯುವರಾಜ್ ಅವರ ಬದುಕಿನಲ್ಲೂ ತಾಯಿ ಸ್ವರೂಪ ಕೊಂಡೆ ದೇಶಮುಖ್ ಪ್ರಮುಖ ಪಾತ್ರವಹಿಸಿದರು. ಚಿಕ್ಕಂದಿನಲ್ಲೇ ಯುವರಾಜ್ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸುವಲ್ಲಿ ಯಶಸ್ವಿಯಾದರು. ಮೂರು ವರ್ಷದ ಯುವರಾಜ್ ಸೈಕಲ್‌ನಲ್ಲಿ ಕಸರತ್ತು ಮಾಡುವುದನ್ನು ತಾಯಿ ಗಮನಿಸಿದರು. ಪುಟ್ಟ ಸೈಕಲ್‌ನಲ್ಲಿ ಪುಟ್ಟ ಬಾಲಕ ಯುವರಾಜ್ ಮಾಡುತ್ತಿರುವ ಕಸರತ್ತು ತಾಯಿಗೆ ವಿಶೇಷವಾಗಿ ಕಂಡಿತು. ತಂದೆ ಸಂದೀಪ್ ಕೂಡ ಮೋಟಾರ್ ರೇಸ್‌ನಲ್ಲಿ ತನ್ನನ್ನು ತೊಡಗಿಸಿಕೊಂಡವರು. ಅವರಿಂದ ಮಗನಲ್ಲಿ ಸಹಜವಾಗಿಯೇ ಕಸರತ್ತು ಮಾಡುವ ಗುಣ ಬಂದಿತ್ತು. ತಂದೆಗೆ ಹೆತ್ತವರು ಸರಿಯಾದ ಪ್ರೋತ್ಸಾಹ ನೀಡದ ಕಾರಣ ಅವರು ಮೋಟಾರ್ ಸ್ಪೋರ್ಟ್ಸ್‌ನಲ್ಲಿ ತಮ್ಮನ್ನು ಮುಂದುವರಿಸಿಕೊಂಡು ಹೋಗಲಿಲ್ಲ.
ತಮ್ಮ ಹೆತ್ತವರು ತೋರಿದ ನಿರ್ಲಕ್ಷ್ಯದಿಂದಾಗಿ ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಮುಂದುವರಿಯಲು ಆಗಲಿಲ್ಲ ಎಂಬುದನ್ನರಿತ ಸಂದೀಪ್, ಮಗನಿಗೂ ಅದೇ ರೀತಿಯ ಸಮಸ್ಯೆ ಎದುರಾಗಬಾರದು ಎಂದು ಚಿಕ್ಕಂದಿನಲ್ಲೇ ಪ್ರೋತ್ಸಾಹ ನೀಡಲಾರಂಭಿಸಿದರು. ಅವರ ಪ್ರೋತ್ಸಾಹದ ಫಲವಾಗಿ ಇಂದು ಯುವರಾಜ್ ಜಾಗತಿಕ ಮಟ್ಟದಲ್ಲಿ ಯುವ ಮೋಟೋಸ್ಪೋರ್ಟ್ಸ್ ಪಟುವಾಗಿ ಬೆಳೆದು ನಿಂತಿದ್ದಾರೆ.
ಅಜ್ಮಿರಾ ಐಲ್ಯಾಂಡ್ ಮೋಟೋಕ್ರಾಸ್ ಚಾಂಪಿಯನ್‌ಷಿಪ್‌ನಲ್ಲಿ ಯುವರಾಜ್ ಹತ್ತನೇ ವಯಸ್ಸಿನಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದು ಅಚ್ಚರಿ ಮೂಡಿಸಿದರು. ಭವಿಷ್ಯ ದಲ್ಲಿ ಈತ ಉತ್ತಮ ಮೋಟೋಕ್ರಾಸ್ ಪಟುವಾಗಲಿದ್ದಾರೆ ಎಂಬುದನ್ನು ಅಂದೇ ತಜ್ಞ ರ್ಯಾಲಿಪಟುಗಳು ಭವಿಷ್ಯ ನುಡಿದಿದ್ದದರು. ಅದು ಹಾಗೆಯೇ ಆಯಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ತರಬೇತಿ ಪಡೆಯುವುದಕ್ಕಾಗಿ ಯುವರಾಜ್ ಅವನ್ನು ದೇಶಮುಖ್ ಕುಟುಂಬ ಜಾರ್ಜಿಯಾಕ್ಕೆ ಕಳುಹಿಸಿತು. ಅಲ್ಲಿ ಉತ್ತಮ ರೀತಿಯಲ್ಲಿ ಪಳಗಿದ ಯುವರಾಜ್ ಅಮೆರಿಕನ್ ಮೋಟಾರ್‌ಸೈಕ್ಲಿಸ್ಟ್ ಅಸೋಸಿಯೇಷನ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಜಯ ಗಳಿಸಿದರು. ದುಬೈಯಲ್ಲಿ ನಡೆದ ಡಿಎಂಎಕ್ಸ್ ಚಾಂಪಿಯನ್‌ಷಿಪ್‌ನಲ್ಲೂ ಯಶಸ್ಸು ಕಾಣುವ ಮೂಲಕ ಯುವರಾಜ್ ‘ಭವಿಷ್ಯದಲ್ಲಿ ತಾನೊಬ್ಬ ಉತ್ತಮ ಮೋಟಾರ್ ಸೈಕ್ಲಿಸ್ಟ್ ಆಗುವುದನ್ನು ಸ್ಪಷ್ಟಪಡಿಸಿದರು.
ಕೋಚ್‌ಗೆ ಮೆಚ್ಚುಗೆ
ಐ ಲ್ಯಾಂಡ್ ರೇಸಿಂಗ್‌ನಲ್ಲಿ ತರಬೇತಿ ನೀಡುತ್ತಿರುವ ಎಂಟು ಬಾರಿ ರಾಷ್ಟ್ರೀಯ ಚಾಂಪಿಯನ್ ರಸ್ಟಮ್ ಪಟೇಲ್ ಯುವರಾಜ್ ಅವರಲ್ಲಿರುವ ಪ್ರತಿಭೆಯನ್ನು ನೋಡಿ ಬೆಚ್ಚಿದರು. ‘ನಿಜ ಹೇಳಬೇಕೆಂದರೆ ಚಿಕ್ಕ ವಯಸ್ಸಿನಲ್ಲಿ ಮೋಟಾರ್ ರೇಸ್ ಬಗ್ಗೆ ಇಷ್ಟು ಅನುಭವ ಆಸಕ್ತಿ ಹೊಂದಿರುವ ಮಗುವನ್ನು ನಾನು ಇದುವರೆಗೂ ನೋಡಿಲ್ಲ, ಮುಂದೆ ನೋಡುತ್ತೇನೆಂಬ ‘ಭರವಸೆಯೂ ಇಲ್ಲ. ಯುವರಾಜ್  ಅವರಲ್ಲಿ ವಯಸ್ಸಿಗೂ ಮೀರಿದ ಪ್ರತಿಭೆ  ಇದೆ. ಬೈಕ್‌ನೊಂದಿಗೆ ನೆಗೆತ ಅದೇ ರೀತಿಯಲ್ಲಿ ದೇಹದ ಸಮತೋಲವನ್ನು ಕಾಯ್ದುಕೊಳ್ಳುವುದರಲ್ಲಿ ಆತ ನಿಸ್ಸೀಮ. ಇದಕ್ಕೆ ಸಾಕಷ್ಟು ಶ್ರಮ ಬೇಕಾಗುತ್ತದೆ. ಕೆಲವರು ಹುಟ್ಟಿನಿಂದಲೇ ಪ್ರತಿಭೆಯನ್ನು ಮೈಗೂಡಿಸಿಕೊಂಡಿರುತ್ತಾರೆ ಎನ್ನುತ್ತಾರೆ. ಅದೇ ರೀತಿ ಯುವರಾಜನಲ್ಲಿ ಹುಟ್ಟಿನಿಂದಲೇ ಮೋಟಾರ್ ಸ್ಪೋರ್ಟ್ಸ್ ಮೈಗೂಡಿದೆ, ‘ ಎಂದು ರಸ್ಟಮ್ ಅತ್ಯಂತ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಬ್ರಾಡ್ ರಿಪ್ಪಲ್ ತರಬೇತಿ
ಅಮೆರಿಕ ಮೂಲದ ಬ್ರಾಡ್ ರಿಪ್ಪಲ್ ಅವರಲ್ಲಿ ತರಬೇತಿ ಪಡೆದ ಯುವರಾಜ್‌ಗೆ ಹೆತ್ತವರು ಆರನೇ ವಯಸ್ಸಿನಲ್ಲೇ ಆತನಿಗೆ ಎಟಿವಿ ೫೦ ಸಿಸಿ ಬೈಕ್ ಉಡುಗೊರಿಯಾಗಿ ನೀಡಿದರು. ಬೆಳಿಗ್ಗೆ ೪-೩೦ಕ್ಕೆ ತರಬೇತಿ ಆರಂಭಿಸುವ ಯುವರಾಜ್‌ಗೆ ಎಟಿವಿ ಬೈಕ್ ಯಾವುದಕ್ಕೂ ಸಾಕಾಗಲಿಲ್ಲ. ಇದರಿಂದ ಹೆತ್ತವರು ದುಬೈನಿಂದ ಕೆಟಿಎಂ ೫೦ ಸಿಸಿ ಬೈಕ್ ಅನ್ನು ಆಮದು ಮಾಡಿಕೊಂಡು ಉಡುಗೊರೆಯಾಗಿ ನೀಡಿದರು.
ಇದರಿಂದಾಗಿ ಯುವರಾಜ್ ೧೬ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ  ೧೪ರಲ್ಲಿ ಅಗ್ರ ಸ್ಥಾನ ಗಳಿಸಿದರು.ರಷ್ಯಾ ಹಾಗೂ ಇಟಲಿಯ ಸವಾರರನ್ನು ಹಿಂದಿಕ್ಕುವಲ್ಲಿ ಯುವರಾಜ್ ಯಶಸ್ವಿಯಾದರು. ವೀಡಿಯೋ ಮೂಲಕ ಅಂತಾರಾಷ್ಟ್ರೀಯ ರೇಸರ್‌ಗಳ ಟ್ರಿಕ್ಸ್‌ಗಳನ್ನು ಕಲಿತ ಯುವರಾಜ್ ಇಂದು ಜಾಗತಿಕ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ.

Related Articles