ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿಯರಾದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಮತ್ತು ಹರ್ಮನ್‌ಪ್ರೀತ್ ಕೌರ್ ಅವರಿಗೆ ಮುಂಬೈನ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್ ಆ್ ಇಂಡಿಯಾ(ಸಿಸಿಐ), ತನ್ನ ಆಜೀವ ಸದಸ್ಯತ್ವ ನೀಡಿ ಗೌರವಿಸಿದೆ.
ಸಿಸಿಐನ ಬ್ರೆಬೌರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳನ್ನೊಳಗೊಂಡ ತ್ರಿಕೋನ ಟಿ20 ಸರಣಿಯ ವೇಳೆ ಭಾರತೀಯ ವನಿತೆಯರಿಗೆ ಸಿಸಿಐ ಈ ಗೌರವ ನೀಡಿದೆ.
35 ವರ್ಷದ ಮಿಥಾಲಿ ರಾಜ್ ಭಾರತ ಪರ 10 ಟೆಸ್ಟ್, 191 ಏಕದಿನ ಹಾಗೂ 71 ಟಿ20 ಪಂದ್ಯಗಳನ್ನಾಡಿದ್ದಾರೆ. ಅಲ್ಲದೆ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 6000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ದಾಖಲೆ ಮಿಥಾಲಿ ಅವರ ಹೆಸರಲ್ಲಿದೆ.
35 ವರ್ಷದ ಅನುಭವಿ ಮಧ್ಯಮ ವೇಗಿ ಜೂಲನ್ ಗೋಸ್ವಾಮಿ ಭಾರತ ಪರ 10 ಟೆಸ್ಟ್, 166 ಏಕದಿನ ಹಾಗೂ 63 ಟಿ20 ಪಂದ್ಯಗಳನ್ನಾಡಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆದ ವಿಶ್ವದ ಮೊದಲ ಆಟಗಾರ್ತಿ ಎಂಬ ದಾಖಲೆ ಜೂಲನ್ ಗೋಸ್ವಾಮಿ ಅವರ ಹೆಸರಲ್ಲಿದೆ.
ಭಾರತ ಮಹಿಳಾ ಟಿ20 ತಂಡದ ನಾಯಕಿಯಾಗಿರುವ 29 ವರ್ಷದ ಹರ್ಮನ್‌ಪ್ರೀತ್ ಕೌರ್ 2 ಟೆಸ್ಟ್, 84 ಏಕದಿನ ಹಾಗೂ 76 ಟಿ20 ಪಂದ್ಯಗಳನ್ನಾಡಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿಲಬ್ಬರದ 171 ರನ್ ಸಿಡಿಸಿದ್ದ ಹರ್ಮನ್‌ಪ್ರೀತ್ ಭಾರತ ಫೈನಲ್ ತಲುಪಲು ಕಾರಣರಾಗಿದ್ದರು. ಅಲ್ಲದೆ ಆಸ್ಟ್ರೇಲಿಯಾದ ಬಿಗ್‌ಬ್ಯಾಷ್ ಲೀಗ್ ಟಿ20 ಟೂರ್ನಿಯಲ್ಲಿ ಆಡಿದ ಭಾರತದ ಮೊದಲ ಕ್ರಿಕೆಟ್ ತಾರೆ ಎಂಬ ಹಿರಿಮೆ ಹೊಂದಿದ್ದಾರೆ.