Tuesday, September 10, 2024

ಮಹಿಳಾ ಟಿ20 ತ್ರಿಕೋನ ಸರಣಿ: ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ ಭಾರತ, ಮಂಧಾನ ಸ್ಫೋಟಕ ಆಟ ವ್ಯರ್ಥ

PC: BCCI

ಮುಂಬಯಿ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ, ತ್ರಿಕೋನ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಸೋಲುಂಡಿದೆ.

ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರೆಬೌರ್ನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಬಳಗ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಸೋಲು ಅನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆತಿಥೇಯ ಭಾರತ ತಂಡ ಸ್ಮೃತಿ ಮಂಧಾನ ಅವರ ಸ್ಫೋಟಕ ಆಟದ ನಡುವೆಯೂ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 152 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಮಹಾರಾಷ್ಟ್ರದ ಸಾಂಗ್ಲಿಯವರಾದ ಎಡಗೈ ಓಪನರ್ ಸ್ಮೃತಿ ಮಂಧಾನ 41 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ಸಿಡಿಲಬ್ಬರದ 67 ರನ್ ರನ್ ಸಿಡಿಸಿ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದರು. ಆದರೆ ಅನುಭವಿಗಳಾದ ಮಿಥಾಲಿ ರಾಜ್, ನಾಯಕಿ ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರಾಡ್ರಿಗ್ಸ್ ಅವರ ವೈಫಲ್ಯ ಭಾರತಕ್ಕೆ ಹಿನ್ನಡೆ ತಂದೊಡ್ಡಿತು.
ಆದರೆ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಆಲ್ರೌಂಡರ್ ಅನುಜಾ ಪಾಟೀಲ್ 21 ಎಸೆತಗಳಲ್ಲಿ ಬಿರುಸಿನ 35 ರನ್ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಭಾರತ ಒಡ್ಡಿದ 153 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ, ಯಾವುದೇ ಒತ್ತಡಕ್ಕೊಳಗಾಗದೆ 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 156 ರನ್ ಗಳಿಸಿ ಅಧಿಕಾರಯುತ ಗೆಲುವು ದಾಖಲಿಸಿತು. ತಂಡದ ಪರ ಆರಂಭಿಕ ಆಟಗಾರ್ತಿ ಬೆಥ್ ಮೂನಿ 45, ಎಲೈಸ್ ವಿಲಾನಿ 39 ಹಾಗೂ ನಾಯಕಿ ಮೆಗ್ ಲ್ಯಾನಿಂಗ್ ಅಜೇಯ 35 ರನ್ ಸಿಡಿಸಿ ತಂಡದ ಸುಲಭ ಜಯಕ್ಕೆ ಕಾರಣರಾದರು.
ಸಂಕ್ಷಿಪ್ತ ಸ್ಕೋರ್
ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 152 ರನ್
ಸ್ಮೃತಿ ಮಂಧಾನ 67, ಅನುಜಾ ಪಾಟೀಲ್ 35, ಮಿಥಾಲಿ ರಾಜ್ 18, ವೇದಾ ಕೃಷ್ಣಮೂರ್ತಿ ಅಜೇಯ 15; ಆ್ಯಶ್ಲೆ ಗಾರ್ಡ್ನರ್ 2/22, ಎಲೈಸ್ ಪೆರಿ 2/31.
ಆಸ್ಟ್ರೇಲಿಯಾ: 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 156 ರನ್
ಬೆಥ್ ಮೂನಿ 45, ಎಲೈಸ್ ವಿಲಾನಿ 39, ಅಜೇಯ ಮೆಗ್ ಲ್ಯಾನಿಂಗ್ 35; ಜೂಲನ್ ಗೋಸ್ವಾಮಿ 3/30, ಪೂನಂ ಯಾದವ್ 1/22.

Related Articles