ಮಹಾರಾಷ್ಟ್ರ ಡರ್ಬಿ ಗೆದ್ದ ಪುಣೆ ಸಿಟಿ

0
252
ಸ್ಪೋರ್ಟ್ಸ್ ಮೇಲ್ ವರದಿ 

ಆದಿಲ್ ಖಾನ್ (18ನೇ ನಿಮಿಷ) ಹಾಗೂ ಇಯಾನ್ ಹೂಮ್ (84ನೇ ನಿಮಿಷ) ಗಳಿಸಿದ ಅಮೂಲ್ಯ ಗೋಲುಗಳ ನೆರವಿನಿಂದ ಮುಂಬೈ ಸಿಟಿ ತಂಡವನ್ನು   2-1 ಗೋಲುಗಳ ಅಂತರದಲ್ಲಿ ಮಣಿಸಿದ ಎಫ್ ಸಿ ಪುಣೆ ಸಿಟಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಭಿಯಾನವನ್ನು ಜಯದೊಂದಿಗೆ ಕೊನೆಗೊಳಿಸಿದೆ. ಮುಂಬೈ ಪರ ಅರ್ನಾಲ್ಡ್ ಐಸೋಕೋ ೯೦ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಗೋಲು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಪುಣೆಗೆ ಮುನ್ನಡೆ
ಪಂದ್ಯ ಆರಂಭಗೊಂಡ 18ನೇ ನಿಮಿಷದಲ್ಲಿ ಆದಿಲ್ ಖಾನ್ ಗಳಿಸಿದ ಗೋಲಿನಿಂದ ಪುಣೆ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಇತ್ತಂಡಗಳು ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿ ಸಮಬಲದ ಹೋರಾಟ ನೀಡುತ್ತಿದ್ದವು, ಆದರೆ ಆದಿಲ್ ಖಾನ್ ಗಳಿಸಿದ ಗೋಲು ಎರಡೂ ತಂಡಗಳನ್ನು ಪ್ರತ್ಯೇಕಗೊಳಿಸಿದಂತೆ ಮಾಡಿತು. ಅವಕಾಶಗಳಿಗೆ ಹೋಲಿಗೆ ಮಾಡಿದರೆ ಪುಣೆ ತಂಡ ಗೋಲು ಗಳಿಸುವ ಅವಕಾಶವನ್ನು ಹೆಚ್ಚು ಹೊಂದಿತ್ತು, ರಾಬಿನ್ ಸಿಂಗ್‌ಗೆ  ಈ ಬಾರಿಯೂ ಗೋಲು ಗಳಿಸುವ ಅವಕಾಶವಿದ್ದಿತ್ತು. ಆದರೆ ಅರ್ಮಿಂದರ್ ಸಿಂಗ್ ಉತ್ತಮ ರಕ್ಷಣೆಯ ಮೂಲಕ ರಾಬಿನ್ ಅವರ ಆಸೆಗೆ ತಡೆಯೊಡ್ಡಿದರು.
ಇಂಡಿಯನ್ ಸೂಪರ್ ಲೀಗ್‌ನ 89ನೇ ಪಂದ್ಯದಲ್ಲಿ ಮಹಾರಾಷ್ಟ್ರ ಡರ್ಬಿಗಾಗಿ ಪುಣೆ ಹಾಗೂ ಮುಂಬೈ ಸಿಟಿ ತಂಡಗಳು ಮುಖಾಮುಖಿಯಾದವು. ಹಾಗೆ ನೋಡಿದ್ದಲ್ಲಿ ಈ ಪಂದ್ಯಕ್ಕೆ ಹೆಚ್ಚಿನ ಮೌಲ್ಯವನ್ನು ಕಲ್ಪಿಸಲಾಗದು, ಏಕೆಂದರೆ ಒಂದು ತಂಡ ಈಗಾಗಲೇ ಸೆಮಿಫೈನಲ್ ತಲುಪಿದ್ದರೆ, ಇನ್ನೊಂದು  ತಂಡ ಸ್ಪರ್ಧೆಯಿಂದಲೇ ಹೊರ ನಡೆದಿದೆ. ಆದರೆ ಯಾವುದೇ ತಂಡವೂ ಸೋಲಲು ಇಷ್ಟಪಡುವುದಿಲ್ಲ, ಅದು ಯಾವುದೇ ಹಂತವಾಗಿರಲಿ, ಅಲ್ಲಿ ಜಯ ಗಳಿಸಬೇಕೆಂಬುದು ಪ್ರತಿಯೊಬ್ಬರ ಗುರಿಯಾಗಿರುತ್ತದೆ. ಮಹಾರಾಷ್ಟ್ರದ ಡರ್ಬಿಯಲ್ಲಿ ಅಂತಿಮವಾಗಿ ಖುಷಿ ಪಡುವುದು ಫುಟ್ಬಾಲ್ ಅಭಿಮಾನಿಗಳು.  ಆತಿಥೇಯ ಪುಣೆ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು, ಇಲ್ಲಿ ಜಯ ಗಳಿಸುವುದರ ಜತೆಯಲ್ಲಿ ಮುಂದಿನ ಪಂದ್ಯದಲ್ಲಿ ಎಟಿಕೆ ಸೋತರೆ ಪುಣೆ ಆರನೇ ಸ್ಥಾನ ತಲುಪಲಿದೆ. ನೆರೆಯ ತಂಡದ ವಿರುದ್ಧ ಪುಣೆ ತಂಡ 9ರಲ್ಲಿ 5 ಜಯ ಗಳಿಸಿ ಮೇಲುಗೈ ಸಾಧಿಸಿದೆ. ತಂಡದ ಡಿಫೆನ್ಸ್ ವಿಭಾಗ ಅಷ್ಟು ಉತ್ತಮವಾಗಿಲ್ಲ ಎಂಬುದಕ್ಕೆ 29 ಗೋಲುಗಳನ್ನು ನೀಡಿರುವುದೇ ಸಾಕ್ಷಿ.  ಕೆಳ ಹಂತದಲ್ಲಿರುವ ಚೆನ್ನೆ‘ಯಿನ್ ತಂಡ ಮೊದಲ ಸ್ಥಾನದಲ್ಲಿದೆ. ತಮ್ಮ ನೆರೆಯ ಎದುರಾಳಿ ವಿರುದ್ಧ ಅಂತಿಮವಾಗಿ ಮತ್ತೊಂದು ಜಯ ಗಳಿಸಬೇಕೆಂಬುದು ಪುಣೆ ತಂಡದ ಲೆಕ್ಕಾಚಾರ. ಗೋವಾ ವಿರುದ್ಧ ಸೆಮೀಫೈನಲ್ ಆಡುವುದಕ್ಕೆ ಮುಂಚೆ ಮುಂಬೈ ಸಿಟಿ ತಂಡ ಕೊನೆಯ ಲೀಗ್ ಪಂದ್ಯಕ್ಕೆ ಸಜ್ಜಾಯಿತು. ಸೆಮಿಫೈನಲ್ ಎರಡು ಹಂತದಲ್ಲಿ ನಡೆಯಲಿದೆ. ಕೆಲವು ಆಟಗಾರರಿಗೆ ವಿಶ್ರಾಂತಿ ನೀಡುವ ಯೋಜನೆಯನ್ನು ಮುಂಬೈ ತಂಡ ಹಾಕಿಕೊಂಡಿರುವುದು ಸ್ಪಷ್ಟ, ಸತತ ಮೂರು ಪಂದ್ಯಗಳಲ್ಲಿ ಸೋತಿರುವ ಮುಂಬೈ ಅಂತಿಮವಾಗಿ ಜಯ ಗಳಿಸಿ ಈ ಪಂದ್ಯಕ್ಕೆ ಆಗಮಿಸಿದೆ, ಇಲ್ಲಿಯೂ ಗೆದ್ದು ಅತ್ಯಂತ ಆತ್ಮವಿಶ್ವಾಸದಲ್ಲಿ ಸೆಮಿಫೈನಲ್‌ಗೆ ಸಜ್ಜಾಗುವ ಗುರಿಹೊಂದಿದೆ.