Tuesday, March 21, 2023

ಪತ್ನಿಯೊಂದಿಗೆ ರೊಮ್ಯಾನ್ಸ್, ಜಿಮ್‌ನಲ್ಲಿ ಸಖತ್ ವರ್ಕೌಟ್… ಇದು ವಿರಾಟ್ ಕೊಹ್ಲಿ ದುನಿಯಾ!

ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್‌ನಿಂದ ಬಿಡುವು ಪಡೆದಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಿಂದ ನಾಯಕ ವಿರಾಟ್ ಕೊಹ್ಲಿ ಹೊರಗುಳಿದಿರುವ ಕಾರಣ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಅತ್ತ ದ್ವೀಪರಾಷ್ಟ್ರದಲ್ಲಿ ಟೀಮ್ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದರೆ, ಇತ್ತ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.

PC: Twitter/Virat Kohli fan club

ಮುಂಬೈನ ವೊರ್ಲಿಯಲ್ಲಿರುವ 35 ಕೋಟಿ ರೂ. ವೆಚ್ಚದ ಐಷಾರಾಮಿ ನಿವಾಸದಲ್ಲಿ ವಿರಾಟ್ ಮತ್ತು ಅನುಷ್ಕಾ ಜೋಡಿ ಸಂತಸದ ಕ್ಷಣಗಳನ್ನು ಕಳೆಯುತ್ತಿದೆ. ಇಬ್ಬರಿಗೂ ಈ ರೀತಿ ಸಮಯ ಸಿಗುವುದು ತುಂಬಾ ಅಪರೂಪ. ಏಕೆಂದರೆ ಇಬ್ಬರೂ ಸೆಲೆಬ್ರಿಟಿಗಳು. ಕೊಹ್ಲಿ ಕ್ರಿಕೆಟ್‌ನಲ್ಲಿ ಸದಾ ಬ್ಯುಸಿಯಾಗಿದ್ದರೆ, ಬಾಲಿವುಡ್ ನಟಿ ಅನುಷ್ಕಾ ಶೂಟಿಂಗ್‌ನಲ್ಲಿ ಬ್ಯುಸಿ. ಹೀಗಾಗಿ ಈ ತಾರಾ ಜೋಡಿಗೆ ಒಂದೇ ಬಾರಿ ಸಮಯ ಸಿಗುವುದು ತೀರಾ ವಿರಳ. ಈಗ ಸಿಕ್ಕಿರುವ ಸಮಯವನ್ನು ಒಂಚೂರೂ ವ್ಯರ್ಥ ಮಾಡದ ವಿರುಷ್ಕಾ, ಬಿಂದಾಸ್ ಆಗಿ ಕಾಲ ಕಳೆಯುತ್ತಿದ್ದಾರೆ. ಪತ್ನಿಯೊಂದಿಗಿರುವ ಸಂತಸದ ಕ್ಷಣಗಳ ಫೋಟೋಗಳನ್ನು ವಿರಾಟ್ ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಪತ್ನಿಯೊಂದಿಗೆ ಸಮಯ ಕಳೆಯುವ ಭರದಲ್ಲಿ ವಿರಾಟ್ ಕೊಹ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ಮರೆತಿಲ್ಲ. ಎಷ್ಟೇ ಬ್ಯುಸಿಯಾಗಿದ್ದರೂ ಜಿಮ್‌ನಲ್ಲಿ ವಿರಾಟ್ ಬೆವರು ಹರಿಸುವುದನ್ನು ಮರೆಯುವ ವ್ಯಕ್ತಿಯಲ್ಲ. ಇದೇ ಕಾರಣದಿಂದಲೇ ಕೊಹ್ಲಿ ಇಂದು ಕ್ರಿಕೆಟ್ ಜಗತ್ತಿನ ಅತ್ಯಂತ ಫಿಟ್ಟೆಸ್ಟ್ ಕ್ರಿಕೆಟರ್ ಎಂದು ಕರೆಸಿಕೊಂಡಿದ್ದಾರೆ.ಮನೆಯಲ್ಲಿರುವ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾ ದೇಹ ದಂಡಿಸುತ್ತಿರುವ ಚಿತ್ರವನ್ನೂ ಕೂಡ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

Related Articles