ಮುಂಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಬ್ರ್ಯಾಂಡ್. ಹಲವಾರು ಕಂಪೆನಿಗಳು ವಿರಾಟ್ ಕೊಹ್ಲಿ ಅವರನ್ನು ತಮ್ಮ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಮಾಡಲು ತುದಿಗಾಲಲ್ಲಿ ನಿಂತಿರುತ್ತವೆ. ಈಗಾಗಲೇ ಕೊಹ್ಲಿ ಹಲವಾರು ಉತ್ಪನ್ನಗಳ ರಾಯಭಾರಿಯೂ ಆಗಿದ್ದಾರೆ.
ಜಾಹೀರಾತು ಶೂಟಿಂಗ್‌ಗಳಲ್ಲಿ ವಿರಾಟ್ ಕೊಹ್ಲಿ, ಬಾಲಿವುಡ್ ತಾರೆಗಳಾದ ಅನುಷ್ಕಾ ಶರ್ಮಾ, ತಮ್ಮ ಭಾಟಿಯಾ ಮೊದಲಾದವರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಜಾಹೀರಾತು ಶೂಟಿಂಗ್‌ನಿಂದಲೇ ಹತ್ತಿರವಾದ ಅನುಷ್ಕಾ ಶರ್ಮಾ ಅವರನ್ನು ಪ್ರೀತಿಸಿ ಮದುವೆಯೂ ಆಗಿದ್ದಾರೆ.
ಆದರೆ ಇದೀಗ ವಿರಾಟ್ ಕೊಹ್ಲಿ ಆನ್‌ಲೈನ್ ಹೋಟೆಲ್ ಬುಕ್ಕಿಂಗ್ ವೆಬ್‌ಸೈಟ್ ಗೊಇಬಿಬೊ ಸಂಸ್ಥೆಯ 11 ಕೋಟಿ ಮೊತ್ತದ ಜಾಹೀರಾತು ಶೂಟಿಂಗ್‌ನಲ್ಲಿ ನಟಿಸಲು ಹಿಂದೇಟು ಹಾಕಿದ್ದಾರೆ. ಆ ಜಾಹೀರಾತಿನಲ್ಲಿ ಕನ್ನಡತಿ, ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಅವರೊಂದಿಗೆ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಪಡುಕೋಣೆ ಅವರೊಂದಿಗೆ ನಟಿಸಲು ಕೊಹ್ಲಿ ನಿರಾಕರಿಸಿದ್ದಾರೆ.
ಕನ್ನಡತಿ ದೀಪಿಕಾ ಪಡುಕೋಣೆ ಜೊತೆ ವಿರಾಟ್ ಕೊಹ್ಲಿ ನಟಿಸಲು ನಿರಾಕರಿಸಿರುವುದಕ್ಕೆ ಕಾರಣವೂ ಇದೆ. ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ ಮಾತ್ರವಲ್ಲದೆ ರಾಯಲ್ ಚಾಲೆಂಜರ್ಸ್ ತಂಡದ ನಾಯಕನೂ ಹೌದು. ಐಪಿಎಲ್‌ನ ಸಂಭಾವನೆಯ ಮೊತ್ತವಾಗಿ ವಾರ್ಷಿಕ 17 ಕೋಟಿ ರೂ.ಗಳನ್ನು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ವಿರಾಟ್ ಕೊಹ್ಲಿ ಅವರಿಗೆ ನೀಡುತ್ತಿದೆ. ಅಲ್ಲದೆ ಆರ್‌ಸಿಬಿ ಜೊತೆಗಿನ ಐಪಿಎಲ್ ಒಪ್ಪಂದದ ಪ್ರಕಾರ ವಿರಾಟ್ ಕೊಹ್ಲಿ ಇತರ ಸೆಲೆಬ್ರಿಟಿಗಳೊಂದಿಗೆ ಜಾಹೀರಾತಿನಲ್ಲಿ ನಟಿಸುವಂತಿಲ್ಲ.
ಹೀಗಾಗಿ ಕ್ರಿಕೆಟ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್‌ನ ಪ್ರತಿಭಾವಂತ ನಟಿ ದೀಪಿಕಾ ಪಡುಕೋಣೆ ಅವರನ್ನು ಒಟ್ಟಾಗಿ ಪರದೆಯ ಮೇಲೆ ನೋಡುವ ಅವಕಾಶದಿಂದ ಅಭಿಮಾನಿಗಳು ವಂಚಿತರಾಗಿದ್ದಾರೆ.