Thursday, September 12, 2024

ತ್ರಿಕೋನ ಟಿ20: ಹ್ಯಾಟ್ರಿಕ್ ಜಯದೊಂದಿಗೆ ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ

ಕೊಲಂಬೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದೆ.
ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ನಡೆದ ತನ್ನ 4ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ, ಬಾಂಗ್ಲಾದೇಶ ತಂಡವನ್ನು 17 ರನ್‌ಗಳಿಂದ ಬಗ್ಗು ಬಡಿಯಿತು. ಹೀಗೆ ಸತತ 3 ಗೆಲುವುಗಳನ್ನು ದಾಖಲಿಸಿದ ರೋಹಿತ್ ಶರ್ಮಾ ಬಳಗ, ಭಾನುವಾರ ನಡೆಯಲಿರುವ ಫೈನಲ್‌ಗೆ ಅರ್ಹತೆ ಗಳಿಸಿತು.

PC: Twitter/BCCI

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ, 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 176 ರನ್‌ಗಳ ಉತ್ತಮ ಮೊತ್ತ ಕಲೆ ಹಾಕಿತು. ಸತತ 3 ಪಂದ್ಯಗಳಲ್ಲಿ ವಿಲರಾಗಿದ್ದ ರೋಹಿತ್ ಶರ್ಮಾ ಕೊನೆಗೂ ಫಾರ್ಮ್ ಕಂಡುಕೊಂಡು 61 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 89 ರನ್ ಸಿಡಿಸಿದರು. ಶಿಖರ್ ಧವನ್ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 35 ರನ್ ಗಳಿಸಿದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಪವರ್ ಹಿಟ್ಟರ್ ಸುರೇಶ್ ರೈನಾ 30 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಿತ ಬಿರುಸಿನ 47 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.
177 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದದೇಶ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಗಿ ಭಾರತ ವಿರುದ್ದ ಸತತ 2ನೇ ಸೋಲು ಕಂಡಿತು. ಈ ಮೂಲಕ ಭಾರತ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಅಜೇಯ ದಾಖಲೆಯನ್ನು ಮುಂದುವರಿಸಿತು. ಟೀಮ್ ಇಂಡಿಯಾ ಪರ ತಮಿಳುನಾಡಿನ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 4 ಓವರ್‌ಗಳಲ್ಲಿ ಕೇವಲ 22 ರನ್ನಿತ್ತು 3 ವಿಕೆಟ್ ಪಡೆದರೆ, ಯುಜ್ವೇಂದ್ರ ಚಹಾಲ್ 21 ರನ್ನಿತ್ತು 1 ವಿಕೆಟ್ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್
ಭಾರತ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 176 ರನ್
ರೋಹಿತ್ ಶರ್ಮಾ 89, ಶಿಖರ್ ಧವನ್ 35, ಸುರೇಶ್ ರೈನಾ 47; ರುಬೆಲ್ ಹೊಸೇನ್ 2/27.
ಬಾಂಗ್ಲಾದೇಶ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್
ಮುಷ್ಫಿಕರ್ ರಹೀಂ ಅಜೇಯ 72, ತಮೀಮ್ ಇಕ್ಬಾಲ್ 27, ಶಬ್ಬೀರ್ ರಹ್ಮಾನ್ 27; ವಾಷಿಂಗ್ಟನ್ ಸುಂದರ್ 3/22, ಯುಜ್ವೇಂದ್ರ ಚಹಾಲ್ 1/21, ಶಾರ್ದೂಲ್ ಠಾಕೂರ್ 1/37 ಮೊಹಮ್ಮದ್ ಸಿರಾಜ್ 1/50.

Related Articles