ಡೇವಿಡ್ ಕಪ್: ಗೆದ್ದ ಪೇಸ್, ಬಿದ್ದ ಬೋಪಣ್ಣ; ಪೇಸ್ ಜೊತೆ ಆಡುವಂತೆ ಕನ್ನಡಿಗನಿಗೆ ಖಡಕ್ ಸೂಚನೆ
ಹೊಸದಿಲ್ಲಿ: ಏಪ್ರಿಲ್ 7 ಮತ್ತು 8ರಂದು ತೈನ್ಜಿನ್‌ನಲ್ಲಿ ನಡೆಯಲಿರುವ ಚೀನಾ ವಿರುದ್ಧದ ಡೇವಿಡ್ ಕಪ್ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಆಟಗಾರ ಮತ್ತು ಡಬಲ್ಸ್ ಸ್ಪೆಷಲಿಸ್ಟ್ ಲಿಯಾಂಡರ್ ಪೇಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಪೇಸ್ ಅವರೊಂದಿಗೆ ಡಬಲ್ಸ್ ಪಂದ್ಯವನ್ನಾಡಲು ನಿರಾಕರಿಸಿದ್ದ ಕನ್ನಡಿಗ ರೋಹನ್ ಬೋಪಣ್ಣಗೆ ಛಾಟಿ ಬೀಸಿರುವ ಅಖಿಲ ಭಾರತ ಟೆನಿಸ್ ಸಂಸ್ಥೆ, ಪೇಸ್ ಜೊತೆ ಆಡುವಂತೆ ಬೋಪಣ್ಣ ಅವರಿಗೆ  ಖಡಕ್ ಸೂಚನೆ ನೀಡಿದೆ. ಅಲ್ಲದೆ ತಂಡ ಆಯ್ಕೆ ಪ್ರಕ್ರಿಯೆಯಲ್ಲಿ ಆಟಗಾರರು ಹಸ್ತಕ್ಷೇಪ ಮಾಡುವಂತಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ.

ಚೀನಾ ವಿರುದ್ಧದ ಡೇವಿಸ್ ಕಪ್ ತಂಡಕ್ಕೆ ಲಿಯಾಂಡರ್ ಪೇಸ್, ಯೂಕಿ ಭಾಂಬ್ರಿ, ರೋಹನ್ ಬೋಪಣ್ಣ, ರಾಮ್‌ಕುಮಾರ್ ರಾಮನಾಥನ್, ಸುಮಿತ್ ನಗಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಮಾಜಿ ಟೆನಿಸ್ ತಾರೆ ಮಹೇಶ್ ಭೂಪತಿ ಭಾರತ ತಂಡದ ಆಟವಾಡದ ನಾಯಕನಾಗಿದ್ದಾರೆ.
ದೇಶ ಕಂಡ ಅತ್ಯಂತ ಶ್ರೇಷ್ಠ ಟೆನಿಸ್ ತಾರೆಯಾಗಿರುವ 44 ವರ್ಷದ ಲಿಯಾಂಡರ್ ಪೇಸ್ ಅವರೊಂದಿಗೆ ಆಡಲು ಬೋಪಣ್ಣ ಅವರಿಗೆ ಮನಸ್ಸಿಲ್ಲ. ಹೀಗಾಗಿ ಚೀನಾ ವಿರುದ್ಧದ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದರು. ಆದರೆ ಬೋಪಣ್ಣಗೆ ಬಿಸಿ ಮುಟ್ಟಿಸಿರುವ ಅಖಿಲ ಭಾರತ ಟೆನಿಸ್ ಸಂಸ್ಥೆ, ಬೋಪಣ್ಣ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಮೂಲಕ ಪೇಸ್ ಜೊತೆ ಆಡಲೇಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ.
‘‘ರೋಹನ್ ಬೋಪಣ್ಣ ಈಗಲೂ ಸರ್ಕಾರರಿಂದ ಅನುದಾನ ಪಡೆಯುತ್ತಿದ್ದಾರೆ. ದೇಶಕ್ಕಾಗಿ ಆಡುವ ಸಂದರ್ಭದಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳಿಗೆ ಆಸ್ಪದವಿಲ್ಲ. ಇದನ್ನು ಎಐಟಿಎ ಸಹಿಸುವುದೂ ಇಲ್ಲ. ಟೆನಿಸ್ ತಾರೆಗಳು ವರ್ಷದಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾತ್ರ ದೇಶಕ್ಕಾಗಿ ಆಡುತ್ತಾರೆ. ಈ ಎರಡು ವಾರಗಳ ಕಾರ ಭಿನ್ನಾಭಿಪ್ರಾಯವಿಲ್ಲದೆ ಆಡಲು ಇವರಿಗೆ ಏನು ಕಷ್ಟ?’’ ಎಂದು ಎಐಟಿಎ ಅಧಿಕಾರಿಗಳು ಬೋಪಣ್ಣ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
                                                                

 
  
               
     
  
                                        
  
                                        
  
                                       