ಬೆಂಗಳೂರು: 7 ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಆಕೆ ತನ್ನ ಕಾಲನ್ನೇ ಕಳೆದುಕೊಂಡಳು. ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಆಕೆಯ ಬಾಳಿನಲ್ಲಿ ಕ್ರೂರವಾಗಿ ಆಟವಾಡಿತು. ಆದರೆ ಆಕೆ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ಕಾಲಿಲ್ಲದಿದ್ದರೇನಂತೆ?. ಮನೋಬಲದ ಮುಂದೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಆಕೆ ತೋರಿಸಿಕೊಟ್ಟಳು. ಸ್ಪೇನ್‌ನ ಮಲ್ಲೋರ್ಕದಲ್ಲಿರುವ ಅಲ್ಕುಡಿಯಾ ಎಂಬಲ್ಲಿ ನಡೆದ ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಅಂತರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಆಕೆ ಸೂರ್ತಿಯ ಚಿಲುಮೆಯಾಗಿದ್ದಾಳೆ. ಈ ದಿಟ್ಟೆಯ ಹೆಸರು ಮಾನಸಿ ಜೋಶಿ.
ಮಹಿಳಾ ಸಿಂಗಲ್ಸ್‌ನ ಎಸ್‌ಲ್3 ವಿಭಾಗದಲ್ಲಿ ಸ್ಪರ್ಧಿಸಿದ್ದ ಮಾನಸಿ ಜೋಶಿ, ಸ್ಪ್ಯಾನಿಷ್ ಚಾಂಪಿಯನ್‌ಷಿಪ್‌ನಲ್ಲಿ ಆಡಿದ ಐದೂ ಪಂದ್ಯಗಳನ್ನು ಗೆದ್ದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಎಸ್‌ಎಲ್3 ಎಸ್‌ಯು 5 ವಿಭಾಗದ ಮಹಿಳಾ ಡಬಲ್ಸ್‌ನಲ್ಲಿ ಮಮಿಕೊ ಟೊಯೊಡಾ ಜೊತೆಗೂಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇವರ ಸಾಧನೆ ಇಷ್ಟಕ್ಕೇ ನಿಂತಿಲ್ಲ. ಐಕಾರ್ ಜುಕು ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
‘‘ಇದು ತುಂಬಾ ಸುಲಭ. ಏನಾದರೂ ಮಾಡಲೇಬೇಕೆಂದು ಒಮ್ಮೆ ನೀವು ನಿರ್ಧರಿಸಿದರೆ, 10 ಜನರು ನಿಮ್ಮ ಸಹಾಯಕ್ಕೆ ಬರುತ್ತಾರೆ. ಒಮ್ಮೆ ಒಂದು ಹೆಜ್ಜೆಯನ್ನು ಮಾತ್ರ ಇಡಬೇಕು. ಗುರಿಯ ಬಗ್ಗೆ ಗಮನ ಹರಿಸಬೇಕು. ಇದನ್ನು ಪಾಲಿಸಿದರೆ ಎಲ್ಲವೂ ಸಾಧ್ಯ.’’
ಕಾಲನ್ನೇ ಕಿತ್ತುಕೊಂಡ ಅಪಘಾತ ನಡೆದದ್ದು 2011ರಲ್ಲಿ. ಆಗ 22 ವರ್ಷದವರಾಗಿದ್ದ ಮಾನಸಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಟ್ರಕ್ ಒಂದು ಅಪ್ಪಳಿಸಿ ಅವರ ಕಾಲಿನ ಮೇಲೆ ಹರಿದು ಹೋಗಿತ್ತು. ಕೂಡಲೇ ಮಾನಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಕಾಲನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಜೀವ ಉಳಿಯಬೇಕಾದರೆ ಕಾಲನ್ನು ಕತ್ತರಿಸಲೇಬೇಕಾಯಿತು. 45 ದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದ ಮಾನಸಿ, ನಂತರ ಮನೆಗೆ ಮರಳಿ ನಿಧಾನವಾಗಿ ನಡೆಯಲು ಆರಂಭಿಸಿದರು. ಒಂದು ಕಾಲನ್ನೇ ಕಳೆದುಕೊಂಡರೂ ಬ್ಯಾಡ್ಮಿಂಟನ್ ಬಿಡಲು ಮಾನಸಿ ಸಿದ್ಧವಿರಲಿಲ್ಲ. ಕೃತಕ ಕಾಲು ಜೋಡಿಸಿ ಆಡಲಾರಂಭಿಸಿದ ಮಾನಸಿ ಜೋಶಿ, ಇದೀಗ ಎಲ್ಲರೂ ಹೆಮ್ಮೆ ಪಡುವಂತಹ ಸ್ಫೂರ್ತಿಯುತ ಸಾಧನೆ ಮಾಡಿದ್ದಾರೆ.