Wednesday, May 31, 2023

ಕರ್ನಾಟಕ-1000 ರ್‍ಯಾಲಿ: ಕರ್ಣ ಕಡೂರ್‌, ನಿಖಿಲ್‌ ಚಾಂಪಿಯನ್ಸ್‌

ತುಮಕೂರು: ಬೆಂಗಳೂರಿನ ಜೋಡಿ ಅರ್ಕಾ ಮೋಟರ್‌ಸ್ಪೋರ್ಟ್ಸ್‌ನ ಕರ್ಣ ಕಡೂರ್‌ ಹಾಗೂ ಸಹ ಚಾಲಕ ನಿಖಿಲ್‌ ವಿ. ಪೈ ಅವರು ಬ್ಲೂಬ್ಯಾಂಡ್‌ ಎಫ್‌ಎಂಎಸ್‌ಸಿಐ ಇಂಡಿಯನ್‌ ನ್ಯಾಷನಲ್‌ ರ್‍ಯಾಲಿ ಚಾಂಪಿಯನ್‌ಷಿಪ್‌ನ ಭಾಗವಾಗಿರುವ ಪ್ರಸಾದಿತ್ಯ 46ನೇ ಕರ್ನಾಟಕ -1000 ರ್‍ಯಾಲಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದ್ದಾರೆ.

ಬಡ್ಡೆಂಗೆ ಬಡಿದ ಕಾರಣ ಕಾರಿಗೆ ಸಾಕಷ್ಟು ಹಾನಿಯಾಗಿದ್ದರೂ ಕರ್ನಾಟಕದ ಈ ಜೋಡಿಗೆ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ಬೇರಾವುದೇ ಅಡ್ಡಿಯಾಗಲಿಲ್ಲ.

ಕಡೂರ್‌ ಅವರಿಗಿಂತ ಒಂದು ನಿಮಿಷ ತಡವಾಗಿ ಗುರಿ ತಲುಪಿದ ಮಂಗಳೂರಿನ ಮಾಂಡೊವಿ ರೇಸಿಂಗ್‌ನ ಆರೂರು ಅರ್ಜುನ್‌ ರಾವ್‌ (ಸಹ ಚಾಲಕ ಸತೀಶ್‌ ರಾಜಗೋಪಾಲ್‌ ಬೆಂಗಳೂರು) ಎರಡನೇ ಸ್ಥಾನ ಗಳಿಸಿದರು. 13 ವರ್ಷಗಳ ನಂತರ ರ್‍ಯಾಲಿಯಲ್ಲಿ ಪಾಲ್ಗೊಳ್ಳುತ್ತಿರುವ ದೆಹಲಿಯ ಫಿಲಿಪ್ಪೋಸ್‌ ಮಥಾಯ್‌ (ಬೆಂಗಳೂರಿನ ಹರೀಶ್‌ ಗೌಡ) ಸಮಗ್ರ ಮೂರನೇ ಸ್ಥಾನ ಗಳಿಸಿದರು.

ಐಎನ್‌ಆರ್‌ಸಿ3 ವಿಭಾಗದಲ್ಲೂ ಮಥಾಯ್‌ ಅಗ್ರ ಸ್ಥಾನ ಗಳಿಸಿದರು.  ವಿರಾಜ್‌ಪೇಟೆಯ ಸುಶೇಮ್‌ ಕಬೀರ್‌ (ಜೀವ ರಥಿನಮ್‌, ಬೆಂಗಳೂರು) ಐಎನ್‌ಆರ್‌ಸಿ2 ವಿಭಾಗದಲ್ಲಿ ಅಗ್ರ ಸ್ಥಾನ ಗಳಿಸಿದರು. ಐಎನ್‌ಆರ್‌ಸಿ 4 ವಿಭಾಗದಲ್ಲಿ ಅಮ್ಮೀಫೈಡ್‌ ರೇಸಿಂಗ್‌ನ ಚಿಕ್ಕಮಗಳೂರಿನ ಅಮನ್‌ ಅಹಮ್ಮದ್‌ (ಸಾಗರ್‌ ಮಲ್ಲಪ್ಪ, ಬೆಂಗಳೂರು) ಅಗ್ರ ಸ್ಥಾನ ಗಳಿಸಿದರು. ಎಸ್‌ಎನ್‌ಎಪಿ ರೇಸಿಂಗ್‌ನ ದೆಹಲಿಯ ಅರ್ಣವ್‌ ಸಿಂಗ್‌ ಪ್ರತಾಪ್‌ (ಅರ್ಜುನ್‌ ಎಸ್‌ಎಸ್‌ಬಿ, ಬೆಂಗಳೂರು) ಐಎನ್‌ಆರ್‌ಸಿ ಜೂನಿಯರ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡರು. ಆಮಿಫೀಡ್‌ ತಂಡವನ್ನು ಪ್ರತಿನಿಧಿಸಿದ್ದ ಚಂಡೀಗಢದ ಸಮರ್ಥ್‌ ಯಾದವ್‌ (ಚಂದ್ರಶೇಖರ್‌ ಎಂ, ಬೆಂಗಳೂರು) ಜಿಪ್ಸಿ ಚಾಲೆಂಜ್‌ ಚಾಂಪಿಯನ್ನೇತರ ವಿಭಾಗದಲ್ಲಿ ಅಗ್ರ ಸ್ಥಾನಿಯಾದರು.

ಶನಿವಾರ ನಡೆದ ಮೊದಲ ಹಂತದ ರ್‍ಯಾಲಿಯಲ್ಲಿ ಮುನ್ನಡೆ ಕಂಡಿದ್ದ 34 ವರ್ಷ ಪ್ರಾಯದ ಕರ್ಣ ಕಡೂರ್‌, ಭಾನುವಾರ ಕಾರು ಹಾನಿಗೊಳಗಾಗಿದ್ದರೂ ಯಶಸ್ಸು ಕಾಣವುಲ್ಲಿ ಸಫಲರಾದರು. ಸರ್ವಿಸ್‌ ಬ್ರೇಕ್‌ನಲ್ಲಿ ಅವರ ಮೆಕ್ಯಾನಿಕ್‌ ಅಗತ್ಯವಿರುವ ದುರಸ್ತಿ ಕೆಲಸವನ್ನು ಮಾಡಿ ರ್‍ಯಾಲಿಗೆ ಕಾರನ್ನು ಸಜ್ಜುಗೊಳಿಸಿದರು. ಇದರಿಂದ ಕಡೂರ್‌ ಯಾವುದೇ ಸಮಸ್ಯೆ ಎದುರಿಸದೆ ಎರಡನೇ ಹಂತವನ್ನು ಮುಗಿಸುವಲ್ಲಿ ಯಶಸ್ವಿಯಾದರು.

 “ಹಾನಿ ಅತ್ಯಂತ ತೀವ್ರವಾಗಿತ್ತು. ಸಂಪ್‌ ಗಾರ್ಡ್‌ ತುಂಡಾಗಿತ್ತು. ಸರ್ವಿಸ್‌ ವಿಭಾಗಕ್ಕೆ ಕಾರನ್ನು ತರುವಲ್ಲಿ ಯಶಸ್ವಿಯಾದೆ, ನಮ್ಮ ಹುಡುಗರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರು. ಇದೆಲ್ಲ ಸಜ್ಜುಗೊಳಿಸಲು 20 ನಿಮಿಷ ತಗಲಿತು. ಈ ಯಶಸ್ಸಿನ ಗರಿಮೆ ನಮ್ಮೆಲ್ಲ ತಂಡದ ಸದಸ್ಯರಿಗೆ ಸೇರುತ್ತದೆ. ನಮ್ಮ ತಂದೆ ಪ್ರಕಾಶ್‌ ಕಡೂರ್‌ ಅವರು ಈ ರ್‍ಯಾಲಿ ಗೆದ್ದಿರಲಿಲ್ಲ, ನಮ್ಮ ಕುಟುಂಬದಲ್ಲಿ ಚಾಂಪಿಯನ್‌ ಪಟ್ಟ ಗೆದ್ದಿರುವುದರಲ್ಲಿ ನಾನು ಮೊದಲಿಗ,” ಎಂದರು.

Related Articles