ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾನುವಾರ ಉದ್ಯಾನನಗರಿ ಬೆಂಗಳೂರಿಗೆ ಬಂದಿದ್ದರು. ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಆರಂಭವಾಗಿರುವ ತಮ್ಮ ಒಡೆತನದ ‘ಸೆವೆನ್’ ಹೆಸರಿನ ಸ್ಪೋರ್ಟ್ಸ್ ವೇರ್ ಶೋ ರೂಮ್ ಉದ್ಘಾಟನೆಗೆ ಆಗಮಿಸಿದ್ದ ಧೋನಿ ಅವರನ್ನು ಅಭಿಮಾನಿಗಳು ಕಣ್ತುಂಬಿಕೊಂಡರು.
ಶೋ ರೂಮ್ ಉದ್ಘಾಟಿಸಿದ ಧೋನಿ ನಂತರ ಅಭಿಮಾನಿಗಳೊಂದಿಗೆ ಕೆಲ ಹೊತ್ತು ಸಂವಾದ ನಡೆಸಿದರು. ಈ ಸಂದರ್ಭಲ್ಲಿ ‘ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಕನ್ನಡದಲ್ಲೇ ಶುಭ ಹಾರೈಸಿದರು. ರಾಂಚಿಯ ಧೋನಿ ಅವರ ಬಾಯಲ್ಲಿ ಕನ್ನಡ ಮೇಳೈಸುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು, ಸಾರ್ವಜನಿಕರ ಸಂಭ್ರಮ, ಹರ್ಷೋದ್ಘಾರ ಮುಗಿಲು ಮುಟ್ಟಿತು.
ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಟಿ20 ಸರಣಿಯಿಂದ ಹೊರಗುಳಿದಿದ್ದ ಎಂ.ಎಸ್ ಧೋನಿ, ಐಪಿಎಲ್‌ನ 11ನೇ ಆವೃತ್ತಿಯಲ್ಲಿ 2 ವರ್ಷಗಳ ನಂತರ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಐಪಿಎಲ್-11 ಟೂರ್ನಿ ಏಪ್ರಿಲ್ 7ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.