Wednesday, October 4, 2023

ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್‌ಗೆ ಬಿಗ್ ಶಾಕ್!

ಬೆಂಗಳೂರು: 11ನೇ ಆವೃತ್ತಿಯ ಐಪಿಎಲ್ ಟೂರ್ನಿ ಏಪ್ರಿಲ್ 7ರಂದು ಆರಂಭವಾಗಲಿದ್ದು, ಟೂರ್ನಿ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಶಾಕ್ ಎದುರಾಗಿದೆ.
ತಂಡದ ಖತರ್ನಾಕ್ ವೇಗಿ ಆಸ್ಟ್ರೇಲಿಯಾದ ನೇಥನ್ ಕುಲ್ಟರ್‌ನೈಲ್ ರಾಯಲ್ ಚಾಲೆಂಜರ್ಸ್ ಪಡೆಯಿಂದ ಹೊರ ಬಿದ್ದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಕುಲ್ಟರ್‌ನೈಲ್ ಇನ್ನೂ ಚೇತರಿಸಿಕೊಂಡಿಲ್ಲವಾದ ಕಾರಣ ಐಪಿಎಲ್-11ರಲ್ಲಿ ಅವರು ಆಡುವುದಿಲ್ಲ. ಅವರ ಬದಲು ನ್ಯೂಜಿಲೆಂಡ್‌ನ ಬಿಗ್ ಹಿಟ್ಟಿಂಗ್ ಆಲ್ರೌಂಡರ್ ಕೋರೆ ಆ್ಯಂಡರ್ಸನ್ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ.

PC: Twitter/Correy Anderson

ಟಿ20 ಕ್ರಿಕೆಟ್‌ನಲ್ಲಿ ಕರಾರುವಾಕ್ ದಾಳಿಗೆ ಖ್ಯಾತಿ ಪಡೆದಿರುವ ನೇಥನ್ ಕುಲ್ಟರ್‌ನೈಲ್ ಅವರನ್ನು ರಾಯಲ್ ಚಾಲೆಂಜರ್ಸ್ ತಂಡ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ 2.20 ಕೋಟಿ ರೂ.ಗಳ ಮೊತ್ತ ನೀಡಿ ಖರೀದಿ ಮಾಡಿತ್ತು. ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಕುಲ್ಟರ್‌ನೈಲ್, ಕಳೆದ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಕೇವಲ 49 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. 2017ರ ಏಪ್ರಿಲ್ 23ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ್ದ ಕುಲ್ಟರ್‌ನೈಲ್ 21 ರನ್ನಿತ್ತು 3 ವಿಕೆಟ್ ಪಡೆದಿದ್ದರು.

PC: Twitter

ಕುಲ್ಟರ್‌ನೈಲ್ ಅವರ ಅಲಭ್ಯತೆ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಎದುರಾಗಿರುವ ದೊಡ್ಡ ಹಿನ್ನಡೆಯೇ ಸರಿ. ಅವರ ಸ್ಥಾನದಲ್ಲಿ ತಂಡ ಸೇರಿಕೊಂಡಿರುವ ಕೋರೆ ಆ್ಯಂಡರ್ಸನ್ ಐಪಿಎಲ್ ಹರಾಜಿನಲ್ಲಿ ಯಾವ ತಂಡಕ್ಕೂ ಮಾರಾಟವಾಗದೆ ಉಳಿದಿದ್ದರು.

Related Articles