Friday, September 22, 2023

ಇರಾನಿ ಕಪ್: ವಾಸಿಂ ಜಾಫರ್ ಅಜೇಯ ಶತಕ, ಮೊದಲ ದಿನ ವಿದರ್ಭ ಮೇಲುಗೈ

ನಾಗ್ಪುರ: ಶೇಷ ಭಾರತ ತಂಡದ ವಿರುದ್ಧ ಬುಧವಾರ ಆರಂಭಗೊಂಡ ಇರಾನಿ ಕಪ್ ಪಂದ್ಯದ ಮೊದಲ ದಿನದ ಗೌರವವನ್ನು ಆತಿಥೇಯ ವಿದರ್ಭ ತಂಡ ತನ್ನದಾಗಿಸಿಕೊಂಡಿದೆ.
ವಿಸಿಎ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಣಜಿ ಚಾಂಪಿಯನ್ ವಿದರ್ಭ, ಪ್ರಥಮ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿದೆ.
ನಾಯಕ ಫಯಾಜ್ ಫಜಲ್ 89 ರನ್‌ಗಳಿಗೆ ಔಟಾಗಿ ಶತಕ ವಂಚಿತರಾದರೆ, 40ರ ಹರೆಯದ ಅನುಭವಿ ಬ್ಯಾಟ್ಸ್‌ಮನ್ ವಾಸಿಂ ಜಾಫರ್(ಅಜೇಯ 113) ಅಜೇಯ ಶತಕ ಬಾರಿಸಿದ್ದು, ಕರ್ನಾಟಕದ ಗಣೇಶ್ ಸತೀಶ್(ಅಜೇಯ 29) ಅವರೊಂದಿಗೆ 2ನೇ ದಿನ ಆಟ ಮುಂದುವರಿಸಲಿದ್ದಾರೆ.

PC: Twitter/Faiz Fazal

ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿ 900ಕ್ಕೂ ಹೆಚ್ಚು ರನ್ ಗಳಿಸಿದ್ದ ವಿದರ್ಭ ತಂಡದ ನಾಯಕ ಫಯಾಜ್ ಫಜಲ್, ಮೊದಲ ವಿಕೆಟ್‌ಗೆ ಸಂಜಯ್ ರಾಮಸ್ವಾಮಿ ಅವರೊಂದಿಗೆ 101 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಅಡಿಪಾಯ ನಿರ್ಮಿಸಿಕೊಟ್ಟರು. 53 ರನ್ ಗಳಿಸಿ ಆಡುತ್ತಿದ್ದ ಸಂಜಯ್ ವಿಕೆಟ್ ಪಡೆದ  ಆಫ್ ಸ್ಪಿನ್ನರ್ ಜಯಂತ್ ಯಾದವ್ ಶೇಷ ಭಾರತ ತಂಡಕ್ಕೆ ಮೊದಲ ಯಶಸ್ಸು ತಂದು ಕೊಟ್ಟರು.
ಆದರೆ ಕರುಣ್ ನಾಯರ್ ಮುಂದಾಳತ್ವದ ಶೇಷ ಭಾರತ ತಂಡಕ್ಕೆ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಫಜಲ್ ಮತ್ತು ಜಾಫರ್ ಜೋಡಿ 2ನೇ ವಿಕೆಟ್‌ಗೆ 117 ರನ್ ಸೇರಿಸಿ ತಂಡದ ಹಿಡಿತವನ್ನು ಮತ್ತಷ್ಟು ಭದ್ರ ಪಡಿಸಿದರು. ಈ ಸಂದರ್ಭದಲ್ಲಿ ಶತಕದತ್ತ ಮುನ್ನುಗ್ಗುತ್ತಿದ್ದ ಫಜಲ್, ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರ ಮೋಡಿಗೆ ಬಲಿಯಾಗಿ ಶತಕ ವಂಚಿತರಾದರು.
ಸಂಕ್ಷಿಪ್ತ ಸ್ಕೋರ್
ವಿದರ್ಭ: ಪ್ರಥಮ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 2 ವಿಕೆಟ್‌ಗೆ 289 ರನ್
ಫಯಾಜ್ ಫಜಲ್ 89, ಸಂಜಯ್ ರಾಮಸ್ವಾಮಿ 53, ವಾಸಿಂ ಜಾಫರ್ ಅಜೇಯ 113, ಗಣೇಶ್ ಸತೀಶ್ ಅಜೇಯ 29; ರವಿಚಂದ್ರನ್ ಅಶ್ವಿನ್ 1/66, ಜಯಂತ್ ಯಾದವ್ 1/73.

Related Articles