Friday, September 22, 2023

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಕ್ವಾರ್ಟರ್ ಫೈನಲ್‌ಗೆ ಪಿ.ವಿ ಸಿಂಧೂ

ಬರ್ಮಿಂಗ್‌ಹ್ಯಾಮ್: ಭಾರತದ ಟಾಪ್ ಮಹಿಳಾ ಶಟ್ಲರ್ ಹಾಗೂ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧೂ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

PC: Twitter/Yonex All England

ಗುರುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ 4ನೇ ರ್ಯಾಂಕ್‌ನ ಆಟಗಾರ್ತಿ ಪಿ.ವಿ ಸಿಂಧೂ, ವಿಶ್ವದ 12ನೇ ರ್ಯಾಂಕ್‌ನ ನಿಚಾವನ್ ಜಿಂದಪೊಲ್ ಅವರನ್ನು 21-13, 13-21, 21-18 ಅಂತರದಲ್ಲಿ ಸೋಲಿಸಿ ಅಂತಿಮ 8ರ ಘಟ್ಟಕ್ಕೆ ಮುನ್ನಡೆದರು. ಜಿಂದಪೊಲ್ ಈ ಚಾಂಪಿಯನ್‌ಷಿಪ್‌ನಲ್ಲಿ ಶ್ರೇಯಾಂಕ ರಹಿತವಾಗಿ ಕಣಕ್ಕಿಳಿದಿದ್ದರು.
ಭಾರತದ ಅಗ್ರಮಾನ್ಯ ಮಹಿಳಾ ಸಿಂಗಲ್ಸ್ ಆಟಗಾರ್ತಿಯಾಗಿರುವ ಹೈದ್ರಾಬಾದ್‌ನ 27 ವರ್ಷದ ಸಿಂಧೂ, ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ನಜೋಮಿ ಒಕುಹಾರ ಮತ್ತು ಇಂಡೋನೇಷ್ಯಾದ ಫ್ರಿಟ್ರಿಯಾನಿ ಫಿಟ್ರಿಯಾನಿ ನಡುವಿನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಗ್ಲಾಸ್ಗೊದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ನಜೋಮಿ ಒಕುಹಾರ ವಿರುದ್ಧದ ರೋಚಕ ಪಂದ್ಯದಲ್ಲಿ ಸೋಲುಂಡಿದ್ದ ಸಿಂಧೂ ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟಿದ್ದರು.
ಸ್ಟಾರ್ ಶಟ್ಲರ್ ಸಿಂಧೂ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ.

Related Articles