ಕರ್ನಾಟಕ ಫುಟ್ಬಾಲ್‌ನ ಉಸಿರು ಚಿಕ್ಕಚನ್ನಯ್ಯಗೆ ವಾರ್ಷಿಕ ಗೌರವ
ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯಲ್ಲಿ ಹೊಸ ವರುಷದ ಶುಭ ಅವಸರದಲ್ಲಿ ಒಂದು ಉತ್ತಮ ಕಾರ್ಯ ನಡೆಯಿತು. ಮೊದಲ ಬಾರಿಗೆ ವಾರ್ಷಿಕ ಪ್ರಶಸ್ತಿ ನೀಡುವ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಈ ರಾಜ್ಯದ ಫುಟ್ಬಾಲ್ ಅಭಿವೃದ್ಧಿಗೆ ಹಲವಾರು ದಶಕಗಳಿಂದ ಶ್ರಮಿಸುತ್ತಿದ್ದು, “ಫುಟ್ಬಾಲ್ ಕ್ರೀಡೆ ಅಭಿವೃದ್ಧಿಗಾಗಿ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು,” ಎಂಬ ಸಂದೇಶದೊಂದಿಗೆ ಫುಟ್ಬಾಲ್‌ಗೆ ಸಂಬಂಧಿಸಿದ ಸುದ್ದಿ ಕಳುಹಿಸುವ ಇಳಿ ವಯಸ್ಸಿನ ಉತ್ಸಾಹದ ಚೇತನ ಚಿಕ್ಕಚನ್ನಯ್ಯ, [ಫುಟ್ಬಾಲ್ ವಲಯದಲ್ಲಿ “ಚಿಕ್ಕಣ್ಣ” ಎಂದೇ ಖ್ಯಾತಿ ಪಡೆದಿರುವ] ಅವರನ್ನು ವಿಶೇಷ ಪ್ರಶಸ್ತಿ ನೀಡಿ ಗೌರವಿಸಿರುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ವಿಷಯ. The Karnataka State Football Association has honored Chikkachannaiah with an annual award, an honor bestowed upon true achievers.
ಒಂದು ಕ್ರೀಡೆ ಬೆಳೆಯಬೇಕಾದರೆ ಆ ಕ್ರೀಡೆಯ ಬಗ್ಗೆ ಅಪಾರವಾದ ಪ್ರೀತಿ ಇರಬೇಕು, ಆ ಕ್ರೀಡೆಯನ್ನು ಉತ್ತಮ ರೀತಿಯಲ್ಲಿ ನಿರ್ಹವಣೆ ಮಾಡಿ, ಆಟಗಾರರಿಗೆ ಪ್ರೋತ್ಸಾಹ ನೀಡಬೇಕು, ಚಿಕ್ಕ ಚನ್ನಯ್ಯ ಅವರು ಕಳೆದ ಮೂರು ದಶಕಗಳಿಂದ ಈ ಕಾರ್ಯವನ್ನು ಚಾಚೂ ತಪ್ಪದೆ ಮಾಡುತ್ತಿದ್ದಾರೆ. 76 ವರ್ಷ ವರ್ಷದಲ್ಲೂ ಉತ್ಸಾಹದ ಚಿಲುಮೆಯಾಗಿರುವ ಚಿಕ್ಕಚನ್ನಯ್ಯ ಅವರು ಯುವಕರನ್ನೇ ನಾಚಿಸುತ್ತಿದ್ದಾರೆ.
ಏರೊನಾಟಿಕಲ್ ಡೆವಲಪ್‌ಮೆಂಟ್ ಎಷ್ಟಾಬ್ಲಿಷ್ಮೆಂಟ್ (Aeronautical Development Establishment) ನಲ್ಲಿ ಉದ್ಯೋಗಿಯಾಗಿದ್ದ ಚಿಕ್ಕಚನ್ನಯ್ಯ ಅವರು ಅಲ್ಲಿಯ ಫುಟ್ಬಾಲ್ ಕ್ಲಬ್‌ನ ಕಾರ್ಯದರ್ಶಿಯಾಗಿ ತಂಡದ ಯಶಸ್ಸಿಗಾಗಿ ಶ್ರಮಿಸಿದವರು. ADE ಕ್ಲಬ್ ರಾಜ್ಯದಲ್ಲೇ ಉತ್ತಮ ಫುಟ್ಬಾಲ್ ಆಟಗಾರರನ್ನು ಹೊಂದಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದೆ.
ಅತ್ಯಂತ ಶಿಸ್ತಿನ ಸಿಪಾಯಿ ಆಗಿದ್ದ ಚಿಕ್ಕಚನ್ನಯ್ಯ ಅವರು, ತಾವು ಯಾವ ಕೆಲಸವನ್ನು ಮಾಡುತ್ತಾರೋ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಮೊದಲು ಬೆಂಗಳೂರಿನ ಜೈ ಹನುಮಾನ ವ್ಯಾಯಾಮ ಶಾಲೆಯಲ್ಲಿ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಕಾರ್ಯದರ್ಶಿ ಟಿ.ಆರ್. ಸ್ವಾಮಿ ಅವರ ಆದರ್ಶದಲ್ಲಿ ಬೆಳೆದರು. ಕುಸ್ತಿಪಟುಗಳು ಮಾಡುವ ಸಾಧನೆಯನ್ನು ಪತ್ರಿಕೆಗಳ ಕಚೇರಿಗೆ ಹೋಗಿ ತಲುಪಿಸುತ್ತಿದ್ದರು. 1981-82ರಲ್ಲಿ ರಾಷ್ಟ್ರೀಯ ಕುಸ್ತಿ ದೆಹಲಿಯಲ್ಲಿ ನಡೆದಾಗ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ನಂತರ ಫುಟ್ಬಾಲ್ ಆಟಗಾರರ ಸಾಧನೆಗಳನ್ನು ಪತ್ರಿಕಾ ಕಚೇರಿಗೆ ತಲುಪಿಸುತ್ತಿದ್ದರು. ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಬೆಂಗಳೂರು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‌ನಲ್ಲಿ ಕಾರ್ಯನಿರ್ವಹಿಸಿದ ಚಿಕ್ಕಚನ್ನಯ್ಯ ಅವರು, ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯಷನ್‌ನ ಪ್ರಮುಖರಾದ ಲಕ್ಷ್ಮೀನಾರಾಯಣ, ಎ ಆರ್ ಖಲೀಲ್ ಹಾಗೂ ಎಸ್ ಟಿ ಭೋಪಾಲ್ ಇವರ ಕಾರ್ಯ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಲೀಗ್ ಕಮಿಟಿ ಸದಸ್ಯರು, ಮಾಧ್ಯಮ ಸಮನ್ವಯಕಾರರು ಮೊದಲ ಜವಾಬ್ದಾರಿ ನೀಡಿದರು. ಬಿಡಿಎಫ್‌ಎ ನಲ್ಲಿ ಸಹಾಯಕ ಕಾರ್ಯದರ್ಶಿಯಾಗಿದ್ದ ಚಿಕ್ಕಚನ್ನಯ್ಯ ಅವರು ಈಗ ಬಿಡಿಎಫ್‌ಎ ಹಿರಿಯ ಸದಸ್ಯರಾಗಿದ್ದಾರೆ.

ಚಿಕ್ಕಚನ್ನಯ್ಯ ಅವರು ಈಗ ವಾಟ್ಸ್ಆಪ್ ಮತ್ತು ಇ-ಮೇಲ್ ಮೂಲಕ ಸುದ್ದಿ ಕಳುಹಿಸುತ್ತಾರೆ. ಮೊದ ಮೊದಲು ಪತ್ರಿಕಾ ಕಚೇರಿಗೆ ಹೋಗಿ ಪಂದ್ಯಗಳ ಫಲಿತಾಂಶ ನೀಡುತ್ತಿದ್ದ ಚಿಕ್ಕಚನ್ನಯ್ಯ ಅವರು, ನಂತರ ಟೆಲಿಫೋನ್ ಮೂಲಕ ಕರೆ ಮಾಡಿ ತಿಳಿಸುತ್ತಿದ್ದರು. ಪಂದ್ಯ ತಡವಾಗಿ ಮುಗಿದಾಗ ಪತ್ರಿಕೆಗಳಿಗೆ ತಡವಾಗುತ್ತದೆ ಎಂದು ಪಕ್ಕದಲ್ಲಿರುವ ಕಾಯಿನ್‌ಬೂತ್‌ಗೆ ಹೋಗಿ ಫಲಿತಾಂಶ ನೀಡುತ್ತಿದ್ದರು. ಹೀಗೆ ಫುಟ್ಬಾಲ್ ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಚಿಕ್ಕಚನ್ನಯ್ಯ ಅವರನ್ನು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಮೊದಲ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗುರುತಿಸಿ ಪ್ರೋತ್ಸಾಹಿಸಿರುವುದು ಅರ್ಥಪೂರ್ಣ.

ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಚಿಕ್ಕಚನ್ನಯ್ಯ, “ಬೆಂಗಳೂರಿನಲ್ಲಿ ಈಗ ಕ್ಲಬ್‌ಗಳ ಸಂಖ್ಯೆ ಹೆಚ್ಚಾಗಿದೆ. ಯುವಕರು ಬಹಳಷ್ಟು ಸಂಖ್ಯೆಯಲ್ಲಿ ಫುಟ್ಬಾಲ್ ಅಡುತ್ತಿದ್ದಾರೆ. ಅಧ್ಯಕ್ಷರಾದ ಎನ್.ಎ. ಹ್ಯಾರೀಸ್ ಕಾರ್ಯದರ್ಶಿಗಳಾದ ಕುಮಾರ್ ಎಂ. ಅವರು ಹೊಸ ಯೋಜನೆಗಳನ್ನು ರೂಪಿಸಿ ಫುಟ್ಬಾಲ್ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅಖಿಲ ಭಾರತ ಫುಟ್ಬಾಲ್ ಸಂಸ್ಥೆಯ ಡೆಪ್ಯೂಟಿ ಕಾರ್ಯದರ್ಶಿ ಸತ್ಯನಾರಾಯಣ ಎಂ. ಅವರು ರಾಜ್ಯದ ಫುಟ್ಬಾಲ್‌ಗಾಗಿ ಶ್ರಮಿಸುತ್ತಿದ್ದಾರೆ. ವಾರ್ಷಿಕ ಪ್ರಶಸ್ತಿ ಕಾರ್ಯಕ್ರಮ ಅರ್ಥಪೂರ್ಣ,” ಎಂದರು.

ಚಿಕ್ಕಚನ್ನಯ್ಯ ಅವರ ಫುಟ್ಬಾಲ್ ಸೇವೆಯಲ್ಲಿ ಅವರ ಪತ್ನಿ ಪದ್ಮಾ ವಿ. ಅವರ ಪಾತ್ರ ಪ್ರಮುಖವಾಗಿದೆ. ಮಗ ಲೋಹಿತ್ ಸಿ ಫುಟ್ಬಾಲ್ ಆಟಗಾರ. ಸುರೇಶ್ ಸಿ. ಕೂಡ ತಂದೆಯ ಫುಟ್ಬಾಲ್ ಪ್ರೀತಿಗೆ ಪ್ರೋತ್ಸಾಹ ನೀಡಿದ್ದಾರೆ.
ಫುಟ್ಬಾಲ್ ಸಾಧಕರ ಕುರಿತು ಪ್ರಚಾರ ಮಾಡುವ ಚಿಕ್ಕಚನ್ನಯ್ಯ ಅವರು ಎಂದಿಗೂ ತನ್ನ ಪ್ರಚಾರವನ್ನು ಬಯಸಿದವರಲ್ಲ. ರಾತ್ರಿ 12 ಗಂಟೆಯಾದರೂ ಫುಟ್ಬಾಲ್ ಬಗ್ಗೆ ಮಾಹಿತಿ ನೀಡುತ್ತಾರೆ. ಬುಧವಾರ ರಾತ್ರಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಅವರನ್ನು ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಆದರೆ ಎಲ್ಲಿಯೂ ಅವರು ಆ ಫೋಟೋವನ್ನು ಹಂಚಿಕೊಂಡಿಲ್ಲ. “ಬೇಡ ಬಿಡಿ ಸರ್,” ಎಂದು ಸುಮ್ಮನಾಗುತ್ತಾರೆ.


