Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅಂದು ಹಸಿವಿನಿಂದ ಹೊರಟ ಹುಡುಗ ಇಂದು ವಿಶ್ವಕಪ್‌ ತಂಡದಲ್ಲಿ

ಶಿವಮೊಗ್ಗ: ಭಾರತೀಯ ಹಾಕಿಗೆ ನೂರು ವರುಷಗಳ ಸಂಭ್ರಮ. ಕರ್ನಾಟಕಕ್ಕೆ ನೂರಾರು ಹರುಷಗಳ ಸಂಭ್ರಮ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುಟ್ಟ ಹಳ್ಳಿ ತಲ್ಲೂರಿನಲ್ಲಿ ಎಷ್ಟು ಸಂಭ್ರಮವಿದೆಯೋ ತಿಳಿಯದು. ಆದರೆ ಕರ್ನಾಟಕದ ಎಲ್ಲ ಹಾಕಿ ಪ್ರಿಯರು, ಕರ್ನಾಟಕ ಕ್ರೀಡಾ ಇಲಾಖೆ ಹಾಗೂ ಅಲ್ಲಿಯ ಹಾಕಿ ಕೋಚ್‌ ಸುಂದರೇಶ್‌ ಶಿವಮೊಗ್ಗ ಇವರು ಸಂಭ್ರಮದಲ್ಲಿದ್ದಾರೆ. ಏಕೆಂದರೆ ಹಳ್ಳಿಯ ಪ್ರತಿಭೆ ಸುನಿಲ್‌ ಪಾಲಾಕ್ಷಪ್ಪ ಬೆನ್ನೂರ್‌ ಜೂನಿಯರ್‌ ವಿಶ್ವಕಪ್‌ನಲ್ಲಿ ಸಸ್ಪರ್ಧಿಸಲಿರುವ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಖುಷಿಯ ನಡುವೆ ಸುನಿಲ್‌ ಅವರ ಮನೆಯನ್ನು ಕಂಡಾಗ ಮನ ಕರಗುತ್ತದೆ. The boy who left hungry that day is now in the Junior World Cup Hockey team, see the plight of the champion player’s home in Shivamogga.

ಭಾರತ ತಂಡ ಇದೇ ನವೆಂಬರ್‌ 28 ರಿಂದ ಡಿಸೆಂಬರ್‌ 10 ರ ವರೆಗೆ ಚೆನ್ನೈನಲ್ಲಿ ಜೂನಿಯರ್‌ ಪುರುಷರ ಹಾಕಿ ಚಾಂಪಿಯನ್‌ಷಿಪ್‌ ಆಡಲಿದೆ. ಇತ್ತೀಚಿಗೆ ನಡೆದ ಸುಲ್ತಾನ್‌ ಆಫ್‌ ಜೊಹಾರ್‌ ಕಪ್‌ನಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆಲ್ಲುವಲ್ಲಿ ಸುನಿಲ್ ಪ್ರಮುಖ ಪಾತ್ರವಹಿಸಿದ್ದರು. ಜರ್ಮನಿ ಹಾಗೂ ನೆದರ್ಲೆಂಡ್‌ ವಿರುದ್ಧದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಸಾಧನೆಯ ಇಂದು ವಿಶ್ವಕಪ್‌ನಲ್ಲಿ ಸ್ಥಾನ ಸಿಕ್ಕಿದೆ. ಭಾರತ ಹಾಕಿಯ ಶ್ರೇಷ್ಠ ತಡೆಗೋಡೆ, ಒಲಿಂಪಿಯನ್‌ ಪಿ.ಆರ್‌. ಶ್ರೀಜೇಶ್ ಅವರ ತರಬೇತಿಯಲ್ಲಿ ಪಳಗಿರುವ ಸುನಿಲ್‌ ಅತ್ಯಂತ ಆತ್ಮವಿಶ್ವಾಸ ಹೊಂದಿರುವ ಆಟಗಾರ.

ಬಡವರ ಮನೆಯ ಪ್ರತಿಭೆ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತಲ್ಲೂರು ಗ್ರಾಮದ ಪಾಲಾಕ್ಷಪ್ಪ ಹಾಗೂ ರತ್ನಮ್ಮ ದಂಪತಿಯ ಎರಡನೇ ಮಗ ಸುನಿಲ್‌. ಪಾಲಾಕ್ಷಪ್ಪ ಅವರಿಗೆ ಕರೆಂಟ್‌ ಶಾಕ್‌ ಹೊಡೆದು ಕೆಲಸ ಮಾಡಲಾಗುತ್ತಿಲ್ಲ. ತಾಯಿ ರತ್ನಮ್ಮ ಬೇರೆಯವರ ತೋಟದಲ್ಲಿ ಕೂಲಿ ಮಾಡುತ್ತಿದ್ದಾರೆ. ಸನಿಲ್‌ ಅವರ ಅಣ್ಣ ಸುದೀಪ್‌ ಐಐಟಿ ಶಿಕ್ಷಣ ಮಾಡಿದ್ದರೂ, ತಂದೆಯ ಅನಾರೋಗ್ಯದ ಕಾರಣ ಬೆಂಗಳೂರಿನಲ್ಲಿದ್ದ ಕೆಲಸ ತೊರೆದು ಈಗ ಊರಿನಲ್ಲೇ ಇದ್ದಾರೆ.

ಹಾಕಿ ಅಂಗಣಕ್ಕೆ ಕರೆ ತಂದ ಹಸಿವು:

ಸುನಿಲ್‌ ಶಿವಮೊಗ್ಗದಲ್ಲಿ ನಾಲ್ಕನೇ ತರಗತಿ ಓದುತ್ತಿರುವಾಗ ಅವರನ್ನು ಗುರುತಿಸಿದ್ದು, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಹಾಕಿ ಕೋಚ್‌ ಸುಂದರೇಶ್‌. ಆಗ ಸುನಿಲ್‌ಗೆ ಗೊತ್ತಿದ್ದುದು ಹಸಿವು ಮಾತ್ರ. ಹುಡಗಲ್ಲಿರುವ ಹಸಿವನ್ನು ಹಾಕಿಯ ಹಸಿವನ್ನಾಗಿ ಪರಿವರ್ತಿಸಿದ್ದು ಸುಂದರೇಶ್‌.

ಶುಕ್ರವಾರ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ SPORTSMAIL ಜೊತೆ ಮಾತನಾಡಿದ ಸುನಿಲ್‌, “ನಾನು ನಾಲ್ಕನೇ ತರಗತಿಯಲ್ಲಿ ಓದುತ್ತಿರುವಾಗ ಸುಂದರೇಶ್‌ ಸರ್‌ ನಮ್ಮ ಶಾಲೆಗೆ ಬಂದಿದ್ದರು. ಹಾಕಿಗೆ ಆಯ್ಕೆ ಮಾಡುತ್ತೇವೆ ಎಂದು ಹೇಳಿರುವುದಕ್ಕಿಂತ, ಉಚಿತ ಊಟ, ತಿಂಡಿ ಸಿಗುತ್ತದೆ ಎಂದರು. ನನಗೆ ಆಗ ಬೇಕಾಗಿರುದು ಊಟ ತಿಂಡಿ. ಅದಕ್ಕಾಗಿ ನಾಲ್ಕನೇ ತರಗತಿಯಿಂದ ಹಾಕಿಗೆ ಸೇರಿದೆ. ಶಿವಮೊಗ್ಗದ ಕ್ರೀಡಾ ಹಾಸ್ಟೆಲ್‌, ಭಾರತೀಯ ಕ್ರೀಡಾ ಪ್ರಾಧಿಕಾರ ಎಲ್ಲವನ್ನೂ ನಾನು ಈ ಸಂದರ್ಭದಲ್ಲಿ ಸ್ಮರಿಸುವೆ. ನನ್ನನ್ನು ಗುರುತಿಸಿ ಪ್ರೋತ್ಸಾಹಿಸಿದ ಸುಂದರೇಶ್‌ ಸರ್‌‌ಗೆ ನಾನು ಚಿರ ಋಣಿ. ಅಂದು ಹಸಿವನ್ನು ನೀಗಿಸಸಿದ ಅವರು ಬದುಕನ್ನೇ ಕಲ್ಪಿಸಿದರು,” ಎಂದರು. ತನ್ನ ಬದುಕಿಗೆ ನೆರವು ನೀಡಿದ ಸುಂದರೇಶ್‌ ಶಿವಮೊಗ್ಗ, ಅಂಕಿತಾ. ಕವಿಯರಸನ್‌, ಹರಿಹರನ್‌, ವಿಜಯ ಹಾಗೂ ವೆಂಕಟೇಶ್‌ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

ಸುನಿಲ್‌ ಅದ್ಭುತ ಆಟಗಾರ: ಸುಂದರೇಶ್‌

ಶಿವಮೊಗ್ಗದ ಸುನಿಲ್‌ ಜೂನಿಯರ್‌ ವಿಶ್ವಕಪ್‌ಗೆ ಆಯ್ಕೆಯಾಗಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿರುವ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಹಾಕಿ ಕೋಚ್‌ ಸುಂದರೇಶ್‌, “ನಿಜವಾಗಿಯೂ ಇದೊಂದು ಅದ್ಭುತ ಸಾಧನೆ. ನೂರು ವರುಷದ ಸಂಭ್ರಮದಲ್ಲಿರುವ ಹಾಕಿಗೆ ಗ್ರಾಮೀಣ ಪ್ರದೇಶದಿಂದ ಒಬ್ಬ ಬಾಲಕ ದೇಶದ ಪರ ಆಡುತ್ತಿರುವುದು ಹೆಮ್ಮೆಯ ಸಂಗತಿ. ಸುನಿಲ್‌ನನ್ನು ಮೊದಲ ಬಾರಿಗೆ ಕಂಡಾಗ ಈತನಿಗೆ ಉತ್ತಮ ತರಬೇತಿ ನೀಡಿದರೆ ಮುಂದೊಂದು ದಿನ ಜಗತ್ತಿನ ಉತ್ತಮ ಆಟಗಾರನಾಗಬಲ್ಲ ಎಂಬುದನ್ನು ನಾನು ಅಂದೇ ಊಹಿಸಿದ್ದೆ.

ಅದಕ್ಕಿಂತ ಮುಖ್ಯವಾಗಿ ಆ ಕ್ಷಣಕ್ಕೆ ಹಸಿವನ್ನು ನೀಗಿಸಬೇಕಾಗಿತ್ತು. ಉಚಿತ ತಿಂಡಿ ಊಟ ಸಿಗುತ್ತದೆ ಎಂದು ಆಸೆ ತೋರಿಸಿದೆ. ಈಗ ಹಾಕಿ ಆತನಿಗೆ ಬದುಕು ನೀಡುತ್ತಿದೆ. ಸುನಿಲ್‌ ನಿಜವಾಗಿಯೂ ಉತ್ತಮ ಆಟಗಾರ. ಮುಂದೊಂದು ದಿನ ಜಾಗತಿಕ ಹಾಕಿಯಲ್ಲಿ ಆತ ಅದ್ಭುತ ಸಾಧನೆ ಮಾಡುತ್ತಾನೆಂಬ ನಂಬಿಕೆ ಇದೆ,” ಎಂದರು. ಶಿವಮೊಗ್ಗದ ಸುಂದರೇಶ್‌ ಅವರು ಸದ್ಯ ಮೈಸೂರಿನಲ್ಲಿ ಹಾಕಿ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ನೂರಾರು ಹಾಕಿಪಟುಗಳಿಗೆ ಬದುಕು ನೀಡಿದ್ದಾರೆ.

ಮುರಿದ ಮನೆಯಲ್ಲಿ, ಒಂದೇ ಕೊಠಡಿಯಲ್ಲಿ ಸಾಗಿದೆ ಬದುಕು:

ಸುನಿಲ್‌ ಜೊತೆ ಮಾತನಾಡುತ್ತಿರುವಾಗ ಸ್ವಲ್ಪ ಹೊತ್ತು ಮಾತು ನಿಂತಿತು. “ಏನಾಯ್ತು?” ಎಂದು ಕೇಳಿದೆ. “ನಿಮಗೊಂದು ಫೋಟೋ ಕಳುಹಿಸಿದ್ದೇನೆ ಸರ್‌, ಅದು ನಮ್ಮ ಮನೆ” ಎಂದ. ಕೂಡಲೇ ಮನೆಯ ಚಿತ್ರ ನೋಡಿದಾಗ ಮನಸ್ಸಿಗೆ ಬಹಳ ನೋವಾಯಿತು. 2008ರಲ್ಲಿ ಮಳೆಗಾಳಿಯಂದಾಗಿ ಸುನಿಲ್‌ ಅವರು ವಾಸಿಸುತ್ತಿದ್ದ ಮನೆ ಮುರಿದು ಬಿದ್ದಿತ್ತು. ಆದರೆ ಮರಳಿ ಮನೆಯನ್ನು ಕಟ್ಟಲಾಗಲಿಲ್ಲ. ಒಂದೇ ಕೊಠಡಿಯಲ್ಲಿ ಸಾಗಿದೆ ಈ ಚಾಂಪಿಯನ್‌ ಬದುಕು.

“ನಾನು ಕ್ಯಾಂಪ್‌ನಲ್ಲಿ ಇರುತ್ತೇನೆ, ಆಲ್ಲಿ ಉತ್ತಮ ಆಹಾರ, ವಸತಿ ಎಲ್ಲವೂ ಸಿಗುತ್ತದೆ. ಆದರೆ ನನ್ನ ಹೆತ್ತವರನ್ನು ನೆನೆದಾಗ ನೋವಾಗುತ್ತದೆ. ಕೂಡಲೇ ನಮ್ಮ ಮನೆಯನ್ನು ಕಟ್ಟಬೇಕು. ಅವರು ಬದಕಿನ ಉಳಿದ ದಿನಗಳನ್ನು ನೆಮ್ಮದಿಯಲ್ಲಿ ಕಳೆಯುವಂತೆ ಮಾಡಬೇಕು,” ಎನ್ನುತ್ತಾರೆ ಸುನಿಲ್‌.

ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಗಮನಕ್ಕೆ:

ಸೊಬರ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಊರು ಮತ್ತು ಕ್ಷೇತ್ರ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪವನವರು ಕ್ರೀಡೆಗೆ ಉತ್ತಮ ಪ್ರೋತ್ಸಾಹ ನೀಡಿದವರು. ಹಳ್ಳಿಯ ಪ್ರತಿಭೆ ಸುನಿಲ್‌ ಅವರ ಕಷ್ಟಕ್ಕೆ ಸ್ಪಂದಿಸಬೇಕಾದ ಅನಿವಾರ್ಯತೆ ಇದೆ. ಭಾರತೀಯ ಹಾಕಿ  ನೂರು ವರ್ಷಗಳನ್ನು ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಕರ್ನಾಟಕದ ಅಂತಾರಾಷ್ಟ್ರೀಯ ಹಾಕಿ ಆಟಗಾರನಿಗೆ ನೆರವಾದರೆ ಅದು ಕನ್ನಡಿಗರ ನೆನಪಿನ ಅಂಗಣದಲ್ಲಿ ಹಸಿರಾಗಿ ಉಳಿಯಲಿದೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.