ಜೊಕೊವಿಚ್‌, ಹಲೆಪ್‌ 2018ರ ಐಟಿಎಫ್‌ ವಿಶ್ವ ಚಾಂಪಿಯನ್ಸ್‌

0
248

ಲಂಡನ್‌:

ಸರ್ಬಿಯಾ ಟೆನಿಸ್‌ ತಾರೆ ನೊವಾಕ್‌ ಜೊಕೊವಿಚ್‌ ಹಾಗೂ ರೊಮಾನಿಯಾದ ಸಿಮೋನ ಹಲೆಪ್‌ ಅವರು 2018ರ ಐಟಿಎಫ್‌ ವಿಶ್ವ ಚಾಂಪಿಯನ್‌ ಗೌರವಕ್ಕೆ ಭಾಜನರಾದರು.

ಈ ಕುರಿತು ಅಂತಾರಾಷ್ಟ್ರೀಯ ಟೆನಿಸ್‌ ಒಕ್ಕೂಟ ಮಂಗಳವಾರ ಘೋಷಿಸಿದೆ. ಆ ಮೂಲಕ ವಿಶ್ರ ಅಗ್ರ ಕ್ರಮಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ವೃತ್ತಿ ಜೀವನದಲ್ಲಿ ಐದನೇ ಬಾರಿ ಚಾಂಪಿಯನ್‌ ಆದಂತಾಯಿತು. ಇನ್ನು, ಸಿಮೋನ ಹಲೆಪ್‌ ವೃತ್ತಿ ಜೀವನದಲ್ಲಿ ಚೊಚ್ಚಲ ಚಾಂಪಿಯನ್‌ ಆದರು.
ಮತ್ತೊಮ್ಮೆ ಐಟಿಎಫ್‌ ವಿಶ್ವ ಚಾಂಪಿಯನ್‌ ಗೌರವ ನೀಡಿರುವುದು ಹೆಚ್ಚು ಖುಷಿ ತಂದಿದೆ. ಪ್ರಸಕ್ತ ವರ್ಷದಲ್ಲಿ  ದೈಹಿಕ ಸಾಮರ್ಥ್ಯದಿಂದ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ. ಹಂತ ಹಂತವಾಗಿ ಮೇಲ್ದರ್ಜೆಗೆ  ಏರುತ್ತೇನೆಂದು ವಿಶ್ವಾಸ ನನ್ನಲ್ಲಿತ್ತು. ಆರು ಬಾರಿ ಐಟಿಎಫ್‌ ವಿಶ್ವ ಚಾಂಪಿಯನ್‌ ಪ್ರಶಸ್ತಿ ಗೆದ್ದಿರುವ ಪೆಟೆ ಸ್ಯಾಂಪ್ರಸ್ ಅವರ ಕ್ಲಬ್‌ಗೆ ಸೇರಿಕೊಂಡಿರುವುದು ಅತ್ಯಂತ ತೃಪ್ತಿ ಸಿಕ್ಕಿದೆ ಎಂದು ಐಟಿಎಫ್‌ ಪತ್ರಿಕಾ ಹೇಳಿಕೆಯಲ್ಲಿ ನೊವಾಕ್‌ ಜೊಕೊವಿಚ್‌ ಸಂತಸ ವ್ಯಕ್ತಪಡಿಸಿದ್ದಾರೆ.
ಮೊಣಕೈ ಶಸ್ತ್ರ ಚಿಕಿತ್ಸೆ ಬಳಿಕ ಪ್ರಸಕ್ತ ವರ್ಷದಲ್ಲಿ ಕಣಕ್ಕೆ ಇಳಿದ ಸರ್ಬಿಯಾ ಆಟಗಾರ ವಿಂಬಲ್ಡನ್‌ ಹಾಗೂ ಯುಎಸ್‌ ಓಪನ್‌ ಸೇರಿದಂತೆ ನಾಲ್ಕು ವಿಶ್ವ ಶ್ರೇಷ್ಠ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದಾರೆ. ಆ ಮೂಲಕ ಅವರು ವಿಶ್ವ ಶ್ರೇಯಾಂಕದಲ್ಲಿ 22 ರಿಂದ ಅಗ್ರ ಸ್ಥಾನಕ್ಕೇರಿದ್ದಾರೆ.
ರೊಮಾನಿಯಾದ ಸಿಮೋನ ಹಲೆಪ್‌ ಅವರು ಆಸ್ಟ್ರೇಲಿಯಾ ಓಪನ್‌ನಲ್ಲಿ ರನ್ನರ್ ಅಪ್‌ ಹಾಗೂ ರೋಲೆಂಡ್‌ ಗ್ಯಾರೋಸ್ ಚಾಂಪಿಯನ್‌ ಆಗಿದ್ದಾರೆ. ಅಲ್ಲದೆ, ಸತತ 40 ವಾರಗಳ ಕಠಿಣ ಪರಿಶ್ರಮ ಅವರನ್ನು ವಿಶ್ವ ಅಗ್ರ ಆಟಗಾರ್ತಿಯನ್ನಾಗಿ ಮಾಡಿತು. ಈ ಹಿನ್ನೆಲೆಯಲ್ಲಿ ಅವರು ಐಟಿಎಫ್‌ ಚೊಚ್ಚಲ ವಿಶ್ವ ಚಾಂಪಿಯನ್‌ ಪ್ರಶ್ತಸಿಗೆ ಭಾಜನರಾದರು.
ಮೊದಲ ಬಾರಿ ಈ ಗೌರವ ಸಿಕ್ಕಿರುವುದು ತುಂಬಾ ಖುಷಿ ನೀಡಿದೆ. ಮೊದಲ ಗ್ರ್ಯಾಂಡ್‌ ಸ್ಲ್ಯಾಮ್‌ ರೋಲೆಂಡ್‌ ಗ್ಯಾರೊಸ್‌ ಚಾಂಪಿಯನ್‌ ಆಗಿದ್ದರಿಂದ ವಿಶ್ವ ಅಗ್ರ ಶ್ರೇಯಾಂಕ ಪಡೆಯಲು ಸಾಧ್ಯವಾಯಿತು. ಈ ಗೌರವಕ್ಕೆ ಭಾಜನವಾಗಿರುವುದು ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸುತ್ತದೆ ಎಂದು ಹಲೆಪ್‌ ಹೇಳಿದರು.