ಒತ್ತಡ ರಹಿತ ಬದುಕಿಗೆ ಕ್ರೀಡೆ ಅಗತ್ಯ: ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ
ಕುಂದಾಪುರ: ಮಾನವನ ಬದುಕು ಒತ್ತಡದಿಂದ ಕೂಡಿದೆ. ವೃತ್ತಿ ಬದುಕಿನಲ್ಲಿ ಒತ್ತಡ ಸಹಜ. ಇದರಿಂದ ಮುಕ್ತಿ ಪಡೆಯಲು ನಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಕೂಲವಾಗುವ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಅವರು ಅಭಿಪ್ರಾಯಪಟ್ಟರು. Stress is natural in professional life. To get rid of it, we should engage in sports that benefit our physical strength, said Kundapur Bar Association President Shiriyar Gopalakrishna Shetty.
ಅವರು ಕುಂದಾಪುರ ಹಳ ಅಳಿವೆಯ ಅರಾಲ್ ಗುಡ್ಡೆಯಲ್ಲಿರುವ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ನಲ್ಲಿ ಕುಂದಾಪುರ ತಾಲೂಕಿನ ವಕೀಲರಿಗಾಗಿ ನಡೆದ ಅಡ್ವಕೇಟ್ಸ್ ಬ್ಯಾಡ್ಮಿಂಟನ್ ಟ್ರೋಫಿಯನ್ನು ಉದ್ಘಾಟಿಸಿ ಮಾತನಾಡಿದರು.

“ನಮ್ಮ ವೃತ್ತಿಬದುಕು ಕೂಡ ಒತ್ತಡದಿಂದ ಕೂಡಿದೆ. ಯಾವುದಕ್ಕೂ ಸಮಯ ಇಲ್ಲವೆಂಬಂತೆ ನಾವು ಕೆಲಸ ಮಾಡುತ್ತಿರುತ್ತೇವೆ, ಕೆಲಸದ ನಡುವೆ ಬಿಡುವು ಮಾಡಿಕೊಳ್ಳಬೇಕಾದ ಅಗತ್ಯವಿದೆ. ಮಾನಸಿಕ ಒತ್ತಡ ಇತರ ದೈಹಿಕ ಸಮಸ್ಯೆಗಳಿಗೆ ಅನುವು ಮಾಡಿಕೊಡುತ್ತದೆ. ಬ್ಯಾಡ್ಮಿಂಟನ್ ಒಂದು ಉತ್ತಮ ಕ್ರೀಡೆ. ಈ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ನಾವು ಒತ್ತಡಗಳಿಂದ ಮುಕ್ತಿ ಪಡೆಯಬಹುದು” ಎಂದರು.

“ಕುಂದಾಪುರದಲ್ಲಿ ಇಷ್ಟು ಉತ್ತಮವಾದ ಬ್ಯಾಡ್ಮಿಂಟರನ್ ಅಕಾಡೆಮಿ ಇದೆ ಎಂಬುದು ಗೊತ್ತೇ ಇರಲಿಲ್ಲ. ಕೋಸ್ಟಾದಲ್ಲಿ ಎಲ್ಲ ರೀತಿಯ ಸೌಲಭ್ಯವಿದೆ, ರಾಕೆಟ್, ಶೂ ಇಲ್ಲವೆಂಬ ಚಿಂತೆ ಬೇಡ. ಕೆಲಸ ನಡುವೆ ಬಂದು ಒಂದು ಗಂಟೆ ಆಡಿ ಹೋಗಲು ಇಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿದೆ. ನಮ್ಮ ಸಂಘದ ಸದಸ್ಯರು ಬಿಡುವು ಮಾಡಿಕೊಂಡು ಇಲ್ಲಿಗೆ ಬಂದು ಆಡಿದರೆ ಕ್ರೀಡೆಯೊಂದಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಮತ್ತು ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ,” ಎಂದು ಗೋಪಾಲಕೃಷ್ಣ ಶೆಟ್ಟಿ ಹೇಳಿದರು.

ಬಳಿಕ ಸಂಘದ ಸದಸ್ಯರಿಗಾಗಿ ವಿವಿಧ ವಯೋಮಿತಿಯಲ್ಲಿ ಸ್ಪರ್ಧೆಗಳು ನಡೆದವು. ಮಹಿಳಾ ವಕೀಲರು ಕೂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

