Thursday, April 25, 2024

ಸತ್ಯನಾರಾಯಣ ದ್ರೋಣಾಚಾರ್ಯರಾಗುವುದು ಸತ್ಯ

ಸೋಮಶೇಖರ್ ಪಡುಕರೆ, ಬೆಂಗಳೂರು

ಉತ್ತಮ ಕ್ರೀಡಾಪಟುವಾಗಿ ದೇಶಕ್ಕೆ ಕೀರ್ತಿ ತಂದರು, ಉತ್ತಮ ಆಡಳಿತಗಾರನಾಗಿ ಕರ್ನಾಟಕ ರಾಜ್ಯದ ಅಥ್ಲೆಟಿಕ್ಸ್ ಸಂಸ್ಥೆಗೆ ಗೌರವ ತಂದರು, ಪ್ಯಾರಾಲಿಂಪಿಕ್ಸ್ ನಲ್ಲಿ ಆಡಳಿತಗಾರನಾಗಿ ಕಾರ್ಯನಿರ್ವಹಿಸದರು, ಪ್ಯಾಆರಾಲಿಂಪಿಕ್ಸ್ ಕೋಚ್ ಆಗಿ ದೇಶಕ್ಕೆ ಐದು ಪದಕಗಳನ್ನು ತಂದರು.

ಕಳೆದ ಬಾರಿ ಪ್ರಕಟಗೊಂಡ ದ್ರೋಣಾಚಾರ್ಯ ಪ್ರಶಸ್ತಿಯನ್ನು ಹಿಂಪಡೆದರು. ಆದರೆ ಶಿವಮೊಗ್ಗದ ಈ ಸಾಧಕ ಸತ್ಯನಾರಾಯಣ ಅವರಿಗೆ ಕೇಂದ್ರ ಸರಕಾರ ನೀಡುವ ದ್ರೋಣಾಚಾರ್ಯ ಪ್ರಶಸ್ತಿ ಈ ಬಾರಿಯೂ ನೀಡದಿದ್ದರೆ ಆ ಪ್ರಶಸ್ತಿಗೇ ನಾವು ಅವಮಾನ ಮಾಡಿದಂತೆ.

2012ರ ಲಂಡನ್ ಪ್ಯಾರಾಲಿಂಪಿಕ್ಸ್ ನಲ್ಲಿ ಕರ್ನಾಟಕದ ಗಿರೀಶ್ ಎಚ್ ಎನ್. ಅವರಿಗೆ ಬೆಳ್ಳಿ ಪದಕ, ರಿಯೋ ಒಲಿಂಪಿಕ್ಸ್ ನಲ್ಲಿ ಮಾರಿಯಪ್ಪನ್ ಗೆ ಚಿನ್ನದ ಪದಕ, ವರುಣ್ ಭಾಟಿಯಾಗೆ ಕಂಚಿನ ಪದಕ, ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಮಾರಿಯಪ್ಪನ್ ಗೆ ಬೆಳ್ಳಿ, ನಿಶಾದ್ ಕುಮಾರ್ ಗೆ ಬೆಳ್ಳಿ, ಶರದ್ ಕುಮಾರ್ ಗೆ ಕಂಚಿನ ಪದಕ ಇವರು ಸತ್ಯನಾರಾಯಣ ಅವರ ತರಬೇತಿಯಲ್ಲಿ ಪಳಗಿದವರು. ಇವರೆಲ್ಲ ಪದ್ಮಪ್ರಶಸ್ತಿ, ಖೇಲ್ ರತ್ನ ಮೊದಲಾದ ಗೌರವಕ್ಕೆ ಪಾತ್ರರಾದವರು. ಆದರೆ ಗುರು ಸತ್ಯನಾರಾಯಣ ಅವರನ್ನು ಸರಕಾರ ಇದುವರೆಗೂ ಗುರುತಿಸದಿರುವುದು ಬೇಸರದ ಸಂಗತಿ.

ಟೋಕಿಯೋದಲ್ಲಿಯೂ ಮಾರಿಯಪ್ಪನ್ ಗೆ ಚಿನ್ನದ ಸಾಧನೆ ಮಾಡುವ ಅವಕಾಶ ಇದ್ದಿತ್ತು, ಆದರೆ ಮಳೆ ಬಂದ ಕಾರಣ ಕಾಲು ಜಾರಿ ಅವರು 1.86 ಮೀ. ಎತ್ತರೆಕ್ಕೆ ಮಾತ್ರ ಜಿಗಿಯಲು ಸಾಧ್ಯವಾಯಿತು. ಆದರೆ ಪ್ಯಾರಿಸ್ ನಲ್ಲಿ ಚಿನ್ನದ ಗುರಿಹೊಂದಿರುವುದಾಗಿ ಮಾರಿಯಪ್ಪನ್ ಹೇಳಿದ್ದಾರೆ.

ಪ್ಯಾರಾಲಿಂಪಿಕ್ಸ್ ಇತಿಹಾದಲ್ಲೇ ಮೊದಲ ಬಾರಿಗೆ ಭಾರತ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ 1 ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನ ಪದಕ ಸೇರಿ ಒಟ್ಟು 8 ಪದಕಗಳನ್ನು ಗೆದ್ದಿರುವುದು ಕೂಡ ಹೊಸ ದಾಖಲೆ.

ಪ್ರಶಸ್ತಿ ಬಗ್ಗೆ ಯೋಚಿಸುವವರಲ್ಲ:

ಸತ್ಯನಾರಾಯಣ ಅವರು ನನ್ನನ್ನು ಸರಕಾರ ಗುರುತಿಸಿಲ್ಲ, ನಾನು ಪ್ರಶಸ್ತಿಯಿಂದ ವಂಚಿತನಾದೆ ಎಂದು ಎಲ್ಲಿಯೂ ತಮ್ಮ ಅಳಲನ್ನು ಹೇಳಿಕೊಂಡರಲ್ಲ. ಕಡೆಗಣಿಸಿದ್ದಾರೆ ಎಂದು ತಮ್ಮ ಕಾರ್ಯದಲ್ಲೂ ಹಿಂದೇಟು ಹಾಕಿದವರಲ್ಲ. ವರ್ಷ ವರ್ಷ ಪದಕ ಗೆಲ್ಲುವವರ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ. ಅವರಲ್ಲಿ ತರಬೇತಿ ಪಡೆಯುವವರ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ಯಾರಾಲಿಂಪಿಕ್ಸ್ ಗೆ ದೇಶದಲ್ಲಿ ಒಂದು ರೂಪು ಕೊಟ್ಟು, ಅದಕ್ಕೊಂದು ವೃತ್ತಿಪರತೆಯನ್ನು ತಂದವರಲ್ಲಿ ಸತ್ಯನಾರಾಯಣ ಕೂಡ ಒಬ್ಬರು.

ಅವರು ಸರಕಾರಿ ಕೋಚ್ ಗಳಂತೆ ಬರೇ ತರಬೇತಿಯನ್ನು ನೀಡುವುದಿಲ್ಲ. ಕ್ರೀಡಾಪಟುಗಳ ಮನೆಯಲ್ಲಿ ಕಷ್ಟಗಳಿದ್ದರೆ ಅದಕ್ಕೂ ಸ್ಪಂದಿಸುತ್ತಾರೆ. ಮಾರಿಯಪ್ಪನ್ ಆರಂಭದ ದಿನಗಳಲ್ಲಿ ಸಂಕಷ್ಟದಲ್ಲಿದ್ದಾಗ ತಮ್ಮದೆ ವೆಚ್ಚದಲ್ಲಿ ಅವರಿಗೆ ಊಟ, ವಸತಿ ನೀಡಿದ್ದನ್ನು ಮರೆಯುವಂತಿಲ್ಲ.

ರಾಜ್ಯ ಸರಕಾರ ಗೌರವಿಸಲಿ:

ಮಾಜಿ ಕ್ರೀಡಾಪಟು, ಉತ್ತಮ ಕ್ರೀಡಾ ಆಡಳಿಗಾರರಾಗಿರುವ ಸತ್ಯನಾರಾಯಣ ಅವರನ್ನು ರಾಜ್ಯ ಸರಕಾರ ಇದುವರೆಗೂ ಯಾವುದೇ ರೀತಿಯಲ್ಲಿ ಗೌರವಿಸಿಲ್ಲ. ಈಗ ಅವರು ಮಾಡಿರುವ ಸಾಧನೆಯನ್ನು ಗಮನಿಸಿ ಹಿರಿಯ ಕ್ರೀಡಾ ಸಾಧಕರನ್ನು ಗುರುತಿಸಬೇಕಾದ ಅಗತ್ಯ ಇದೆ. ಒಲಿಂಪಿಕ್ಸ್ ಸಾಧಕರನ್ನು ಕಚೇರಿಗೆ ಕರೆಸಿ ಗೌರವಿಸವವರು ಇಂಥವರನ್ನೂ ಗಮನಿಸಿ ಗುರುತಿಸುವ ಅನಿವಾರ್ಯತೆ ಇದೆ.

Related Articles