Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮೈಸೂರು ವಾರಿಯರ್ಸ್‌ ಪರ ಆಡುವುದೇ ಹೆಮ್ಮೆ: ಶ್ರೇಯಸ್‌ ಗೋಪಾಲ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು

ಕರ್ನಾಟಕ ಕ್ರಿಕೆಟ್‌ ಕಂಡ ಶ್ರೇಷ್ಠ ಆಲ್ರೌಂಡರ್‌, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗೇಮ್‌ ಚೇಂಜರ್‌, ರಣಜಿಯಲ್ಲಿ ಕರ್ನಾಟಕಕ್ಕೆ ಆಪದ್ಭಾಂದವ, ಇಂಡಿಯಾ ಅಂಡರ್‌19, ಇಂಡಿಯಾ ಎ, ಇಂಡಿಯಾ ಬಿ, ಇಂಡಿಯಾ ಗ್ರೀನ್‌, ಇಂಡಿಯಾ ಬ್ಲೂ, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌, ರಾಜಸ್ಥಾನ್‌ ರಾಯಲ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌, ಕೆಪಿಎಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌, ಹುಬ್ಬಳ್ಳಿ ಟೈಗರ್ಸ್‌, ನಮ್ಮ ಶಿವಮೊಗ್ಗ ಹಾಗೂ ಮೈಸೂರು ವಾರಿಯರ್ಸ್‌ ಹೀಗೆ ದೇಶದ ಪ್ರತಿಯೊಂದು ಹಂತದಲ್ಲೂ ಆಡಿ, ಅನೇಕ ಬಾರಿ ಜಯದ ರೂವಾರಿ ಎನಿಸಿರುವ ಲೆಗ್‌ಬ್ರೇಕ್‌ ಬೌಲರ್‌ ಶ್ರೇಯಸ್‌ ಗೋಪಾಲ್‌ ಕರ್ನಾಟಕದ ಪ್ರತಿಷ್ಠಿತ ಟೂರ್ನಿ ಮಹಾರಾಜ ಟ್ರೋಫಿ ಟಿ20ಯಲ್ಲಿ ಬಲಿಷ್ಠ ಮೈಸೂರು ವಾರಿಯರ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂದಿನ ವರ್ಷ ಶ್ರೇಯಸ್‌ ಗೋಪಾಲ್‌ ಪ್ರಥಮದರ್ಜೆ ಕ್ರಿಕೆಟ್‌ಗೆ ಕಾಲಿಟ್ಟು ದಶಮಾನ ಪೂರ್ಣಗೊಳ್ಳುತ್ತದೆ. ಮುಂದಿನ ಋತುವಿನಲ್ಲಿ ಕರ್ನಾಟಕ ರಣಜಿ ತಂಡದ ನಾಯಕತ್ವ ವಹಿಸುವಲ್ಲಿ ಮೊದಲ ಆಯ್ಕೆಯಾಗಿರುವ ಶ್ರೇಯಸ್‌, ಭಾನುವಾರ ಮೈಸೂರಿನಲ್ಲಿ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಉದ್ಘಾಟನೆಗೆ ಮುನ್ನ sportsmail ಜತೆ ಟೂರ್ನಿಯ ಬಗ್ಗೆ ಮಾತನಾಡಿದ್ದಾರೆ.  ಅವರೊಂದಿಗಿನ ಮಾತುಕತೆಯ ಪ್ರಮುಖ ಅಂಶ ಇಲ್ಲಿದೆ.

“ಮೈಸೂರು ವಾರಿಯರ್ಸ್‌ ಪರ ಆಡಲು ಉತ್ಸುಕನಾಗಿರುವೆ”

ಶ್ರೇಯಸ್‌ ಗೋಪಾಲ್‌ ಹಿಂದೆ ಕರ್ನಾಟಕ ಪ್ರೀಮಿಯರ್‌ ಲೀಗ್‌ ನಡೆಯುತ್ತಿರುವಾಗ ಬೇರೆ ಬೇರೆ ತಂಡಗಳಲ್ಲಿ ಆಡಿದ್ದರು. ಒಂದು ಬಾರಿ ಮೈಸೂರು ವಾರಿಯರ್ಸ್‌ ತಂಡದ ಪರವೂ ಆಡಿದ್ದರು. ಈಗ ಮಹಾರಾಜ ಟ್ರೋಫಿ ಟಿ20ಯಲ್ಲಿ ಮತ್ತೆ ಮೈಸೂರು ವಾರಿಯರ್ಸ್‌ ತಂಡದ ಪರ ಆಡುವ ಅವಕಾಶ ಸಿಕ್ಕಿದೆ. “ಎರಡನೇ ಬಾರಿಗೆ ನಾನು ಮೈಸೂರು ವಾರಿಯರ್ಸ್‌ ಪರ ಆಡುತ್ತಿರುವೆ. ಮೈಸೂರು ವಾರಿಯರ್ಸ್‌ ತಂಡ ಉತ್ತಮ ತಂಡಗಳಲ್ಲಿ ಒಂದು. ಈ ತಂಡದ ಪರ ಆಡಲು ನಾನು ಉತ್ಸುಕನಾಗಿರುವೆ. ನಮ್ಮ ತಂಡವು ಉತ್ತಮ ಮಾಲೀಕರನ್ನು ಹೊಂದಿದೆ. ಇಲ್ಲಿ ಉತ್ತಮ ಜನರಿದ್ದಾರೆ. ಅವರೊಂದಿಗೆ ಬೆರೆತು ಉತ್ತಮ ಪ್ರದರ್ಶನ ತೋರುವ ಗುರಿ ಹೊಂದಿದ್ದೇನೆ. ತಂಡದ ಜಯಕ್ಕಾಗಿ ಶ್ರಮಿಸುವೆ,” ಎಂದರು.

ಈ ಟೂರ್ನಿ ಬದುಕಿಗೇ ತಿರುವು ನೀಡಬಲ್ಲದು!

ಈಗ ಕ್ರಿಕೆಟ್‌ ಜಗತ್ತು ಚುಟುಕು ಕ್ರಿಕೆಟ್‌ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶತಕ ಮೇಲೆ ಶತಕ ಹೊಡೆದರೂ, 50-60 ವಿಕೆಟ್‌ ಗಳಿಸಿದರೂ ಬೆನ್ನುತಟ್ಟುತ್ತಾರೆ ವಿನಃ ಟಿ20ಗೆ ಪರಿಗಣಿಸುವುದು ಕಷ್ಟ. ಆದರೆ ದೇಶದಲ್ಲಿ ನಡೆಯುತ್ತಿರುವ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೆ ಅದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ನಡೆಸುತ್ತಿರುವ ಮಹಾರಾಜ ಟ್ರೋಫಿ ಬದುಕಿಗೆ ತಿರುವು ನೀಡಬಲ್ಲದು ಎಂದಿದ್ದಾರೆ.

“ಅನೇಕರಿಗೆ ಈ ಟೂರ್ನಿ ಅತ್ಯಂತ ಪ್ರಮುಖವಾದುದು. ಈ ಟೂರ್ನಿಯಲ್ಲಿ ಮಿಂಚಿದ ಅನೇಕ ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡಿರುವುದನ್ನು ನಾವು ನೋಡಿದ್ದೇವೆ, ಆದ್ದರಿಂದ ಐಪಿಎಲ್‌ನ ಪ್ರತಿಭಾನ್ವೇಷಣೆ ಮಾಡುವವರು ಹಾಗೂ ಇತರರು ಈ ಟೂರ್ನಿಯನ್ನು ಗಮನಿಸುತ್ತಿರುತ್ತಾರೆ. ಯಾರಿಗೆ ಗೊತ್ತು?, ಟೂರ್ನಿಯಲ್ಲಿ ತೋರುವ ಒಂದು ಉತ್ತಮ ಪ್ರದರ್ಶನ ಬದುಕನ್ನೇ ಬದಲಾಯಿಸಬಹುದು,” ಎಂದು ಶ್ರೇಯಸ್‌ ಟೂರ್ನಿಯ ಪ್ರಾಮುಖ್ಯತೆ ಬಗ್ಗೆ ಹೇಳಿದರು.

ಭವಿಷ್ಯದಲ್ಲಿ ಈ ಟೂರ್ನಿ ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಯಲಿದೆ

ಕರ್ನಾಟಕ ಪ್ರೀಮಿಯರ್‌ ಲೀಗ್‌ ಹುಟ್ಟಿಕೊಂಡಿದ್ದೇ ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ. ಈ ಕಾರಣಕ್ಕಾಗಿಯೇ ಫ್ರಾಂಚೈಸಿ ಮಾಲೀಕತ್ವವನ್ನು ಜಿಲ್ಲಾ ಮಟ್ಟದಲ್ಲೂ ಹಂಚಲಾಗಿತ್ತು. ಈಗ ಟ್ರೋಫಿಯ ಹೆಸರು ಬದಲಾಗಿದ್ದರೂ ಉದ್ದೇಶ ಅದೇ ಉಳಿದಿದೆ. ಈ ಬಾರಿ ಸಮಯದ ಕೊರತೆ ಮತ್ತು ಇತರ ವೇಳಾಪಟ್ಟಿಯಿಂದಾಗಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲೂ ನಡೆಯಲಿದೆ ಎಂಬ ಆಶಯವನ್ನು ಶ್ರೇಯಸ್‌ ವ್ಯಕ್ತಪಡಿಸಿದ್ದಾರೆ.

“ಭವಿಷ್ಯದಲ್ಲಿ ಈ ಟೂರ್ನಿ ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಯಲಿದೆ ಎಂದು ನಾನು ನಂಬಿರುವೆ. ಏಕೆಂದರೆ ಈ ಟೂರ್ನಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಿದೆ. ಕರ್ನಾಟಕದ ಇತರ ನಗರಗಳಲ್ಲೂ ಈ ಟೂರ್ನಿ ನಡೆದರೆ ಅಲ್ಲಿಯ ಪ್ರತಿಭೆಗಳಿಗೂ ವೇದಿಕೆ ಸಿಕ್ಕಂತಾಗುತ್ತದೆ,” ಎಂದರು.

ಪ್ರತಿಯೊಂದು ಟೂರ್ನಿಯೂ ಅತೀ ಪ್ರಮುಖವಾದುದು

ಮುಂದಿನ ತಿಂಗಳು 29ನೇ ವರ್ಷಕ್ಕೆ ಕಾಲಿಡಲಿರುವ ಶ್ರೇಯಸ್‌ ಗೋಪಾಲ್‌ ಪ್ರತಿಯೊಂದು ಟೂರ್ನಿಯಲ್ಲೂ ನೂರು ಪ್ರತಿಶತ ತಮ್ಮನ್ನು ತೊಡಗಿಸಿಕೊಂಡವರು. ಸೋಲು ಗೆಲುವಿನ ಬಗ್ಗೆ ಯೋಚಿಸದೆ ಉತ್ತಮ ರೀತಿಯಲ್ಲಿ ಪ್ರಯತ್ನ ನೀಡುವುದು ಮುಖ್ಯ ಎನ್ನುತ್ತಾರೆ ಅನುಭವಿ ಆಲ್ರೌಂಡರ್‌.

“ಈ ಟೂರ್ನಿಯಂತಲ್ಲ ಯಾವುದೇ ಟೂರ್ನಿ ಆಡಿದರೂ ಅಲ್ಲಿ ನಾನು ನೂರು ಪ್ರತಿಶತ ಶ್ರಮವಹಿಸುವೆ. ಈ ಟೂರ್ನಿಯೂ ಇದರಿಂದ ಹೊರತಾಗಿಲ್ಲ. ಸೋಲು ಅಥವಾ ಜಯ ಎಂಬುದು ನಂತರದ್ದು, ಉತ್ತಮ ಪ್ರದರ್ಶನ ತೋರುವುದು ಮೊದಲ ಆದ್ಯತೆ. ನಾವು ನೈತಿಕವಾಗಿ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರೆ ಫಲಿತಾಂಶ ಧನಾತ್ಮಕವಾಗಿರುತ್ತದೆ ಎಂದು ನಾನು ನಂಬಿರುವವ, ಆದ್ದರಿಂದ ನೂರು ಪ್ರತಿಶತ ಪ್ರದರ್ಶನ ತೋರಿ ಮೈಸೂರು ತಂಡದಲ್ಲಿ ಮತ್ತು ಮೈಸೂರು ಜನರ ಮೊಗದಲ್ಲಿ ನಗುವನ್ನು ತರುವುದೇ ಗುರಿಮ” ಎಂದರು.

ಕರ್ನಾಟಕ ರಣಜಿ ತಂಡವನ್ನು ಮುನ್ನಡೆಸಲು ಸಿದ್ಧ…

ಪ್ರಸಕ್ತ ಕರ್ನಾಟಕ ಕ್ರಿಕೆಟ್‌ನಲ್ಲಿ ಅಪಾರ ಅನುಭವವನ್ನು ಹೊಂದಿರುವ ಆಟಗಾರರಲ್ಲಿ ಶ್ರೇಯಸ್‌ ಗೋಪಾಲ್‌ ಕೂಡ ಒಬ್ಬರು. ಎರಡು ವರ್ಷಗಳ ಹಿಂದೆ ಕರ್ನಾಟಕವನ್ನು ಅರೆಕಾಲಿಕವಾಗಿ ಮುನ್ನಡೆಸಿದವರು. ಮುಂದಿವ ಋತುವಿನಲ್ಲಿ ಕರ್ನಾಟಕ ರಣಜಿ ತಂಡದ ನಾಯಕತ್ವದ ಬಗ್ಗೆ ಮಾತಿಗೆಳೆದಾಗ ಅವರ ನಿಲುವು ಧನಾತ್ಮಕವಾಗಿತ್ತು.

 

“ಖಂಡಿತವಾಗಿಯೂ ಅವಕಾಶ ಸಿಕ್ಕರೆ ನಾನು ಕರ್ನಾಟಕ ತಂಡವನ್ನು ಮುನ್ನಡೆಸಲು ಸಿದ್ಧನಾಗಿರುವೆ. ಆ ಬಗ್ಗೆ ಬಹಳ ಕನಸು ಕೂಡ ಇದೆ. ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಹಿಂದೊಮ್ಮೆ ಈ ಅವಕಾಶವನ್ನು ಪಡೆದ ಅದೃಷ್ಟವಂತರಲ್ಲಿ ನಾನೂ ಒಬ್ಬ. ಕರ್ನಾಟಕ ಕ್ರಿಕೆಟ್‌ ಅಭಿವೃದ್ಧಿಪಡಿಸಲು ನಾಯಕತ್ವದ ಅವಕಾಶ ಸಿಕ್ಕರೆ ಎರಡೂ ಕೈಗಳಿಂದ ಸ್ವೀಕರಿಸುವೆ,” ಎಂದು ಹೇಳುವ ಶ್ರೇಯಸ್‌ ಗೋಪಾಲ್‌ ಅವರ ಮಾತಿನಲ್ಲಿ ಕರ್ನಾಟಕ ಕ್ರಿಕೆಟ್‌ನ ಅಭಿವೃದ್ಧಿಯ ಬಗ್ಗೆ ಕಾಳಜಿ ಇದೆ ಎಂಬುದು ಸ್ಪಷ್ಟ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.