Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವೀಲ್‌ಚೇರ್‌ ಟೆನಿಸ್‌ನಲ್ಲಿ ಗ್ರಾಮೀಣ ಪ್ರತಿಭೆ ಮಂಡ್ಯದ ಶಿಲ್ಪಾ ಸಾಧನೆ

ಬೆಂಗಳೂರು: ಸಮಾಜದಲ್ಲಿ ಎಲ್ಲರಂತೆ ನಡೆಯಲಾಗದು, ಎಲ್ಲರಂತೆ ಆಡಲಾಗದು, ಅಲ್ಲಿಲ್ಲಿ ಚುಚ್ಚುವ ಮಾತುಗಳು, ತಾತ್ಸಾರ ಮನೋಭಾವ, ಎಲ್ಲಾದರೂ ಹೋಗಿ, ಏನಾದರೂ ಸಾಧನೆ ಮಾಡಬೇಕೆಂದು ಮಂಡ್ಯದ ಕೆ. ಎಂ ದೊಡ್ಡಿಯಿಂದ ಬೆಂಗಳೂರಿಗೆ ಹೊರಟ ವಿಶೇಷ ಚೇತನ ಶಿಲ್ಪಾ ಪುಟ್ಟರಾಜು ಅವರಿಗೆ ಆಶ್ರಯ ನೀಡಿದ್ದು ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಷನ್‌ (KSLTA). ಅಲ್ಲಿರುವ ವೀಲ್‌ ಚೇರ್‌ ಟೆನಿಸ್‌ ವಿಭಾಗಲ್ಲಿ ಪಳಗಿರುವ ಶಿಲ್ಪಾ ಅವರು ಮಾರ್ಚ್‌ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ 2026 BNP Paribas World Team Cup Asia Qualifier ನಲ್ಲಿ ಭಾರತ ದೇಶವನ್ನು ಪತ್ರಿನಿಧಿಸಲಿದ್ದಾರೆ. ಅಲ್ಲಿ ಗೆದ್ದು ಪ್ಯಾರಿಸ್‌ನಲ್ಲಿ ನಡೆಯಲಿರುವ ಜಾಗತಿಕ ಮಟ್ಟದಲ್ಲಿ ಮಿಂಚುವ ಆಶಯ ಹೊಂದಿದ್ದಾರೆ. Shilpa Puttaraju of K. M. Doddi village in Mandya district is ready to shine at the global level in wheelchair tennis despite facing hardships.

ಚಿಕ್ಕಂದಿನಲ್ಲಿಯೇ ಪೊಲಿಯೋದಿಂದಾಗಿ ಕಾಲಿನ ವಿಶೇಷ ಚೇತನರಾಗಿದ್ದ ಶಿಲ್ಪಾ ಅವರಿಗೆ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ. ಸುತ್ತಮುತ್ತಲಿನ ಜನರ ತಾತ್ಸಾರ ಮನೋಭಾವದಿಂದ ಮುಕ್ತಿ ಹೊಂದಿ ಎಲ್ಲಿಯಾದರೂ ಹೋಗಿ ಏನಾದರೂ ಸಾಧನೆ ಮಾಡಬೇಕೆಂಬ ಛಲ ಅವರನ್ನು ಕಾಡಿತು. ಹಾಗಾಗಿ ಮಂಡ್ಯದ ಕೆ. ಎಂ. ದೊಡ್ಡಿಯನ್ನು ತೊರೆದು ಬೆಂಗಳೂರಿಗೆ ಮುಖ ಮಾಡಿದರು. 2010ರಿಂದ ವೀಲ್‌ ಚೇರ್‌ನಲ್ಲಿ ಟೆನಿಸ್‌ ಆಡಲಾರಂಭಿಸಿದ ಶಿಲ್ಪಾ 2019ರಲ್ಲಿ ವೃತ್ತಿಪರ ವೀಲ್‌ಚೇರ್‌ ಟೆನಿಸ್‌ ಆಟಗಾರ್ತಿಯಾಗಿ ವಿವಿಧ ಟೂರ್ನಿಗಳಲ್ಲಿ ಪಾಲ್ಗೊಂಡು ಯಶಸ್ಸಿನ ಹಾದಿ ತುಳಿದರು. ಈಗ ವಿಶ್ವದಲ್ಲಿ 66ನೇ ರಾಂಕ್‌ ಹೊಂದಿರುವ ಶಿಲ್ಪಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಉತ್ಸಾಹದಲ್ಲಿದ್ದಾರೆ.

“ಅಂಗವೈಕಲ್ಯ ಎಂಬುದು ದೇಹಕ್ಕೆ ಮಾತ್ರ ಮನಸ್ಸಿಗಲ್ಲ; ನಮಗೆ ಅನುಕಂಪ ಬೇಡ ಅವಕಾಶ ಬೇಕು. ಊರಿನಲ್ಲಿ ಜನರಾಡುವ ಮಾತಿನಿಂದ, ಅವರು ನೋಡಿಕೊಳ್ಳುತ್ತಿದ್ದ ರೀತಿಯಿಂದ ಬೇಸತ್ತು, ಬದುಕಿನಲ್ಲಿ ಏನಾದರು ಸಾಧನೆ ಮಾಡಬೇಕೆಂದು ಬೆಂಗಳೂರಿಗೆ ಪ್ರಯಾಣಿಸಿದೆ. ಸಹೋದರ ಬೆಂಬಲ ಸಿಕ್ಕಿತು. ರಾಜ್ಯ ಲಾನ್‌ ಟೆನಿಸ್‌ನಲ್ಲಿ ವೀಲ್‌ ಚೇರ್‌ ಟೆನಿಸ್‌ ಹೇಳಿಕೊಡುತ್ತಾರೆ ಎಂದು ಆತ್ಮೀಯರಾದ ಸಂದೇಶ್‌ ತಿಳಿಸಿದರು. ಇದರಿಂದಾಗಿ ಅಲ್ಲಿ ಪಾಲ್ಗೊಂಡೆ. ಮೊದಲು ಕಷ್ಟವಾಗಿತ್ತು, ನಂತರ ವೀಲ್‌ ಚೇರ್‌ಗೆ ಹೊಂದಿಕೊಂಡೆ. ಹಳ್ಳಿಯಲ್ಲಿ ನಮಗೆ ಟೆನಿಸ್‌ ಆಟಕ್ಕೇ ಅವಕಾಶ ಇಲ್ಲಿ ಇನ್ನು ವೀಲ್‌ಚೇರ್‌ ಟೆನಿಸ್‌ ಎಲ್ಲಿಂದ? ನನ್ನ ಯಶಸ್ಸಿನ ಹಾದಿಯಲ್ಲಿ ನೆರವು ನೀಡಿ ಪ್ರೋತ್ಸಾಹಿಸಿದ ಸುನಿಲ್‌ ಜೈನ್‌, ಆಸ್ತಾ ಫೌಂಡೇಷನ್‌ ಹಾಗೂ ಟಾಪ್‌ಸ್ಪಿನ್‌ಗೆ ನಾನು ಚಿರ ಋಣಿ ಯಾಗಿರುವೆ,” ಎಂದು ಶಿಲ್ಪಾ ಹೇಳಿದ್ದಾರೆ.

ಮಂಡ್ಯದ ಪುಟ್ಟರಾಜು ಹಾಗೂ ಜಯಮ್ಮ ದಂಪತಿಯ ಪುತ್ರಿ ಶಿಲ್ಪಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವೀಲ್‌ ಚೇರ್‌ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು ಗೆದ್ದಿದ್ದಾರೆ. ಜಗತ್ತಿನ ಶ್ರೇಷ್ಠ ಆಟಗಾರರು ಆಡುತ್ತಿರುವುದನ್ನು ಗೂಗಲ್‌ನಲ್ಲಿ ನೋಡಿ ಆಡದಲ್ಲಿನ ವಿವಿಧ ಆಯಾಮಗಳು, ಆವಿಷ್ಕಾರಗಳು, ಶೈಲಿಯನ್ನು ಕಲಿತಿರುವ ಶಿಲ್ಪಾ ಅವರಿಗೆ ಈಗ ಪ್ರಾಯೋಜಕರ ಅಗತ್ಯವಿದೆ. “ಚಿಕ್ಕ ವಯಸ್ಸಿನವರಿಗೆ GoSports Foundation ನೆರವು ನೀಡುತ್ತಿದೆ. ಆದರೆ ನನಗೆ ಜೂನಿಯರ್‌ ಹಂತ ದಾಟಿದ್ದರಿಂದ ಪ್ರಾಯೋಜಕರಿಲ್ಲ. ಟೆನಿಸ್‌ನಲ್ಲಿ ಸಿಕ್ಕ ನಗದು ಬಹುಮಾನವೇ ಬದುಕು. ವೀಲ್‌ಚೇರ್‌ ಟೆನಿಸ್‌ನಲ್ಲಿ ಸಿಗುವ ಬಹುಮಾನದ ಹಣದಿಂದ ಬದುಕು ಕಟ್ಟಿಕೊಳ್ಳಲಾಗದು. ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಖರ್ಚಾಗುತ್ತದೆ. ಇದಕ್ಕೆ ಪ್ರಾಯೋಜಕರ ಅಗತ್ಯವಿದೆ, ನಮ್ಮ ಧ್ವನಿ ಯಾರಿಕೆ ಕೇಳುತ್ತದೆ?” ಎಂದು ಶಿಲ್ಪಾ ಅವರು ನೋವನ್ನು ತೋಡಿಕೊಂಡಿದ್ದಾರೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.