Thursday, October 10, 2024

ಅಕ್ಕಿ ಗಿರಣಿಯಲ್ಲೇ ನಡೆಯುತ್ತಿದೆ ಮೊರಾರ್ಜಿ ದೇಸಾಯಿ ವಸತಿ ಶಾಲೆ!

SportsmailDeskಮಾನವಿ: ರಾಜಕೀಯ ಪುಡಾರಿಗಳು ತಮ್ಮ ಸಂಬಂಧಿಕರಿಗೆ ಅನುಕೂಲವಾಗುವುದಿದ್ದರೆ ಎಂಥಾ ಕೃತ್ಯಕ್ಕೂ ಇಳಿಯುತ್ತಾರೆಂಬುದಕ್ಕೆ ಇದೊಂದು ನಿದರ್ಶನ. ಇದು ರಾಯಚೂರು ಜಿಲ್ಲೆಯ ಮಾನವಿ ತಾಲೂಕು ಕೇಂದ್ರದ  ರಾಜಲಬಂಡಾದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ. ಈ ಕಟ್ಟಡ ಸ್ಥಳೀಯರೊಬ್ಬರ ಅಕ್ಕಿ ಗಿರಣಿ. ರಾಜಕೀಯ ಪ್ರಭಾವ ಇರುವುದರಿಂದ ಕಳೆದ 18 ವರ್ಷಗಳಿಂದ ಸರಕಾರ ಈ ಅಕ್ಕಿ ಗಿರಣಿಗೆ ಬಾಡಿಗೆ ಕಟ್ಟುತ್ತಿದೆ. ಗೋದಾಮಿನೊಳಗೆ ಶಾಲೆ ನಡೆಯುತ್ತಿದೆ. ಇಲ್ಲಿ ಸರಕಾರಿ ಭೂಮಿ ಇದ್ದರೂ ಯಾಕೆ ಶಾಲಾ ಕಟ್ಟಡ ನಿರ್ಮಾಣವಾಗುತ್ತಿಲ್ಲ? ಸರಕಾರ ಯಾಕೆ ಈ ಶಾಲೆಯ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದೆ? ಎಂಬ ಪ್ರಶ್ನೆ ಇಲ್ಲಿಯ ಜನರಿಗೆ ಉದ್ಭವಿಸಿದರೂ ಜನರಿಂದ ಆಯ್ಕೆಗೊಂಡ ಜನಪ್ರತಿನಿಧಿಗಳಿಗೆ ಉದ್ಭವಿಸುವುದಿಲ್ಲ.  Raichur District Manavi Taluk Morarji Desai Backward class Residential School functioning in a rice mill from last 18 years.

ಇದುವರೆಗೂ 6 ಕೋಟಿ ರೂ. ಬಾಡಿಗೆ!: ಈ ಶಾಲೆಗೆ ಸರಕಾರ ತಿಂಗಳಿಗೆ 3 ಲಕ್ಷ ರೂ. ಬಾಡಿಗೆ ಅಕ್ಕಿ ಗಿರಣಿ ಮಾಲೀಕರಿಗೆ ನೀಡುತ್ತಿದೆ. ಅಂದರೆ ವರ್ಷಕ್ಕೆ 36ಲಕ್ಷ ರೂ. 18 ವರ್ಷಗಳೆಂದರೆ ಇದುವರೆಗೂ ಸರಕಾರ 6.48 ಕೋಟಿ ರೂ. ಬಾಡಿಗೆ ನೀಡಿದೆ. ಮಾನವಿಯ ಸುತ್ತಮುತ್ತ ಎಕರೆಗೆ 1 ರಿಂದ 2 ಲಕ್ಷ ರೂ. ಇರಬಹುದು. 10 ಎಕರೆ ಖರೀದಿಸಿದರೂ 20 ಲಕ್ಷ ರೂ.ಗೆ ಸ್ವಂತ ಜಾಗವಾಗುತ್ತದೆ. ಆದರೆ ಈ ಎಲ್ಲ ಕೆಲಸಗಳನ್ನು ಮಾಡಿದರೆ ರಾಜಕೀಯ ಪುಡಾರಿಗಳ ಪ್ರಭಾವವಿರುವ ಅಕ್ಕಿಲ್‌ ಮಿಲ್‌ ಮಾಲೀಕರಿಗೆ ನಿರಾಯಾಸವಾಗಿ ಬರುವ ಬಾಡಿಗೆ ತಪ್ಪಿ ಹೋಗುತ್ತದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕು ಎಂದು ಬೊಬ್ಬೆ ಇಡುವ ಸರಕಾರಗಳು ಇಂಥ ಸಮಸ್ಯೆಗಳಿಗೆ ಮೊದಲು ಪರಿಹಾರ ಕಂಡುಕೊಳ್ಳಬೇಕು. ರಾಯಚೂರು ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಹಿಂದುಳಿದ ವರ್ಗಗಳ ಮಕ್ಕಳಿಗೆ ನಾವು ಉತ್ತಮ ಶಿಕ್ಷಣ ಕೊಡಬೇಕಾದ ಅಗತ್ಯವಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಮಾಡುವವರ ಗಮನಕ್ಕೆ: ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆರ್ಥಿಕ ಸಮಾನತೆ, ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಭವಿಷ್ಯದ ಪ್ರಜೆಗಳು ಇವೆಲ್ಲ ಪದಗಳನ್ನು ನಾವು ಚುನಾವಣೆ ಸಂದರ್ಭ ಮತ್ತು ಇತರ ಸಭೆ ಸಮಾರಂಭಗಳಲ್ಲಿ ಕೇಳುತ್ತಿರುತ್ತೇವೆ. ಆದರೆ ಈ ವರ್ಗದ ಜನರಿಗೆ ಕಷ್ಟವಾದಾಗ ಸ್ಪಂದಿಸುವುದು ಸರಕಾರದ ಕರ್ತವ್ಯವಾಗಿರುತ್ತದೆ. ಮಾನ್ಯ ಕಲ್ಯಾಣ  ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಗಮನಲ್ಲೆ ಈ ವಿಷಯ ಬಂದಂತೆ ಕಾಣುತ್ತಿಲ್ಲ. ಸಚಿವರು ಈ ಶಾಲೆಯ ಬಗ್ಗೆ ಮಾಹಿತಿ ಸಂಗ್ರಹಿಸಿ, ಹೊಸ ಕಟ್ಟಡ ಕಟ್ಟುವ ಬಗ್ಗೆ ಗಮನ ಹರಿಸಬೇಕಾಗಿ ವಿನಂತಿ.

Related Articles