ವೀಲ್ಚೇರ್ ಟೆನಿಸ್ ಚಾಂಪಿಯನ್ಗೆ ಜೊಮಾಟೊ ಡೆಲಿವರಿ ಕೆಲಸ
ಬೆಂಗಳೂರು: ಒಲಿಂಪಿಕ್ಸ್ನಲ್ಲಿ ಪದಕ ಗೆದ್ದರೆ 6 ಕೋಟಿ ರೂ. ಬಹುಮಾನ ಕೊಡುತ್ತೇವೆ ಎಂದು ಜನಪ್ರತಿನಿಧಿಗಳು ಆಗಾಗ ಹೇಳುತ್ತಿರುವುದನ್ನು ಕೇಳಿದಾಗ ಮನಕೆ ಬಹಳ ಖುಷಿಯಾಗುತ್ತದೆ, ಆದರೆ ಕ್ರೀಡಾಪಟುಗಳ ಕಷ್ಟವನ್ನು ಕೇಳಿದಾಗ ಅಷ್ಟೇ ನೋವಾಗುತ್ತದೆ. ಎರಡೂ ಕಾಲುಗಳಿಲ್ಲದೆ, ವೀಲ್ ಚೇರ್ನಲ್ಲಿ ಸಾಗುವ ಕೊಪ್ಪಳದ ಮುಬೀನಾ ಕೋಲ್ಕರ್ ವೀಲ್ಚೇರ್ ಟೆನಿಸ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. 18 ಪದಕಗಳನ್ನು ಗೆದ್ದರೂ ಹೊಟ್ಟೆ ಪಾಡಿಗಾಗಿ ಜೊಮಾಟೊದಲ್ಲಿ ಡೆಲಿವರಿ ಕೆಸಲ ಮಾಡುತ್ತಿದ್ದಾರೆ. ಇಂಥ ಕ್ರೀಡಾಪಟುಗಳ ಬದುಕಿನ ಕಡೆಗೆ ಸರಕಾರ ಅಥವಾ ಕಾರ್ಪೋರೆಟ್ ಜಗತ್ತು ಗಮನಹರಿಸಬೇಕಾದ ಅಗತ್ಯವಿದೆ. Mubeena Kolkar, an international wheelchair tennis player who works as a Zomato delivery driver to make ends meet.
ಮುಬೀನಾ ಅವರ ತಂದೆ ಸಯ್ಯದ್ ಮೌಲಾ ಹುಸೇನಿ ಹಾಗೂ ತಾಯಿ ರಮೀಜಾ. ಸಯ್ಯದ್ ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಮೂಲತಃ ಕೊಪ್ಪಳದವರಾದ ಮುಬೀನಾ, ಒಂಬತ್ತು ತಿಂಗಳ ಮಗುವಿದ್ದಾಗ ಜ್ವರಕ್ಕೆ ನೀಡಿದ ಮಾತ್ರೆಯ ಅಡ್ಡಪರಿಣಾಮದಿಂದಾಗಿ ಜ್ವರ ಬಂತು. ಬಳಿಕ ಕಾಲಿನ ಸ್ವಾದೀನ ಕಳೆದುಹೋಯಿತು. ನಂತರ ಮುಬೀನಾ ಸುಮಾರು 15 ವರ್ಷಗಳ ಕಾಲ ಗದಗದಲ್ಲಿರುವ ಸಿಎಸ್ಐ ಪುನರ್ವಸತಿ ಕೇಂದ್ರದಲ್ಲಿದ್ದುಕೊಂಡು, ಪಿಯುಸಿ ಶಿಕ್ಷಣ ಮುಗಿಸಿ, ಬಳಿಕ Advanced Diploma in Information Technology ಯಲ್ಲಿ ಡಿಪ್ಲೊಮಾ ಪದವಿ ಗಳಿಸಿ ಈಗ ಬೆಂಗಳೂರಿಗೆ ಬಂದು ಕಾಲ್ಸೆಂಟರ್ನಲ್ಲಿ ಕೆಲಸ ಮಾಡತೊಡಗಿದರು. 2015ರಲ್ಲಿ ಬೆಂಗಳೂರಿಗೆ ಬಂದಾಗ ಪ್ರೊವಿಜನ್ ಎನ್ಜಿಒನಲ್ಲಿ ಮೇಹೇಶ್ ಎಂಬುವರು ವೀಲ್ ಚೇರ್ ಟೆನಿಸ್ ಆಟಗಾರ್ತಿ ಶಿಲ್ಪಾ ಅವರಿಗೆ ಪರಿಚಯ ಮಾಡಿಸಿಕೊಟ್ಟರು.

ಗೆಳೆಯ-ಗೆಳತಿಯರೇ ವೀಲ್ ಚೇರ್ ಟೆನಿಸ್ ಕಲಿಸಿದರು: ಟಿವಿ ಮತ್ತು ಯೂಟ್ಯೂಬ್ನಲ್ಲಿ ಟೆನಿಸ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದ ಮುಬೀನಾ ಅವರಿಗೆ ಎಲ್ಲರಂತೆ ಆಡುವ ಹಂಬಲ. ಆದರೆ ನಡೆಯಲಾಗದ ನಾನು ಟೆನಿಸ್ ಆಡುವುದಾದರೂ ಹೇಗೆ ಎಂದು ಸುಮ್ಮನಾಗುತ್ತಿದ್ದರು. ಆಗ ಸಿಕ್ಕಿದ್ದು ದೇಶದ ಉತ್ತಮ ಟೆನಿಸ್ ಆಟಗಾರ್ತಿ ಶಿಲ್ಪಾ. 2018ರಲ್ಲಿ ಶಿಲ್ಪಾ ಅವರು ಮುಬೀನಾ ಅವರನ್ನು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಗೆ ಕರೆದುತಂದರು. ಶಿಲ್ಪಾ, ಅನಿಲ್. ಕೇಶವ್, ಶೇಖರ್ ಹಾಗೂ ಪ್ರತಿಮಾ ಇವರೆಲ್ಲ ಸೇರಿ ಮುಬೀನಾಗೆ ವೀಲ್ ಚೇರ್ ಟೆನಿಸ್ ಕಲಿಸಿದರು. ಈ ಗೆಳೆಯರ ವೀಲ್ ಚೇರ್ನಲ್ಲೇ ಮುಬೀನಾ ವೀಲ್ ಚೇರ್ ಟೆನಿಸ್ ಕಲಿತು ಆಟದಲ್ಲಿ ಹಿಡಿತ ಸಾಧಿಸಿದರು.

ಈಗ 18 ಪದಕಗಳಿವೆ: ಗೆಳೆಯರ ನೆರವಿನಿಂದ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ತರಬೇತಿ ಪಡೆದ ಮುಬೀನಾ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿ ಈಗ ಒಟ್ಟು 18 ಪದಕಗಳನ್ನು ಗೆದ್ದಿದ್ದಾರೆ. ಅವುಗಳಲ್ಲಿ 4 ಚಿನ್ನದ ಪದಕಗಳು. ಎರಡು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡಿರುವ ಮುಬೀನಾ ಈ ಬಾರಿ ಬಿಎನ್ಪಿ ಪಾರಿಬಸ್ ವಿಶ್ವ ಟೆನಿಸ್ನ ಏಷ್ಯಾ ಅರ್ಹತಾ ಸುತ್ತಿನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಆಸರೆ ನೀಡಿದ ಚಂದ್ರಕಾಂತ್ ಬಲ್ದೋಟ್: ಒಂದೆಡೆ ಗೆಳೆಯರು, ಇನ್ನೊಂದಡೆ ರಾಜ್ಯ ಲಾನ್ ಟೆನಿಸ್ ಸಂಸ್ಥೆ, ಹಾಗೂ ರಾಜ್ಯ ವೀಲ್ ಚೇರ್ ಟೆನಿಸ್ ಸಂಸ್ಥೆಯ ಪ್ರೋತ್ಸಾಹದ ಜೊತೆಯಲ್ಲಿ ಕರ್ನಾಟಕ ರಾಜ್ಯ ವೀಲ್ ಚೇರ್ ಟೆನಿಸ್ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ್ ಬಲ್ದೋಟ್ ಅವರು ಕಳೆದ ಎರಡು ವರ್ಷಗಳಿಂದ ಮುಬೀನಾಗೆ ಪ್ರೋತ್ಸಾಹ ನೀಡುತ್ತಿದ್ದಾರೆ. “ನಾವು ಮೊದಲು ದೆಹಲಿಗೆ ಹೋಗಬೇಕಾದರೆ ಮೂರು ದಿನಗಳ ಕಾಲ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆವು. ಕಳೆದ ಎರಡು ವರ್ಷಗಳಿಂದ ಚಂದ್ರಕಾಂತ್ ಸರ್ ಪ್ರಾಯೋಜಕತ್ವ ನೀಡುತ್ತಿದ್ದಾರೆ. ಇದರಿಂದಾಗಿ ನಮ್ಮ ಪ್ರಯಾಣ ಮಾತ್ರವಲ್ಲ ಎಲ್ಲ ಕಷ್ಟಗಳೂ ದೂರವಾಗಿವೆ,” ಎನ್ನುತ್ತಾರೆ ಮುಬೀನಾ.

ಬದುಕಲು ಜೊಮೊಟೊ ಡೆಲಿವರಿ ಕೆಲಸ: ಆಟಕ್ಕೆ ನೆರವು ಸಿಕ್ಕಿತು, ಬದುಕಿಗೆ ಏನು ಗತಿ? ಎಂಬ ಪ್ರಶ್ನೆ ಬಂದಾಗ ಮುಬೀನಾ ದೃತಿಗಡೆಲಿಲ್ಲ. ಜೊಮೊಟೊದಲ್ಲಿ ಡೆಲಿವರಿ ಕೆಲಸಕ್ಕೆ ಸೇರಿಕೊಂಡರು. ಬೆಳಿಗ್ಗೆ 7 ಗಂಟೆಯಿಂದ 11 ರ ವರೆಗೆ ಅಭ್ಯಾಸ ಮಾಡಿದರೆ, ಮಧ್ಯಾಹ್ನ 12 ರಿಂದ ರಾತ್ರಿ 8 ವರೆಗೆ ಜೊಮೊಟೊ ಡೆಲಿವರಿ ಕೆಲಸ ಮಾಡುತ್ತಾರೆ. “ಬದುಕಲು ಬೇರೆ ದಾರಿ ಇಲ್ಲ. ಕ್ರೀಡೆ ಖುಷಿ ಕೊಡುತ್ತದೆ. ಯಶಸ್ಸು ಸಿಕ್ಕಿದಾಗ ಖುಷಿ ಪಡುತ್ತೇವೆ. ಆದರೆ ಬದುಕಲು ಹಣ ಬೇಕು. ಅದಕ್ಕಾಗಿ ಕೆಲಸ ಮಾಡುತ್ತಿರುವೆ. ಗಳಿಸಿದ ಹಣದಲ್ಲಿ ಸ್ವಲ್ಪ ಭಾಗ ಹೆತ್ತವರಿಗೆ ಕಳುಹಿಸುತ್ತಿರುವೆ. ತಮ್ಮಂದಿರನ್ನು ಓದಿಸುವ ಜವಾಬ್ದಾರಿ ಇದೆ. ಕರ್ನಾಟಕ ಸಿಸ್ಟರ್ಸ್ ಸೊಸೈಟಿ ಲಿಂಗರಾಜಪುರ ಇಲ್ಲಿ ಪೇಯಿಂಗ್ ಗೆಸ್ಟ್ ಆಗಿ ಹುಳಿಸಿಕೊಂಡಿರುವೆ, ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ,” ಎಂದು ಹೇಳುವ ಮುಬೀನಾ ಅವರ ಮಾತಿನಲ್ಲಿ ವಿಶೇಷ ಚೇತನರು ಸಾಧನೆ ಮಾಡಿದರೂ ಕಷ್ಟದಲ್ಲೇ ಸಾಗಬೇಕಿದೆ ಎಂಬುದು ಸ್ಪಷ್ಟವಾಗುತ್ತದೆ.

ಮೊದಲು ಬೇರೆಯವರ ವೀಲ್ ಚೇರ್ನಲ್ಲಿ ಆಟವಾಡುತ್ತಿದ್ದ ಮುಬೀನಾಗೆ ಈಗ ಪ್ರೊವಿಜನ್ ಏಷ್ಯಾ ಸಂಸ್ಥೆಯವರು ಉಜ್ಜೀವನ್ ಬ್ಯಾಂಕ್ ಮೂಲಕ ಉತ್ತಮ ಗುಣಮಟ್ಟದ ವೀಲ್ ಚೇರ್ ಕೊಟ್ಟಿದ್ದಾರೆ.
ಸರ್ಕಾರ ಇಂಥವರಿಗೆ ಉದ್ಯೋಗ ನೀಡಬೇಕು: ಕರ್ನಾಟಕ ಸರಕಾರ ಅಥವಾ ಕೇಂದ್ರ ಸರಕಾರ ಇಂಥ ಕ್ರೀಡಾಪಟುಗಳ ಕಷ್ಟವನ್ನು ಗಮನಿಸಿ ಅವರಿಗೆ ಬದುಕಲು ಅನುವಾಗುವಂಥ ಒಂದು ಉದ್ಯೋಗವನ್ನು ನೀಡಬೇಕು, ಹಾಗಿದ್ದಲ್ಲಿ ಮಾತ್ರ ನಾವು ಮನುಷ್ಯತ್ವಕ್ಕೆ ಬೆಲೆ ಕೊಟ್ಟಂತಾಗುತ್ತದೆ.

