ಬೆಂಗಳೂರು ಬುಲ್ಸ್‌ಗೆ ಸತತ ಎರಡನೇ ಜಯ
ವಿಶಾಖಪಟ್ಟಣ: ಆಲ್‌ರೌಂಡರ್ ಅಲಿರೇಜಾ ಮಿರ್ಜಾಯಿನ್ ಅವರ ಸೂಪರ್ ಟೆನ್ ಸಾಹಸದ ಜತೆಗೆ ಮತ್ತೊಮ್ಮೆ ಸಾಂಘಿಕ ಪ್ರದರ್ಶನ ಹೊರಹಾಕಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ಐದನೇ ಪಂದ್ಯದಲ್ಲಿಹರಿಯಾಣ ಸ್ಟೀಲರ್ಸ್ ವಿರುದ್ಧ 7 ಅಂಕಗಳ ಭರ್ಜರಿ ಗೆಲುವು ಸಾಧಿಸಿತು. Masterclass from Alireza, Deepak & Yogesh help Bengaluru Bulls to crucial win vs Haryana Steelers
ವಿಶ್ವನಾಥ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸೋಮವಾರ ನಡೆದ ಮೊದಲ ಹಣಾಹಣಿಯಲ್ಲಿಬೆಂಗಳೂರು ತಂಡ 40-33 ಅಂಕಗಳ ಅಂತರದಿಂದ ಸ್ಟೀಲರ್ಸ್‌ಗೆ ಆಘಾತ ನೀಡಿತು. ಇದರೊಂದಿಗೆ ಸತತ ಎರಡನೇ ಜಯ ಗಳಿಸಿದ ಬುಲ್ಸ್, ಸದ್ಯ ನಾಲ್ಕು ಅಂಕಗಳನ್ನು ಕಲೆಹಾಕಿದೆ. ಅತ್ತ ಎರಡನೇ ಸೋಲಿಗೆ ಗುರಿಯಾದ ಸ್ಟೀಲರ್ಸ್, ಹ್ಯಾಟ್ರಿಕ್ ಗೆಲುವಿನ ಅವಕಾಶವನ್ನು ಕೈಚೆಲ್ಲಿತು.
ಬೆಂಗಳೂರು ಬುಲ್ಸ್ ತಂಡದ ಪರ ಅಲಿರೇಜಾ ಮಿರ್ಜಾಯಿನ್ (12 ಅಂಕ), ಆಶಿಶ್ ಮಲಿಕ್ (5 ಅಂಕ), ದೀಪಕ್ (5 ಅಂಕ) ಮತ್ತು ಯೋಗೇಶ್ (6 ಅಂಕ) ಮಿಂಚಿದರೆ, ಹರಿಯಾಣ ಸ್ಟೀಲರ್ಸ್ ತಂಡದ ಪರ ಮಯಾಂಕ್ ಸೈನಿ (6 ಅಂಕ), ಶಿವಂ ಪತರೆ(7 ಅಂಕ) ಮತ್ತು ಜಯ ಸೂರ್ಯ (5 ಅಂಕ) ಗಮನ ಸೆಳೆದರು. ಪಂದ್ಯ ಮುಕ್ತಾಯಕ್ಕೆ ಹತ್ತು ನಿಮಿಷಗಳಿರುವಾಗ 32-24ರಲ್ಲಿಅಂತರ ಹೆಚ್ಚಿಸಿದ ಬುಲ್ಸ್, ಸತತ ಎರಡನೇ ಗೆಲುವಿನ ಮುನ್ಸೂಚನೆ ನೀಡಿತು. 26ನೇ ನಿಮಿಷದಲ್ಲಿಎರಡು ರೇಡಿಂಗ್ ಅಂಕಗಳ ಜತೆಗೆ ಎರಡು ಆಲೌಟ್ ಪಾಯಿಂಟ್ಸ್ ತಂದುಕೊಟ್ಟ ಅಲಿರೇಜಾ ಮಿರ್ಜಾಯಿನ್, ಬುಲ್ಸ್ ತಂಡದ ಮುನ್ನಡೆಯನ್ನು 29-23ಕ್ಕೆ ಹಿಗ್ಗಿಸುವುದರೊಂದಿಗೆ ತಂಡವನ್ನು ಸುಸ್ಥಿತಿಗೆ ತಳ್ಳಿದರು.
ಮುನ್ನಡೆ ವಿಸ್ತರಿಸುವ ಗುರಿಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬುಲ್ಸ್, 3 ನಿಮಿಷಗಳ ಅಂತರದಲ್ಲಿ24-19ರಲ್ಲಿಮೇಲುಗೈ ಸಾಧಿಸಿ ಎದುರಾಳಿ ತಂಡವನ್ನು ಖಾಲಿ ಮಾಡಿಸುವ ಹಂತಕ್ಕೆ ತಲುಪಿತು. ಆದರೆ ಆಶಿಶ್ ಮಲಿಕ್ ಮತ್ತು ದೀಪಕ್ ಶಂಕರ್ ಅವರನ್ನು ಔಟ್ ಮಾಡಿದ ಜಯ ಸೂರ್ಯ, ಹರಿಯಾಣ ತಂಡದ ಹಿನ್ನಡೆಯನ್ನು 21-24ಕ್ಕೆ ತಗ್ಗಿಸಿ ಪ್ರಬಲ ಹೋರಾಟಕ್ಕೆ ಸಾಕ್ಷಿಯಾದರು.
ಇದಕ್ಕೂ ಮುನ್ನ ಪಟನಾ ಪೈರೇಟ್ಸ್ ಎದುರು ಲಭಿಸಿದ ಗೆಲುವಿನಿಂದ ಆತ್ಮವಿಶ್ವಾಸದೊಂದಿಗೆ ಅಖಾಡಕ್ಕಿಳಿದ ಬೆಂಗಳೂರು ಬುಲ್ಸ್, ರೇಡಿಂಗ್ ಮತ್ತು ಟ್ಯಾಕಲ್ ಎರಡರಲ್ಲೂಮಿಂಚುವ ಮೂಲಕ ಪ್ರಥಮಾರ್ಧಕ್ಕೆ 21-18 ಅಂಕಗಳಿಂದ ಮೇಲುಗೈ ಸಾಧಿಸಿತು.
ಪಂದ್ಯ ಆರಂಭವಾದ ಕೇವಲ 5 ನಿಮಿಷಗಳ ಅಂತರದಲ್ಲಿಅಲಿರೇಜಾ ಅವರ ಬಲದಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಆಲೌಟ್ ಬಲೆಗೆ ಬೀಳಿಸಿದ ಮಾಜಿ ಚಾಂಪಿಯನ್ಸ್ ಬುಲ್ಸ್ ಆಟಗಾರರು 9-2ರಲಿ ಮುನ್ನಡೆ ಸಾಧಿಸಿದರು. ಹತ್ತು ನಿಮಿಷಗಳ ಮುಕ್ತಾಯಕ್ಕೆ ತಂಡದ ಮುನ್ನಡೆಯನ್ನು 13-8ಕ್ಕೆ ವಿಸ್ತರಿಸಿದ ಯೋಗೇಶ್ ನಾಯಕತ್ವದ ಬುಲ್ಸ್, ನಂತರದ ಸಮಯದಲ್ಲಿಎದುರಾಳಿಯಿಂದ ತುರುಸಿನ ಪೈಪೋಟಿ ಎದುರಿಸಿತು.
ಇದರ ನಡುವೆಯೂ ಆಲ್‌ರೌಂಡರ್ ಅಲಿರೇಜಾ ಮತ್ತು ಆಶಿಶ್ ಮಲಿಕ್ ಮಿಂಚಿದ ಕಾರಣ ಬುಲ್ಸ್ ತಂಡದ ಹಿಡಿತ ಮುಂದುವರಿಯಿತು. 12ನೇ ನಿಮಿಷದಲ್ಲಿಮಹಿಪಾಲ್ ಅವರನ್ನು ಟ್ಯಾಕಲ್ ಮಾಡಿದ ಜೈದೀಪ್ ಹರಿಯಾಣ ತಂಡಕ್ಕೆ ಎರಡು ಆಲೌಟ್ ಪಾಯಿಂಟ್ಸ್ ತಂದುಕೊಟ್ಟರು. ಇದರಿಂದ ಹರಿಯಾಣ ಹಿಂದಿನ ಆಲೌಟ್‌ಗೆ ಮುಯ್ಯಿ ತೀರಿಸಿಕೊಂಡಿತು. ಒಂದು ಹಂತದಲ್ಲಿ13-16ರಲ್ಲಿಪ್ರತಿರೋಧ ಒಡ್ಡಿದ ಸ್ಟೀಲರ್ಸ್, ಪ್ರಬಲವಾಗಿ ಪುಟಿದೆದ್ದಿತು. ಆದರೆ ಬುಲ್ಸ್ ಸಂಘಟನಾತ್ಮಕ ಪ್ರದರ್ಶನ ನೀಡಿ ವಿರಾಮಕ್ಕೆ ಮೇಲುಗೈ ಕಾಯ್ದುಕೊಂಡಿತು. ಬೆಂಗಳೂರು ಬುಲ್ಸ್ ತನ್ನ ಮುಂದಿನ ಪಂದ್ಯದಲ್ಲಿಸೆಪ್ಟೆಂಬರ್ 12ರಂದು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ.