Sunday, September 8, 2024

ಶಮಿ 5, ಇಂಡಿಯಾ 5, ವಿರಾಟ್‌ 95

ಧರ್ಮಶಾಲಾ: ವಿರಾಟ್‌ ಕೊಹ್ಲಿ (95) ಯ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ಮತ್ತು ಮೊಹಮ್ಮದ್‌ ಶಮಿ (54ಕ್ಕೆ 5) ಅವರ ಆಕರ್ಷಕ ಬೌಲಿಂಗ್‌ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ 4 ವಿಕೆಟ್‌ ಜಯ ಗಳಿಸುವ ಮೂಲಕ ಆಡಿದ ಐದೂ ಪಂದ್ಯಗಳಲ್ಲಿ ಐದು ಯಶಸ್ಸು ಕಂಡಿದೆ. India 5 out 5 in the 2023 world cup ಆದರೆ ಸಚಿನ್‌ ತೆಂಡೂಲ್ಕರ್‌ ಅವರ 49ನೇ ಶತಕವನ್ನು ಸರಿಗಟ್ಟುವಲ್ಲಿ ವಿರಾಟ್‌ ಕೊಹ್ಲಿ ವಿಫಲವಾದುದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತು.

ಟಾಸ್‌ ಗೆದ್ದು ಫೀಲ್ಟಿಂಗ್‌ ಆಯ್ದುಕೊಂಡ ಭಾರತ ತಂಡ ಕಿವೀಸ್‌ ಪಡೆಯನ್ನು 273 ರನ್‌ಗೆ ಕಟ್ಟಿ ಹಾಕಿತು. ಬ್ಲ್ಯಾಕ್‌ ಕ್ಯಾಪ್ಸ್‌ ಪರ ಡ್ಯಾರಿಲ್‌ ಮಿಚೆಲ್‌ 130 ರನ್‌ ಗಳಿಸಿ ಸವಾಲಿನ ಮೊತ್ತವನ್ನು ದಾಖಲಿಸುವಲ್ಲಿ ನೆರವಾದರು.

ಪ್ರಸಕ್ತ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಮೊಹಮ್ಮದ್‌ ಶಮಿ ಮೊದಲ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್‌ ಕಬಳಿಸಿ ದಿಟ್ಟ ಪ್ರವೇಶ ನೀಡಿದರು. ಅಂತಿಮವಾಗಿ 54 ರನ್‌ಗೆ 5 ವಿಕೆಟ್‌ ಗಳಿಸಿ ಕಿವೀಸ್‌ ರನ್‌ ಗಳಿಕೆಗೆ ಕಡಿವಾಣ ಹಾಕಿದರು ಮಾತ್ರವಲ್ಲ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ವಿರಾಟ್‌ ಕೊಹ್ಲಿಯು ಬಾಂಗ್ಲಾದೇಶದ ವಿರುದ್ಧದ ಈ ಹಿಂದಿನ ಪಂದ್ಯದಲ್ಲಿ ದಾಖಲಿಸಿದ 48ನೇ ಶತಕ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಆದರೆ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅವರು ಸಹಜವಾಗಿಯೇ ಆಡುತ್ತಿದ್ದರು, ಹೆನ್ರಿ ಅವರು ಎಸೆಯುತ್ತಿದ್ದ 48ನೇ ಓವರಿನ 3 ನೇ ಎಸೆತದಲ್ಲಿ ಸಿಂಗಲ್‌ ತೆಗೆದುಕೊಳ್ಳುವ ಅವಕಾಶವಿದ್ದಿತ್ತು. ಅದನ್ನು ನಿರಾಕರಿಸಿದ ಕೊಹ್ಲಿ ನಂತರದ ಎಸೆತದಲ್ಲಿ ಫಿಲಿಪ್ಸ್‌ಗೆ ಕ್ಯಾಚಿತ್ತು ನಿರಾಸೆಯಿಂದ ನಿರ್ಗಮಿಸಿದರು. ರವೀಂದ್ರ ಜಡೇಜಾ ಅಜೇಯ 39 ರನ್‌ ಗಳಿಸಿ ತಾಳ್ಮೆಯ ಆಟ ಪ್ರದರ್ಶಿಸುವ ಮೂಲಕ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಮೊಹಮ್ಮದ್‌ ಶಮಿ ನಿರೀಕ್ಷೆಯಂತೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತ ಅಜೇಯವಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

Related Articles