ಗೋವಾ ಸವಾಲಿಗೆ ಪುಣೆ ಸಜ್ಜು

0
199
ಗೋವಾ, ಅಕ್ಟೋಬರ್ 27

ಭಾನುವಾರ ಗೋವಾದ ಟೋರ್ಡಾದಲ್ಲಿರುವ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬಲಿಷ್ಠ ಎಫ್ ಸಿ ಗೋವಾ ತಂಡವನ್ನು ಎದುರಿಸಲಿರುವ ಎಫ್ ಸಿ ಪುಣೆ ಸಿಟಿ ತಂಡ ಕಠಿಣ ಸವಾಲನ್ನು ಎದುರಿಸಬೇಕಾಗಿದೆ.

ಮುಂಬೈ ಸಿಟಿ ಎಫ್ ಸಿ ತಂಡವನ್ನು 5-0 ಅಂತರದಲ್ಲಿ ಸೋಲಿಸಿರುವ ತಂಡವನ್ನು ಮಾತ್ರ ಪುಣೆ ಎದುರಿಸುತ್ತಿಲ್ಲ, ಜತೆಯಲ್ಲಿ  ಕೋಚ್ ಮ್ಯುಗಲ್ ಏಂಜಲ್ ಪೋರ್ಚುಗಲ್ ಅವರಲ್ಲಿದೆ ಕಠಿಣ ಸವಾಲನ್ನು ಎದುರಿಸಬೇಕಾಗಿದೆ. ಎರಡು ಗೋಲು ಹಾಗೂ ಒಂದು ಡ್ರಾ ಕಂಡಿರುವ ಪುಣೆ ತಂಡದ ಕೋಚ್ ಪೋರ್ಚುಗಲ್ ಅವರ ಕೆಲಸದ ಮೇಲೂ ತಂಡದ ಪ್ರದರ್ಶನ ಪರಿಣಾಮ ಬೀರಿತು. ಎಮಿಲಿಯಾನೋ ಅಲ್ಫಾರೋ ಹಾಗೂ ಮಾರ್ಸೆಲಿನೋ ಅವರಂಥ ಆಟಗಾರರನ್ನು ಹೊಂದಿರುವ ಪುಣೆ ತಂಡ ಗೋಲು ಗಳಿಸುವಲ್ಲಿ ವಿಲವಾಗುತ್ತಿದೆ. ಕಳೆದಋತುವಿನಲ್ಲಿ ಉತ್ತಮ ಅಟ್ಯಾಕಿಂಗ್ ತಂಡವೆಂದು ಖ್ಯಾತಿ ಪಡೆದಿರುವ ಪುಣೆ ತಂಡ ಈ ಬಾರಿ ಗಳಿಸಿರುವುದು ಮೂರು ಪಂದ್ಯಗಳಿಂದ ಒಂದು ಗೋಲು.
‘ನಮ್ಮಲ್ಲಿ ಗೋಲ್ಡನ್ ಬೂಟ್ ಅಥವಾ ಉತ್ತಮ ಸ್ಟ್ರೈಕರ್ ಗೌರವಕ್ಕೆ ಪಾತ್ರರಾಗುವ ಆಟಗಾರರಿದ್ದಾರೆ. ಆದರೆ ಅವರಿಗೆ ಉತ್ತಮ ಫಾರ್ಮ್ ಸಿಗಬೇಕಾಗಿದೆ. ಅವರಿಗೆ ಉತ್ತಮ ಪಾಸ್ ಸಿಕ್ಕಿದ್ದಲ್ಲಿ ಗೋಲು ಸಹಜವಾಗಿಯೇ ದಾಖಲಾಗುತ್ತದೆ,‘ ಎಂದು ತಂಡದ ಮಧ್ಯಂತರ  ಕೋಚ್ ಪ್ರದ್ಯುಮ್ನ ರೆಡ್ಡಿ ಹೇಳಿದ್ದಾರೆ.
 ಫೆರಾನ್ ಕೊರೊಮಿನಾಸ್ ಹಾಗೂ ಹ್ಯುಗೋ ಬೌಮೌಸ್ ಅವರಿಂದ ಕೂಡಿರುವ ತಂಡದ ವಿರುದ್ಧ ಆಡಬೇಕಾದ ಅನಿವಾರ್ಯತೆ ಹೊಂದಿರುವ ಪುಣೆಗೆ ಈಗ ಮಧ್ಯಂತರ  ಕೋಚ್ ರೆಡ್ಡಿ ಅವರು ಆತ್ಮವಿಶ್ವಾಸವನ್ನು ತುಂಬಬೇಕಾಗಿದೆ. ಕಳೆದ ಬಾರಿ ಗೋವಾ ವಿರುದ್ಧದ ಜಯವೇ ತಂಡಕ್ಕೆ ಸ್ಫೂರ್ತಿಯಾಗಿದೆ.
‘ಇಂಥ ಪರಿಸ್ಥಿತಿಯಲ್ಲಿ ಹುಡುಗರ ಆಯ್ಕೆ ಮಾಡುವುದು ಅಷ್ಟು ಸುಲಭವಲ್ಲ. ಕಳೆದ ಡಿಸೆಂಬರ್‌ನಲ್ಲಿ ನಾವು ಇಲ್ಲಿ ಆಡಿದ್ದೇವೆ, ಆ ಪಂದ್ಯದ ವೀಡಿಯೋವನ್ನು ವೀಕ್ಷಿಸಿದ್ದೇವೆ. ಆ ಪಂದ್ಯದ ಹೈಲೈಟ್ಸ್ ಗಮನಿಸಿದ್ದೇವೆ. ನಾವು ತಂಡವಾಗಿ ಆಡಿದ್ದೆವು. ಅ ರೀತಿ ತಂಡವಾಗಿ ದಾಳಿ ಮಾಡಿದ್ದೇವೆ. 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದ್ದೆವು. ಅಲ್ಲಿ ನಾವು ಮೂರು ಅಥವಾ ನಾಲ್ಕು ಗೋಲುಗಳ ಅಂತರದಲ್ಲಿ ಜಯ ಗಳಿಸುವ ಅವಕಾಶವಿದ್ದಿತ್ತು. ಈ ಮೆಲುಕು ನಮ್ಮ ತಂಡದಲ್ಲಿ ಹೊಸ ಉತ್ಸಾಹವನ್ನು ಭರಿಸಲಿದೆ,‘ ಎಂದು ರೆಡ್ಡಿ ಹೇಳಿದ್ದಾರೆ.
ಮುಂಬೈ ಸಿಟಿ ತಂಡವನ್ನು ಸೋಲಿಸಿದ ರೀತಿಯ ಮೂಲಕ ಗೋವಾ ತಂಡ ಲೀಗ್‌ನಲ್ಲಿರುವ ಇತರ ತಂಡಗಳಿಗೆ ಎಚ್ಚರಿಕೆ ಕರೆ ನೀಡಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಗೋವಾ ಈಗಾಗಲೇ ಹತ್ತು ಗೋಲುಗಳನ್ನು ಗಳಿಸಿದೆ. ಆದರೆ ಕೋಚ್ ಸರ್ಗಿಯೋ ಲೊಬೆರಾ ಅವರು ಎಲ್ಲಿಯೂ ಆತುರದ ಲಕ್ಷಣ ತೋರಿಲ್ಲ. ಪುಣೆ ತಂಡ ಅತ್ಯಂತ ಕಠಿಣ ಸವಾಲು ನೀಡಲಿದೆ ಎಂದೇ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಂಕ ಪಟ್ಟಿಯಲ್ಲಿ ತಳ ಭಾಗದಲ್ಲಿರುವ ತಂಡ ಮೇಲಕ್ಕೇರಲು ಉತ್ಸುಕವಾಗಿರುವುದು ಗೋವಾ ತಂಡದ ಕೋಚ್‌ಗೆ ಮನವರಿಕೆಯಾಗಿದೆ.
‘ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ನಾವು ಫೇವರಿಟ್ ಎಂದು ಊಹಿಸಿಲ್ಲ. ನೀವು ಶೇ. ನೂರರಷ್ಟು ಪ್ರಮಾಣದಲ್ಲಿ ಆಡದಿದ್ದರೆ, ನಾಳೆಯ ಪಂದ್ಯವನ್ನು ಗೆಲ್ಲಲು ಅಸಾಧ್ಯ,‘ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಪುಣೆ ಸಿಟಿ ತಂಡ ಅಂಕಪಟ್ಟಿಯಲ್ಲಿ ಕೆಳ ಭಾಗದಲ್ಲಿರುವ ಬಗ್ಗೆಯೂ ಗೋವಾದ ಕೋಚ್ ಹೆಚ್ಚು ಗಮನ ಹರಿಸಿಲ್ಲ.
‘ಪುಣೆ ತಂಡ ಅಂಕ ಪಟ್ಟಿಯಲ್ಲಿ ಈಗ ಕೊನೆಯ ಸ್ಥಾನದಲ್ಲಿರಬಹುದು, ಆದರೆ ತಂಡದ ಶಕ್ತಿಯ ಮೇಲೆ ಅದು ಪರಿಣಾಮ ಬೀರದು. ಅದು ಉತ್ತಮ ತಂಡ. ಅವರು ಪ್ರಶಸ್ತಿಯ ಗುರಿ ಇಟ್ಟಿರುವ ತಂಡವೂ ಹೌದು, ನಾಳೆಯ ಪಂದ್ಯ ನಮ್ಮ ಪಾಲಿಗೆ ಕಠಿಣ ನಿಜ,‘ ಎಂದಿದ್ದಾರೆ. ಬ್ರೆಂಡಾನ್ ಫೆರ್ನಾಂಡೀಸ್ ಅವರು ಆಡಲು ಫಿಟ್ ಆಗಿರುವುದು ಗೋವಾ ತಂಡದ ಶಕ್ತಿಯನ್ನು ಹೆಚ್ಚಿಸಿದೆ. ತಂಡ ಭಾನುವಾರ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದೆ.