Sunday, May 26, 2024

ಜಯದೊಂದಿಗೆ ಐಎಸ್‌ಎಲ್‌ಗೆ ಸಜ್ಜಾದ ಗೋವಾ

ಸ್ಪೋರ್ಟ್ಸ್ ಮೇಲ್ ವರದಿ

ಇಂಡಿಯನ್ ಏರೋಸ್ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಎಫ್ಸಿ ಗೋವಾ ತಂಡ ಅತ್ಯಂತ ಆತ್ಮವಿಶ್ವಾಸದೊಂದಿಗೆ ಇಂಡಿಯನ್ ಸೂಪರ್ ಲೀಗ್‌ಗೆ ಸಜ್ಜಾಗಿದೆ. ಋತುವಿನ ಆರಂಭಕ್ಕೆ  ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೋವಾದ ಆಟಗಾರರ ಮನೋಬಲ ಹೆಚ್ಚಿಸಿದೆ.

೮೮ನೇ ನಿಮಿಷದಲ್ಲಿ ಪ್ರಿನ್ಸ್‌ಟೋನ್ ರೆಬೆಲ್ಲೋ ಗಳಿಸಿದ ಗೋಲಿನಿಂದ ಗೋವಾ ತಂಡ ಜಯದ ಸಂಭ್ರಮ  ಕಂಡಿತು. ಮಿಗ್ವೆಲ್ ಪಲಾಂಕಾ ಗಳಿಸಿದ ಗೋಲಿನಿಂದ ಗೋವಾ ತಂಡ ಆರಂಭಿಕ ಮುನ್ನಡೆ ಕಂಡಿತ್ತು. ಆದರೆ ಬೆಂಗಳೂರಿನ ಆಟಗಾರ ಸಂಜೀವ್ ಸ್ಟಾಲಿನ್ ಹೆಡರ್ ಮೂಲಕ ಗಳಿಸಿದ ಗೋಲು ಆತಿಥೇಯ ಪ್ರೇಕ್ಷಕರನ್ನು ಮೌನಕ್ಕೆ ಸರಿಯುವಂತೆ ಮಾಡಿತ್ತು. ಆದರೆ ರೆಬೆಲ್ಲೋ ಗಳಿಸಿದ ಜಯದ ಗೋಲು ಗೋವಾದ ಪಾಳಯದಲ್ಲಿ ಸಂಭ್ರಮ ಮರಳುವಂತೆ ಮಾಡಿತು.
ಪಂದ್ಯ ಆರಂಭಗೊಂಡ ೧೦ ಮತ್ತು ೧೧ನೇ ನಿಮಿಷಗಳಲ್ಲಿ ಗೋವಾ ತಂಡಕ್ಕೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಚೆಂಡನ್ನು ಗೋಲ್‌ಬಾಕ್ಸ್‌ಗೆ ತಲುಪಿಸುವಲ್ಲಿ ಆಟಗಾರರು ವಿಫಲರಾದರು. ಇದರೊಂದಿಗೆ ಪ್ರಥಮಾರ್ಧ  ಗೋಲಿಲ್ಲದೆ ಅಂತ್ಯಗೊಂಡಿತು. ಯುವ ಆಟಗಾರರಿಂದ ಕೂಡಿದ್ದ ಇಂಡಿಯನ್ ಏರೋಸ್ ತಂಡ ದ್ವಿತಿಯಾರ್ಧ  ೨೯ ನಿಮಿಷಗಳ ಆಟದಲ್ಲಿ ಉತ್ತಮ ಪ್ರದರ್ಶನ ತೋರಿತು. ಬೋರಿಸ್ ಸಿಂಗ್ ಅವರು  ಗೋಲ್‌ಬಾಕ್ಸ್‌ಗೆ ಗುರಿ ಇಟ್ಟು ತುಳಿದ ಚೆಂಡನ್ನು ಲಕ್ಷ್ಮೀಕಾಂತ್ ಕಟ್ಟಿಮನಿ ಉತ್ತಮ ರೀತಿಯಲ್ಲಿ ತಡೆದು ತಂಡಕ್ಕೆ ರಕ್ಷಣೆ ನೀಡಿದರು. ಆದರೆ ಗೋವಾದ ಅನುಭವಿ ಆಟಗಾರರ ಮುಂದೆ ಏರೋಸ್‌ನ ಆಟ ನಡೆಯಲಿಲ್ಲ. ಎರಡು ಗೋಲುಗಳನ್ನು ಗಳಿಸಿದ ತಂಡ ಜಯ ಸಾಧಿಸಿತು.

Related Articles