Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಭಾರತದ ಕ್ಲೈಮಿಂಗ್‌ನ ಸ್ಪೈಡರ್‌ ಮ್ಯಾನ್‌ ಕನ್ನಡಿಗ ದೀಪು

ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ವೇಗದ ಸ್ಪರ್ಧೆ ಅಂದರೆ 100 ಮೀ. ಓಟವಾಗಿತ್ತು. ಆದರೆ ಕಳೆದ ಎರಡು ಒಲಿಂಪಿಕ್ಸ್‌ಗಳಿಂದ ಮಿಂಚಿನ ಓಟ ವೇಗದ ಸ್ಪರ್ಧೆಯಾಗಿ ಉಳಿದಿಲ್ಲ. ಈಗ ಅತ್ಯಂತ ವೇಗದ ಸ್ಪರ್ಧೆಯೆಂದರೆ ಸ್ಪೀಡ್‌ ಕ್ಲೈಮಿಂಗ್‌ Speed Climbing. ವಿಶ್ವದಾಖಲೆಯ ಪ್ರಕಾರ 4.648 ಸೆಕೆಂಡಗಳಲ್ಲಿ ಮುಗಿದು ಹೋಗುವ ಈ ಸ್ಪರ್ಧೆ ಈಗ ಕ್ರೀಡಾ ಜಗತ್ತಿನ ಹಾಟ್‌ ಕೇಕ್‌. ಕುತೂಹದಲ ಮತ್ತು ಖುಷಿಯ ಸಂಗತಿ ಎಂದರೆ ಕರ್ನಾಟಕ ಆರೋಹಣಗಾರ ಬೆಂಗಳೂರಿನ ದೀಪು ಮಲ್ಲೇಶ್‌  ರಾಷ್ಟ್ರೀಯ ಚಾಂಪಿಯನ್‌ ಕಳೆದ ವಾರ ಬೆಂಗಳೂರಿನಲ್ಲಿ ನಡೆದ 29ನೇ ರಾಷ್ಟ್ರೀಯ ಕ್ಲೈಮಿಂಗ್‌ ಚಾಂಪಿಯನ್‌ಷಿನ್‌ನಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದ ದೀಪು ಮಲ್ಲೇಶ್‌ ಗೌಡ ಸದ್ಯ ಏಷ್ಯನ್‌ ಚಾಂಪಿಯನ್‌ಷಿಪ್‌ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಗುರಿ ಹೊಂದಿದ್ದಾರೆ. Deepu Mallesh, who brought glory to the state by winning the gold medal in the 29th National Climbing Championship, is currently aiming to represent the country in the Asian Championship and the Asian Games.

ಚಾಂಪಿಯನ್‌ಷಿಪ್‌ ಮುಗಿದ ಬಳಿಕ sportsmail ಜೊತೆ ಮಾತನಾಡಿದ ದೀಪು ಮಲ್ಲೇಶ್‌ ಈ ಕ್ರೀಡೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸುಮಾರು 15 ವರ್ಷಗಳಿಂದ ಆರೋಹಣ (Climbing) ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೋಲಿಗೆ ಬೇಸರಿಸದೆ, ಜಯದಲ್ಲಿ ಮೈಮರೆಯದೆ ಅತ್ಯಂತ ಶೃದ್ಧೆಯಿಂದ ಮುನ್ನಡೆದಿದ್ದಾರೆ.

ಮೂಲತಃ ಚನ್ನರಾಯಪಟ್ಟಣದವರಾಗಿರುವ ಮಲ್ಲೇಶ್‌ ಹಾಗೂ ಗಾಯತ್ರಿ ದಂಪತಿಯ ಪುತ್ರ ದೀಪುಗೆ ಈಗ 27 ವರ್ಷ. ಕಳೆದ 15 ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ರಾಷ್ಟ್ರ ಮಟ್ಟದಲ್ಲೇ 15ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಈಗ ಕ್ಲೈಮಿಂಗ್‌ ಒಲಿಂಪಿಕ್ಸ್‌ ಕ್ರೀಡೆಯಾಗಿರುವುದರಿಂದ ಜಗತ್ತಿನಾದ್ಯಂತ ಹೆಚ್ಚು ಬೇಡಿಕೆ ಇದೆ. ಮಾತ್ರವಲ್ಲ ಬೆಂಗಳೂರಿನಲ್ಲೂ ಸಾಕಷ್ಟು ಕ್ಲೈಮಿಂಗ್‌ ಸೆಂಟರ್‌ಗಳು ಹುಟ್ಟಿಕೊಂಡಿವೆ ಎನ್ನುತ್ತಾರೆ ದೀಪು.

“ಕಳೆದ 15 ವರ್ಷಗಳಿಂದ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವೆ, ಸಾಕಷ್ಟು ವೈಫಲ್ಯಗಳನ್ನೂ ಕಂಡಿರುವೆ. ಆದರೆ ಕ್ರೀಡೆಯ ಬಗ್ಗೆ ಶ್ರದ್ಧೆ ಹಾಗೂ ಬದ್ಧತೆಯನ್ನು ಉಳಿಸಿಕೊಂಡಿದ್ದರಿಂದ ಯಶಸ್ಸಿನ ಹಾದಿ ತುಳಿಯಲು ಸಾಧ್ಯವಾಯಿತು. ಈಗ ಒಲಿಂಪಿಕ್ಸ್‌ ಕ್ರೀಡೆಯಾಗಿರುವುದರಿಂದ ಇನ್ನಷ್ಟು ಪ್ರೋತ್ಸಾಹ ಸಿಗುತ್ತಿದೆ. ಭಾರತೀಯ ಪರ್ವತಾರೋಹಣ ಫೌಂಡೇಷನ್‌ (Indian Mountaineering Foundation) ಹಾಗೂ ಕರ್ನಾಟಕ ಸರಕಾರದ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿವೆ. ಯಶಸ್ಸಿನ ಹಾದಿ ತುಳಿದಿರುವುಕ್ಕೆ ಶಿಷ್ಯವೇತನವೂ ಸಿಗುತ್ತಿದೆ,” ಎಂದರು.

ಪ್ರೋತ್ಸಾಹ ನೀಡಿದ ಕೋಚ್‌ ಶಿವ: ದೀಪು ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿದವರು ಕ್ಲೈಮಿಂಗ್‌ ಕೋಚ್‌ ಶಿವ ಅವರು. ಮೊದಲು ಬೌಲ್ಡರಿಂಗ್‌ ಹಾಗೂ ಲೀಡ್‌ನಲ್ಲಿ ಸ್ಪರ್ಧಿಸುತ್ತಿದ್ದ ದೀಪು ಈಗ ಕೇವಲ ಸ್ಪೀಡ್‌ ಕ್ಲೈಮಿಂಗ್‌ನಲ್ಲಿ ಮಾತ್ರ ಸ್ಪರ್ಧಿಸುತ್ತಿದ್ದಾರೆ.

“ಬೆಂಗಳೂರಿನಲ್ಲಿ ಬಾಡಿಗೆ ಮನೆ ಬದಲಾಯಿಸಿದಾ ನಮ್ಮ ಮನೆಯ ಕೆಳಗಿನ ಮಹಡಿಯಲ್ಲಿ ಶಿವ ಸರ್‌ ವಾಸಿಸುತ್ತಿದ್ದರು, ಆಗ ನನಗೆ 12 ವರ್ಷ, ಶಿವ ಸರ್‌ ನನಗೆ ಈ ಆರೋಹಣ ಕ್ರೀಡೆಯ ಬಗ್ಗೆ ಮಾಹಿತಿ ನೀಡಿದ್ದು ಮಾತ್ರವಲ್ಲ ತರಬೇತಿಯನ್ನೂ ನೀಡಿದರು, ಅವರಲ್ಲಿ ಉತ್ತಮವಾಗಿ  ಪಳಗಿದ ದೀಪು ಇತ್ತೀಚಿಗೆ ಭಾರತ ಸ್ಪೀಡ್‌ ಕ್ಲೈಮಿಂಗ್‌ ತಂಡದ ಕೋಚ್‌ ಬಿಬಾಸ್‌ ರಾಯ್‌ (Bibas Roy) ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಜನಪ್ರಿಯಗೊಳ್ಳುತ್ತಿರುವ ಕ್ಲೈಮಿಂಗ್‌ ಕ್ರೀಡೆ: ಮೊದಲು ಸ್ಪೋರ್ಟ್‌ ಕ್ಲೈಮಿಂಗ್‌ ಆಗಿದ್ದ ಕ್ರೀಡೆ ಈಗ ಕೇವಲ ಕ್ಲೈಮಿಂಗ್‌ ಆಗಿ ಒಲಿಂಪಿಕ್ಸ್‌ ಪ್ರವೇಶಿಸಿದೆ. ಪರ್ವತಾರೋಹಣಕ್ಕೆ ಮೀಸಲಾಗಿದ್ದ  ಕ್ಲೈಮಿಂಗ್‌ ವಾಲ್‌ನಲ್ಲಿ ನಡೆಯಲು ಆರಂಭಿಸಿದಾಗ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. ಈಗ ಬೆಂಗಳೂರಿನಲ್ಲಿ ಖಾಸಗಿ ಕ್ಲೈಮಿಂಗ್‌ ಜಿಮ್‌ಗಳೂ ಹುಟ್ಟಿಕೊಂಡಿವೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಗೆ ಸೇರಿದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿರುವ ವಾಲ್‌ಗಳು ಮಾತ್ರವಲ್ಲದೆ, ಪ್ರಸಿದ್ಧ ಇಕ್ವಿಲಿಬ್ರಿಯಂ ಕ್ಲೈಮಿಂಗ್‌ ಸ್ಟೇಷನ್‌ (Equilibrium Climbing Station), ಎಲಿವೇಟ್‌ ಕ್ಲೈಮಿಂಗ್‌ ಜಿಮ್‌ (Elevate Climbing Gym) ಹಾಗೂ ಲಂಗೂರ್‌ ಕ್ಲೈಮಿಂಗ್‌ ಅಕಾಡೆಮಿ (Langur Climbing Academy) ಗಳು ತರಬೇತಿ ನೀಡುತ್ತಿವೆ. ಇವೆಲ್ಲ ಕ್ಲೈಮಿಂಗ್‌ ಕ್ರೀಡೆಯ ಜನಪ್ರಿಯತೆಗೆ ಸಾಕ್ಷಿ ಎನ್ನುತ್ತಾರೆ ದೀಪು.

ದೀಪು ಮಲ್ಲೇಶ್‌ ಅವರು 15 ಮೀಟರ್‌ ಎತ್ತರದ ಗೋಡೆಯನ್ನು 5.491 ಸೆಕೆಂಡುಗಳಲ್ಲಿ ತಲುಪಿ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ವನಿತೆಯರ ವಿಭಾಗದ ದಾಖಲೆ ಜೋಗ ಪೂರ್ತಿ ಅವರ ಹೆಸರಿನಲ್ಲಿದೆ. ಜಾರ್ಖಂಡ್‌ನ ಜೋಗ ಅವರು 7.883 ಸೆಕೆಂಡುಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ಬರೆದಿದ್ದರು.

ಈ ಕ್ರೀಡೆಯಲ್ಲಿ ಯಶಸ್ಸು ಕಾಣಬೇಕಾದರೆ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಸಾಮರ್ಥ್ಯ ಪ್ರಮುಖವಾಗಿ ಬೇಕು ಎನ್ನುತ್ತಾರೆ ದೀಪು. “ಇದೊಂದು ಮೈಂಡ್‌ ಗೇಮ್‌, 4-5 ಸೆಕೆಂಡುಗಳಲ್ಲಿ ಆಟ ಮುಗಿದುಹೋಗುತ್ತದೆ. ಇಲ್ಲಿ ಒಂದೊಂದು ಕ್ಷಣವೂ ಪ್ರಮುಖವಾದುದು. ಅದಕ್ಕಾಗಿ ಸ್ಥಿರ ಪ್ರದರ್ಶನ ನೀಡಬೇಕಾಗುತ್ತದೆ.” ಎನ್ನುತ್ತಾರೆ ದೀಪು.

ದೀಪು ಸಾಧನೆಗೆ IMF, ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿ ಮೆಚ್ಚುಗೆ

ದೀಪು ಅವರು ರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಾಧನೆಯ ಬಗ್ಗೆ ಭಾರತೀಯ ಪರ್ವತಾರೋಹಣ ಫೌಂಡೇಷನ್‌ನ ಕಾರ್ಯದರ್ಶಿ (Indian Mountaineering Foundation, Secretary General Keerthi Pais), ಅಂತಾರಾಷ್ಟ್ರೀಯ ಕ್ಲೈಮಿಂಗ್‌ ಫೆಡರೇಷನ್‌ನ ಏಷ್ಯಾ ವಿಭಾಗದ ಉಪಾಧ್ಯಕ್ಷ ಹಾಗೂ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಲಹೆಗಾರ  ಕೀರ್ತಿ ಪಾಯಸ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ದೀಪು ಅವರ ಅತ್ಯಂತ ವಿನಮ್ರ ಹಾಗೂ ಪ್ರಾಮಾಣಿಕ ಪ್ರಯತ್ನ ಮಾಡುವ ಕ್ರೀಡಾಪಟು. ಕಳೆದ 15 ವರ್ಷಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ವೈಫಲ್ಯ ಕಾಣುತ್ತಿದ್ದರೂ ಎಲ್ಲಿಯೂ ತನ್ನಲ್ಲಿರುವ ಕ್ರೀಡಾ ಸ್ಫೂರ್ತಿ ಹಾಗೂ ಕ್ರೀಡೆ ಬಗ್ಗೆ ಇರುವ ಬದ್ಧತೆಯನ್ನು ಕಡಿಮೆ ಮಾಡಿಕೊಂಡಿಲ್ಲ. ನಿರಂತರ ಅಭ್ಯಾಸ ಹಾಗೂ ಪ್ರಯತ್ನ ಈಗ ಆನನ್ನು ರಾಷ್ಟ್ರೀಯ ಚಾಂಪಿಯನ್ನಾಗಿ ಮಾಡಿದೆ. ಉತ್ತಮ ಕ್ರೀಡಾ ಮನೋಧರ್ಮ ಹಾಗೂ ಕ್ರೀಡಾ ಸ್ಫೂರ್ತಿಯಿಂದ ಕೂಡಿರುವ ದೀಪು ಏಷ್ಯನ್‌ ಗೇಮ್ಸ್‌ನಲ್ಲಿ ಉತ್ತಮ ಸಾಧನೆ ತೋರಿ, ಒಲಿಂಪಿಕ್ಸ್‌ಗೆ ಆಯ್ಕೆಯಾಗಲಿ ಎಂಬುದೇ  ಹಾರೈಕೆ,” ಎಂದರು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.