Wednesday, November 6, 2024

ವಿಂಡೀಸ್ ಪ್ರವಾಸ ಎರಡು ವಾರ ಮುಂದಕ್ಕೆ

ನವದೆಹಲಿ:  ಐಸಿಸಿ ವಿಶ್ವಕಪ್‌ ಟೂರ್ನಿ ಬಳಿಕ ಭಾರತ ಕ್ರಿಕೆಟ್‌ ತಂಡದ ವೆಸ್ಟ್‌ ಇಂಡೀಸ್‌ ಪ್ರವಾಸವನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ. 
ಕೆರಿಬಿಯನ್‌ ಪ್ರವಾಸವನ್ನು ಎರಡು ವಾರಗಳ ಕಾಲ ಮುಂದೂಡುವಂತೆ ಬಿಸಿಸಿಐ ವೆಸ್ಟ್‌ಇಂಡೀಸ್‌ ಕ್ರಿಕೆಟ್‌ ಮಂಡಳಿಗೆ ಮನವಿ ಸಲ್ಲಿಸಿತ್ತು. ಇದಕ್ಕೆ ವೆಸ್ಟ್ ಇಂಡೀಸ್‌ ಒಪ್ಪಿಗೆ ಸೂಚಿಸಿದೆ ಎಂದು ಇಎಸ್‌ಪಿಎನ್‌ ಕ್ರಿಕ್ಇನ್ಫೋ ಬುಧವಾರ ವರದಿ ಮಾಡಿದೆ. 


ಭಾರತದ ವೆಸ್ಟ್‌ ಇಂಡೀಸ್‌ ಪ್ರವಾಸ ಆಗಸ್ಟ್‌ ಮೊದಲ ವಾರದಲ್ಲಿ ಆರಂಭವಾಗಲಿದೆ. ಭಾರತ, ವೆಸ್ಟ್‌ ಇಂಡೀಸ್‌ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಹಾಗೂ ಟಿ-20 ಸರಣಿ ಆಡಲಿದೆ ಎಂದು ಇಎಸ್‌ಪಿಎನ್‌ ವರದಿ ತಿಳಿಸಿದೆ. 
ವೆಸ್ಟ್‌ ಇಂಡೀಸ್‌ ಪ್ರವಾಸದ ದಿನಾಂಕವನ್ನು ಮೇ 13ರಂದು ಅಂತಿಮಗೊಳಿಸಲಾಗುತ್ತದೆ. ಈ ಸರಣಿಗೂ ಮುನ್ನ ಮೂರು ಅಭ್ಯಾಸ ಪಂದ್ಯಗಳನ್ನು ಆಯೋಜಿಸುವಂತೆ ಬಿಸಿಸಿಐ, ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ಗೆ ಮನವಿ ಮಾಡಿದೆ. 
ಮುಂಬರುವ ಆಗಸ್ಟ್‌ 21 ರಿಂದ ನಡೆಯಬೇಕಿದ್ದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌) ಅನ್ನು ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ಬದಲಾವಣೆ ಮಾಡಲಿದೆ. ಇದಕ್ಕೂ ಮುನ್ನ ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ  ಐಸಿಸಿ ವಿಶ್ವಕಪ್‌ ಮೇ 30ರಿಂದ ಆರಂಭಗೊಂಡು ಜುಲೈ 14ರಂದು ಮುಕ್ತಾಯವಾಗಲಿದೆ. 

Related Articles