Thursday, September 12, 2024

ರೈನಾ ದಾಖಲೆ ಮುರಿದ ಕೊಹ್ಲಿ

ಮೊಹಾಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಶನಿವಾರ ರಾತ್ರಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಅರ್ಧ ಶತಕ ಸಿಡಿಸಿ ಟಿ- 20 ಕ್ರಿಕೆಟ್‌ ಮಾದರಿಯಲ್ಲಿ ವೈಯಕ್ತಿಕ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಮೊದಲ ಆಟಗಾರ ಎಂಬ ಸಾಧನೆಗೆ ಭಾಜನರಾದರು. ಇದರೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ನ ಸುರೇಶ್‌ ರೈನಾ ಅವರನ್ನು ಹಿಂದಿಕ್ಕಿದರು.

ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಕಳೆದ ರಾತ್ರಿ ನಡೆದ 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 28ನೇ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 67 ರನ್‌ ಸಿಡಿಸಿ ಆರ್‌ಸಿಬಿ 8 ವಿಕೆಟ್‌ಗಳ ಗೆಲುವಿಗೆ ಕಾರಣರಾಗಿದ್ದರು. ಕೊಹ್ಲಿ ಆಡಿರುವ ಒಟ್ಟು 245 ಟಿ-20 ಪಂದ್ಯಗಳಿಂದ 41. 22 ಸರಾಸರಿಯಲ್ಲಿ 8,175 ರನ್‌ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧ ಶತಕಗಳು ಒಳಗೊಂಡಿವೆ. 293 ಇನಿಂಗ್ಸ್‌ಗಳಿಂದ 8,145 ರನ್‌ ದಾಖಲಿಸಿರುವ ಸುರೇಶ್‌ ರೈನಾ ಎರಡನೇ ಸ್ಥಾನಕ್ಕೆ ಕುಸಿದರು.

ಕೊಹ್ಲಿ ಈ ಸಾಧನೆ ಮಾಡಿದ ವಿಶ್ವದ ಆರನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ. ವೆಸ್ಟ್‌ ಇಂಡೀಸ್‌ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್‌ 370 ಇನಿಂಗ್ಸ್‌ಗಳಲ್ಲಿ 38.94 ಸರಾಸರಿಯಲ್ಲಿ 12, 640 ರನ್‌ ಗಳಿಸಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ನ್ಯೂಜಿಲೆಂಡ್‌ ಮಾಜಿ ನಾಯಕ ಬ್ರೆಂಡನ್‌ ಮೆಕ್ಕಲಂ 9,922 ರನ್‌ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಐಪಿಎಲ್‌ ನಲ್ಲಿ ಕೊಹ್ಲಿ ಅವರು ಸುರೇಶ್‌ ರೈನಾ ಅವರ ಮತ್ತೊಂದು ದಾಖಲೆ ಮುರಿದ್ದಾರೆ. 170 ಐಪಿಎಲ್‌ ಪಂದ್ಯಗಳಾಡಿರುವ ಕೊಹ್ಲಿ 5,218 ರನ್‌ ದಾಖಲಿಸಿದ್ದಾರೆ. ಆ ಮೂಲಕ 183 ಇನಿಂಗ್ಸ್‌ಗಳಲ್ಲಿ 5,121 ರನ್ ಗಳಿಸಿರುವ ರೈನಾ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

Related Articles