Friday, December 13, 2024

ಯುವ ಕ್ರಿಕೆಟರ್ಸ್ ತಂಡಕ್ಕೆ ಗಿರೀಶ್ ಸ್ಮಾರಕ ಟ್ರೋಫಿ

ಆರ್.ಕೆ. ಆಚಾರ್ಯ ಕೋಟ

ಜೆ ಪಿ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಮೂರು ದಿನಗಳ ಕಾಲ ನಡೆದ ಗಿರೀಶ್ ಸ್ಮಾರಕ ಕ್ರಿಕೆಟ್ ಚಾಂಪಿಯನ್ ಷಿಪ್ ಪ್ರತಿಷ್ಠಿತ ಪ್ರಶಸ್ತಿಯನ್ನು ಬೆಂಗಳೂರಿನ ಯುವ ಕ್ರಿಕೆಟಿಗರ ಪಡೆ ಯುವ ಕ್ರಿಕೆಟರ್ಸ್ ಯಲಹಂಕ ಗೆದ್ದುಕೊಂಡಿದೆ.

 ಜೆ ಪಿ ಪಾರ್ಕ್ ಮತ್ತಿಕೆರೆ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಯುವ ಕ್ರಿಕೆಟರ್ಸ್ ಪಡೆ 1 ಲಕ್ಷ ರೂ, ನಗದು ಬಹುಮಾನದ ಜೊತೆಯಲ್ಲಿ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.
ರನ್ನರ್ ಅಪ್ ಪ್ರಶಸ್ತಿಯನ್ನು ಮೈಟಿ ಬೆಂಗಳೂರು ತಂಡ ಗೆದ್ದುಕೊಂಡು, 50 ಸಾವಿರ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.ರಾಜ್ಯದ ಬಲಿಷ್ಠ ೧೬ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ರಾಜ್ಯದ ಹೆಸರಾಂತ ಜೈ ಕರ್ನಾಟಕ ತಂಡವನ್ನು ಯುವ ಕ್ರಿಕೆಟರ್ಸ್ ಯಲಹಂಕ ಮಣಿಸಿದರೆ, ಬಲಿಷ್ಠ ನ್ಯಾಶ್ ಬೆಂಗಳೂರು ತಂಡವನ್ನು ಮೈಟಿ ಬೆಂಗಳೂರು ತಂಡ ಮಣಿಸಿ ಫೈನಲ್ ಪ್ರವೇಶಿಸಿದವು.
ಯುವ ಕ್ರಿಕೆಟರ್ಸ್ ಬೆಂಗಳೂರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಮೈಟಿ ಬೆಂಗಳೂರು 4 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 29 ರನ್ ಗಳಿಸಿತು. ಅಲ್ಪ ಮೊತ್ತವನ್ನು ಬೆಂಬತ್ತಿದ ಯುವ ಕ್ರಿಕೆಟರ್ಸ್ ಪರ ನಾಯಕ ನವೀನ್ 8 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ ಅಜೇಯ 20 ರನ್ ಗಳಿಸುವ ಮೂಲಕ ತಂಡ ಕೇವಲ 3.2 ಓವರ್ ಗಳಲ್ಲಿ ಗುರಿ ತಲುಪಿ ಟ್ರೋಫಿ ಗೆದ್ದುಕೊಂಡಿತು. ಮೂರನೇ ಸ್ಥಾನವನ್ನು ಜೈ ಕರ್ನಾಟಕ ಬೆಂಗಳೂರು ಹಾಗೂ ನಾಲ್ಕನೇ ಸ್ಥಾನವನ್ನು ನ್ಯಾಶ್ ಬೆಂಗಳೂರು ತಂಡ ಗಳಿಸಿದವು.
ಫೈನಲ್ ಪಂದ್ಯದಲ್ಲಿ ಕೇವಲ ಒಂದು ಓವರ್ ನಲ್ಲಿ 2 ರನ್ ನೀಡಿ 3 ಅಮೂಲ್ಯ ವಿಕೆಟ್ ಗಳಿಸಿದ ಯುವ ಕ್ರಿಕೆಟರ್ಸ್ ನ ವಿಮಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಕಿಝರ್ ಬೆಸ್ಟ್ ಬ್ಯಾಟ್ಸಮನ್ ಗೌರವ ಗಳಿಸಿದರು. ಹ್ಯಾಟ್ರಿಕ್ ಸಾಧನೆಯೊಂದಿಗೆ ಟೂರ್ನಿಯುದ್ದಕ್ಕೂ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಜೈ ಕರ್ನಾಟಕದ ವೇಗದ ಬೌಲರ್ ಮಾರ್ಕ್ ಮಹೇಶ್ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು, ಮೈಟಿ ತಂಡದ ಇಂದಾದ್ ಈಲು ಬೆಸ್ಟ್ ಬೌಲರ್ ಹಾಗೂ ಅದೇ ತಂಡದ ಅಜರ್ ಬೆಸ್ಟ್ ಫೀಲ್ಡರ್ ಗೌರವ ಗಳಿಸಿದರು.
ವೀಕ್ಷಕ ವಿವರಣೆಗಾರರಾಗಿ ಉಡುಪಿಯ ಪ್ರಶಾಂತ್ ಅಂಬಲಪಾಡಿ ಹಾಗೂ ಬೆಂಗಳೂರಿನ ಶ್ರೀನಿವಾಸ್ ಅವರು ಕಾರ್ಯನಿರ್ವಹಿಸಿದ್ದರು.ಜೈ ಕರ್ನಾಟಕ ತಂಡದ ಸಚಿನ್ ಮಹಾದೇವ್ ಮಾಲಕತ್ವದ M Sports ಪಂದ್ಯಗಳ ನೇರ ಪ್ರಸಾರ ಮಾಡಿತ್ತು.

Related Articles