ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಬುಲ್ಸ್
ವಿಶಾಖಪಟ್ಟಣ: ಅಲಿರೆಜಾ ಮಿರ್ಜೈಯನ್ ಅವರ ಸೂಪರ್ ಟೆನ್ ಸಾಹಸದ ಜತೆಗೆ ಚೇತೋಹಾರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ನಾಲ್ಕನೇ ಪಂದ್ಯದಲ್ಲಿ ಪಟನಾ ಪೈರೇಟ್ಸ್ ತಂಡದ ವಿರುದ್ಧ 8 ಅಂಕಗಳಿಂದ ಭರ್ಜರಿ ಗೆಲುವು ಸಾಧಿಸಿತು. Alireza ensures first win of PKL 12 for Bengaluru Bulls with impressive performance against Patna Pirates
ಇದರೊಂದಿಗೆ ಹ್ಯಾಟ್ರಿಕ್ ಸೋಲಿನಿಂದ ಹೊರಬಂದ ಬುಲ್ಸ್ ಆಟಗಾರರು ಹಾಲಿ ಟೂರ್ನಿಯಲ್ಲಿ ಮೊದಲ ಜಯ ಗಳಿಸಿದರು. ಅತ್ತ ಪೈರೇಟ್ಸ್ ಸತತ ಮೂರನೇ ಸೋಲಿಗೆ ತುತ್ತಾಯಿತು. ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಬುಲ್ಸ್ ತಂಡ 38-30 ಅಂಕಗಳ ಅಂತದಿಂದ ಪೈರೇಟ್ಸ್ ಗೆ ಸೋಲುಣಿಸಿ, ಪೂರ್ಣ 2 ಅಂಕ ಕಲೆಹಾಕಿತು.
ಬೆಂಗಳೂರು ಬುಲ್ಸ್ ತಂಡದ ಪರ ಅಲಿರೆಜಾ ಮಿರ್ಜೈಯನ್ (10 ಅಂಕ) ಗರಿಷ್ಠ ಅಂಕಗಳನ್ನು ಗಳಿಸಿದರೆ, ಆಶಿಶ್ ಮಲಿಕ್ (8 ಅಂಕ), ಯೋಗೇಶ್ (3 ಅಂಕ) ಮತ್ತು ದೀಪಕ್ (4 ಅಂಕ) ಮಿಂಚಿದರು. ಅತ್ತ ಮೂರು ಬಾರಿಯ ಪಟನಾ ಪೈರೇಟ್ಸ್ ತಂಡದ ಪರ ಆಯಾನ್ (10 ಅಂಕ) ಮಿಂಚಿದರೆ, ಡಿಫೆಂಡರ್ ದೀಪಕ್(3) ಮತ್ತು ಸುಧಾಕರ್ 6 ಅಂಕ ಗಳಿಸಿ ತಂಡದ ವೀರೋಚಿತ ಹೋರಾಟಕ್ಕೆ ಸಾಕ್ಷಿಯಾದರು.
ಮುನ್ನಡೆ ವಿಸ್ತರಿಸುವ ಇರಾದೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬುಲ್ಸ್ , ಎದುರಾಳಿಯ ಡು ಆರ್ ಡೈ ನಲ್ಲಿ ಅಂಕ ಬಿಟ್ಟುಕೊಟ್ಟಿತು. ಹೀಗಾಗಿ 18-20ರಲ್ಲಿ ಪಟನಾ ಪೈರೇಟ್ಸ್ ತಂಡ ಪ್ರಬಲ ಪ್ರತಿರೋಧ ಒಡ್ಡಿತು. ಆಲ್ ರೌಂಡರ್ ಅಲಿರೇಜಾ ಅವರ ಮಿಂಚಿನ ಆಟದ ಫಲವಾಗಿ 30 ನಿಮಿಷಗಳ ಅಂತ್ಯಕ್ಕೆ ಬೆಂಗಳೂರು ಬುಲ್ಸ್ ತಂಡ ತಂಡದ ಮುನ್ನಡೆಯನ್ನು 24-21ಕ್ಕೆ ಹಿಗ್ಗಿಸಿತು.
ಪಂದ್ಯ ಮುಕ್ತಾಯಕ್ಕೆ ಕೇವಲ 3 ನಿಮಿಷಗಳು ಬಾಕಿ ಇರುವಾಗ 29-25ರಲ್ಲಿ ಮುನ್ನಡೆಯಲ್ಲಿದ್ದ ಬುಲ್ಸ್, ಎದುರಾಳಿ ತಂಡದ ಪ್ರಬಲ ಪ್ರತಿರೋಧ ಎದುರಿಸಿತು. ಆದಾಗ್ಯೂ ಎರಡನೇ ಬಾರಿ ಪಟನಾ ತಂಡವನ್ನು ಕಟ್ಟಿಹಾಕಿದ ಬುಲ್ಸ್ ಆಟಗಾರರು ಮೊದಲ ಗೆಲುವನ್ನು ಖಚಿತಪಡಿಸಿಕೊಂಡರು.
ಇದಕ್ಕೂ ಮುನ್ನ ಸಂಘಟಿತ ಹೋರಾಟ ಪ್ರದರ್ಶಿಸಿದ ಬೆಂಗಳೂರು ಬುಲ್ಸ್ ತಂಡ ಪಂದ್ಯದ ಮೊದಲಾರ್ಧದ ಅಂತ್ಯಕ್ಕೆ 3 (18-15) ಅಂಕಗಳಿಂದ ಮುನ್ನಡೆ ಸಾಧಿಸಿತು.
ಹ್ಯಾಟ್ರಿಕ್ ಸೋಲಿನಿಂದ ಹೊರಬರುವ ನಿಟ್ಟಿನಲ್ಲಿ ಅಖಾಡಕ್ಕಿಳಿದ ಬೆಂಗಳೂರು ಬುಲ್ಸ್, ಮೊದಲ ಐದು ನಿಮಿಷಗಳ ಆಟದಲ್ಲಿ 5-1 ರಲ್ಲಿ ಮೇಲುಗೈ ಸಾಧಿಸುವ ಮೂಲಕ ಮುನ್ನಡೆ ಕಂಡುಕೊಂಡಿತು. ಆದರೆ ನಂತರ ಹೊಂದಾಣಿಕೆ ಆಟ ಪ್ರದರ್ಶಿಸುವಲ್ಲಿ ಎಡವಿತು. ಇದರ ಲಾಭ ಪಡೆದ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ತಂಡ 7ನೇ ನಿಮಿಷದಲ್ಲಿ 4-4ರಲ್ಲಿ ತಿರುಗೇಟು ನೀಡಿತಲ್ಲದೆ, ಹತ್ತು ನಿಮಿಷಗಳ ಮೊದಲ ವಿರಾಮಕ್ಕೆ 8-6ರಲ್ಲಿ ಮುನ್ನಡೆ ಕಂಡುಕೊಂಡಿತು.
11ನೇ ನಿಮಿಷದಲ್ಲಿ ಯೋಗೇಶ್ ಮತ್ತು ಅಲಿರೇಜಾ ಅವರನ್ನು ಔಟ್ ಮಾಡಿದ ರೇಡರ್ ಆಯಾನ್ ಬುಲ್ಸ್ ತಂಡವನ್ನು ಆಲೌಟ್ ಬಲೆಗೆ ಬೀಳಿಸಿದರು. ಹೀಗಾಗಿ ಬುಲ್ಸ್ ತಂಡ 7-12ರಲ್ಲಿ ಹಿನ್ನಡೆಗೆ ಒಳಗಾಗಬೇಕಾಯಿತು.ಇದರ ಮಧ್ಯೆಯೇ ಆಯಾನ್ ಲೀಗ್ ನಲ್ಲಿ 200 ರೇಟಿಂಗ್ ಪಾಯಿಂಟ್ಸ್ ಕಲೆಹಾಕಿದ ಸಾಧನೆ ಮಾಡಿದರು.
ಮೊದಲಾರ್ಧದ ವಿರಾಮಕ್ಕೂ ಮುನ್ನ ಆಶಿಶ್ ಮಲಿಕ್ ಆಕರ್ಷಕ ರೇಡಿಂಗ್ ಮೂಲಕ 3 ಅಂಕ ಸಂಪಾದಿಸಿ ಹಿನ್ನಡೆ ತಗ್ಗಿಸಲು ಸರ್ವಪ್ರಯತ್ನ ನಡೆಸಿದರು. ಇದಕ್ಕೆ ಗಣೇಶ್ ಹನುಮಂತಗೋಲ್ ಮತ್ತು ದೀಪಕ್ ಶಂಕರ್ ಸಹ ತಲಾ 2 ಅಂಕ ಗಳಿಸಿ ಸಾಥ್ ನೀಡಿದರು. ಹಿನ್ನಡೆಯಿಂದ ಹೊರಬಂದ ಬುಲ್ಸ್, ಮೊದಲಾವಧಿಯ ಮುಕ್ತಾಯಕ್ಕೆ ಕೆಲವೇ ಸೆಕೆಂಡ್ ಗಳು ಬಾಕಿ ಇರುವಾಗ ಎದುರಾಳಿ ತಂಡವನ್ನು ಆಲೌಟ್ ಮಾಡಿ ಸೇಡು ತೀರಿಸಿಕೊಂಡಿತು. ಅಲ್ಲದೆ, 18-15ರಲ್ಲಿ ಅಂತರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಬೆಂಗಳೂರು ಬುಲ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಸೆಪ್ಟೆಂಬರ್ 8ರಂದು ಹರಿಯಾಣ ಸ್ಟೀಲರ್ಸ್ ತಂಡವನ್ನು ಎದುರಿಸಲಿದೆ.