Thursday, September 12, 2024

ಮಳೆಯಲ್ಲಿ ಮನೆ ಕಳೆದುಕೊಂಡ ಫುಟ್ಬಾಲ್‌ ಕುಟುಂಬ

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ರಾಷ್ಟ್ರೀಯ ಫುಟ್ಬಾಲ್‌ ಆಟಗಾರರ ಕುಟುಂಬ ವಾಸಿಸುತ್ತಿದ್ದ ಮನೆ ಕುಸಿದು ಬಿದ್ದಿದೆ. ಆದರೆ ಇದುವರೆಗೂ ಅವರಿಗೆ ಮನೆಯನ್ನು ಮತ್ತೆ ಕಟ್ಟಲು ಸಾಧ್ಯವಾಗಲಿಲ್ಲ. ಭಾರತ ಯಾಕೆ ವಿಶ್ವಕಪ್‌ನಲ್ಲಿ ಆಡಲು ಅರ್ಹತೆ ಪಡೆಯುತ್ತಿಲ್ಲ ಎಂಬುದಕ್ಕೆ ಈ ರೀತಿಯ ಘಟನೆಗಳೂ ಒಂದು ಕಾರಣವಾಗಿರುತ್ತವೆ.

ಸಂತೋಷ್‌ ಟ್ರೋಫಿಯಲ್ಲಿ ಮೈಸೂರು ರಾಜ್ಯವನ್ನು ಪ್ರತಿನಿಧಿಸಿ, ಗೋಲ್‌ಕೀಪಿಂಗ್‌ನಲ್ಲಿ “ಮೈಸೂರು ಟೈಗರ್‌” ಎಂದೇ ಖ್ಯಾತಿ ಪಡೆದಿದ್ದ ಎಂ. ನಟರಾಜನ್‌, ಅವರ ಮಕ್ಕಳಾದ ಸಂತೋಷ್‌ ಟ್ರೋಫಿ ಆಟಗಾರ, ಬೆಮೆಲ್‌ನ ಗೋಲ್‌ಕೀಪರ್‌ ಮುರಳೀಧರನ್‌, ಎಂಇಜಿಯ ಗೋಲ್‌ಕೀಪರ್‌ ರವಿ ಕುಮಾರ್‌, ಗವರ್ನಮೆಂಟ್‌ ಪ್ರೆಸ್‌ನ ಗೋಲ್‌ಕೀಪರ್‌ ರಮೇಶ್‌, ಬೆಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಆಟಗಾರ ಮಣಿವಣ್ಣನ್‌ ಹಾಗೂ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡದ ಗೋಲ್‌ಕೀಪರ್‌ ಶ್ರೀಜಿತ್‌ ಅವರು ಹುಟ್ಟಿದ ಮನೆ ಈಗ ಕುಸಿದು ಬಿದ್ದಿದೆ.

ರಾತ್ರೋರಾತ್ರಿ ಕುಸಿದ ಮನೆ: ರಾಷ್ಟ್ರೀಯ ಮಾಜಿ ಆಟಗಾರ ಎಂ. ನಟರಾಜನ್‌ 1958ರಲ್ಲಿ ಲೀಸ್‌ಗೆ ತೆಗೆದುಕೊಂಡಿದ್ದ ಮನೆಯಲ್ಲಿ ಒಂದು ಕಾಲದಲ್ಲಿ ಆರು ಆಟಗಾರರು ವಾಸಿಸುತ್ತಿದ್ದರು. ಬೇರೆ ಬೇರೆ ಕ್ಲಬ್‌ ಪರ ಆಡಿದ ಕುಟುಂಬದ ಸದಸ್ಯರು ಈಗ ಪ್ರತ್ಯೇಕವಾದ ಮನೆಯಲ್ಲಿದ್ದಾರೆ. ಗವರ್ನಮೆಂಟ್‌ ಪ್ರೆಸ್‌ನ ಗೋಲ್‌ಕೀಪರ್‌ ರಮೇಶ್‌ ಅವರು ತಮ್ಮ ಕುಟುಂಬದೊಂದಿಗೆ ಈ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸೆಪ್ಟಂಬರ್‌ 4ರ ಮಧ್ಯರಾತ್ರಿ ಸುರಿದ ಮಳೆಗೆ ಮನೆ ಕುಸಿದು ಬಿದ್ದಿದೆ. ಈಗ ಈ ಫುಟ್ಬಾಲ್‌ ಕುಟುಂಬ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ. ಸ್ಥಳೀಯ ಕಾರ್ಪೋರೇಟರ್‌ಗಳು ಮತ್ತು ಶಾಸಕರು ಮನೆ ಕಟ್ಟಿಸಿ ಕೊಡುವ ಭರವಸೆ ನೀಡಿದ್ದಾರೆ.

ತಪ್ಪಿದ ದುರಂತ: ಮಾಜಿ ಆಟಗಾರ ರಮೇಶ್‌ ಅವರ ಮಗ 26 ವರ್ಷದ ಶ್ರೀಜಿತ್‌ ಕರ್ನಾಟಕದ ಉತ್ತಮ ಗೋಲ್‌ಕೀಪರ್‌. ಅಜ್ಜ, ಚಿಕ್ಕಪ್ಪ, ದೊಡ್ಡಪ್ಪ ಮತ್ತು ತಂದೆಯಂತೆ ಉತ್ತಮ ಗೋಲ್‌ಕೀಪರ್‌. ಮೊದಲು ಬೆಂಗಳೂರು ಫುಟ್ಬಾಲ್‌ ಕ್ಲಬ್‌ನ ಕಿರಿಯರ ತಂಡದಲ್ಲಿ ಆಡುತ್ತಿದ್ದ ಶ್ರೀಜಿತ್‌ ಈಗ ಎಫ್‌ಸಿ ಬೆಂಗಳೂರು ಯುನೈಟೆಡ್‌ ಉತ್ತಮ ಗೋಲ್‌ಕೀಪರ್‌. ಸೆಪ್ಟೆಂಬರ್‌ 4 ರಂದು ರಮೇಶ್‌ ಅವರು ತಮ್ಮ ಕುಟುಂಬದೊಂದಿಗೆ ಸಹೋದರನ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಮೊದಲು ಕುಸಿದದ್ದೇ ಕರ್ನಾಟಕದ ಗೋಲ್‌ಕೀಪರ್‌ ಶ್ರೀಜಿತ್‌ ಅವರು ಮಲಗುತ್ತಿದ್ದ ಕೊಠಡಿಯ ಗೋಡೆ. ಒಂದು ವೇಳೆ ಈ ಕುಟುಂಬ ಅಂದು ಮನೆಯಲ್ಲಿ ಇದ್ದಿರುತ್ತಿದ್ದರೆ ಶ್ರೀಜಿತ್‌ ಅವರ ಜೀವಕ್ಕೆ ಅಪಾಯ ಉಂಟಾಗಿರುತ್ತಿತ್ತು. “ಬೆಳಿಗ್ಗೆ ಪಕ್ಕದ ಮನೆಯವರು ತಿಳಿಸಿದಾಗ ದಿಗ್ಭ್ರಮೆಗೊಂಡೆ. ಹೋಗಿ ನೋಡಿದಾಗ ಮಗ ಶ್ರೀಜಿತ್‌ ಮಲಗುತ್ತಿದ್ದ ಕೋಣೆಯ ಗೋಡೆ ಕುಸಿದು ಒಳಮುಖವಾಗಿ ಬಿದ್ದಿತ್ತು. ಈಗ ನಮಗೆ ಮನೆ ಕಟ್ಟಲು ಅವಕಾಶ ನೀಡುತ್ತಿಲ್ಲ. ಕಾರ್ಪೊರೇಷನ್‌ನವರು ಇದು ನಮ್ಮ ಭೂಮಿ ಎಂದರೆ, ಸೇನೆಯವರು ಇದು ನಮ್ಮ ಭೂಮಿ ಎನ್ನುತ್ತಾರೆ. ಇದು ನಾವು ಭೋಗ್ಯಕ್ಕೆ ತೆಗೆದುಕೊಂಡ ಭೂಮಿ. 64 ವರ್ಷಗಳಿಂದ ತೆರಿಗೆ ಕಟ್ಟಿಕೊಂಡು ಬಂದಿದ್ದೇವೆ. ಈಗ 10.80 ಲಕ್ಷ ಕಟ್ಟಿ ಎನ್ನುತ್ತಾರೆ. ಕ್ರೀಡಾಪಟುಗಳ ಕುಟುಂಬವೇ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ಇನ್ನು ಸಾಮಾನ್ಯ ಜನರ ಗತಿಹೇಗೆ?” ಎಂದು ರಮೇಶ್‌ sportsmail ಜೊತೆ ತಮ್ಮ ನೋವನ್ನು ಹಂಚಿಕೊಂಡರು.

ಫುಟ್ಬಾಲ್‌ ಸಂಸ್ಥೆಯ ಅಧ್ಯಕ್ಷರೇ ಇಲ್ಲಿಯ ಶಾಸಕರು!!

ಈ ಫುಟ್ಬಾಲ್‌ ಕುಟುಂಬದ ನೋವಿಗೆ ಪರಿಹಾರ ನೀಡಲು ಶಾಂತಿನಗರ ಶಾಸಕರಾದ ಎನ್‌.ಎ. ಹ್ಯಾರಿಸ್‌ ಅವರು ಮನಸ್ಸು ಮಾಡಬೇಕು. ಏಕೆಂದರೆ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ಅಧ್ಯಕ್ಷರು ಹಾಗೂ ಅಖಿಲ ಭಾರತ ಫುಟ್ಬಾಲ್‌ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿರುವ ಎನ್‌.ಎ. ಹ್ಯಾರಿಸ್‌ ಈ ಫುಟ್ಬಾಲ್‌ ಕುಟುಂಬವನ್ನು ಚೆನ್ನಾಗಿ ಬಲ್ಲರು. ಕ್ರೀಡಾಪಟುಗಳ ಕಷ್ಟಗಳಿಗೆ ಸ್ಪಂದಿಸದಿದ್ದರೆ ಕ್ರೀಡೆ ಅಭಿವೃದ್ಧಿಯಾಗುವದಾದರೂ ಹೇಗೆ. ಪುಟ್ಟ ದೇಶ ಕತಾರ್‌ ಫಿಫಾ ವಿಶ್ವಕಪ್‌ ಆಯೋಜಿಸಿ ಜಗತ್ತಿಗೆ ಮಾದರಿ ಎನಿಸಿತು. ನಮ್ಮ ದೇಶ ವಿಶ್ವಕಪ್‌ಗೆ ಅರ್ಹತೆ ಪಡೆಯವುದು ಯಾವಾಗ ಎಂದು ಪ್ರತಿಬಾರಿಯೂ ವಿಶ್ವಕಪ್‌ ನಡೆಯುತ್ತಿರುವಾಗ ಪ್ರಶ್ನಿಸಿ ಮುಂದೆ ಸಾಗುತ್ತೇವೆ. ಈ ರೀತಿಯಲ್ಲಿ ಫುಟ್ಬಾಲ್‌ ಆಟಗಾರರ ಕುಟುಂಬ ಕಷ್ಟಗಳನ್ನು ಎದುರಿಸುತ್ತಿದ್ದರೆ ಭಾರತ ವಿಶ್ವಕಪ್‌ಗೆ ಅರ್ಹತೆ ಪಡೆಯುವುದಾದರೂ ಹೇಗೆ?

Related Articles