ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್: ಕರ್ನಾಟಕಕ್ಕೆ ಪಂಚ ಸ್ವರ್ಣ
ರಾಯ್ಪುರ್: ಇಲ್ಲಿನ ಅಂತಾರಾಷ್ಟ್ರಿಯ ಈಜುಕೊಳದಲ್ಲಿ ಬುಧವಾರ ಆರಂಭಗೊಂಡ ದೇಶದ ಮೊದಲ ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ (Khelo India Tribal Games) ದ ಈಜಿನಲ್ಲಿ ಕರ್ನಾಟಕದ ಈಜುಗಾರರು ಐದು ಚಿನ್ನದ ಪದಕ ಗೆದ್ದು ತಮ್ಮ ಪ್ರಭುತ್ವ ಸಾಧಿಸಿದ್ದಾರೆ. Keho India Tribal Games Karnataka swimmers clinched five of the six gold medals on offer on Wednesday.
ದಿನದ ಮೊದಲ ಸ್ಪರ್ಧೆ ಪುರುಷರ 200 ಮೀ ಫ್ರೀಸ್ಟೈಲ್ ವಿಭಾಗಲ್ಲಿ ಬೆಂಗಳೂರಿನಲ್ಲಿ ಓದುತ್ತಿರುವ ಮೈಸೂರಿನ ಧೋನೇಶ್ ಎನ್. ಕ್ರೀಡಾಕೂಟದ ಮೊದಲ ಚಿನ್ನ ಗೆದ್ದು ದಾಖಲೆ ಬರೆದರು. ಧೋನೇಶ್ 2 ನಿಮಿಷ 03.55 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ವನಿತೆಯರ ವಿಭಾಗದ 200 ಮೀ ಫ್ರೀಸ್ಟೈಲ್ನಲ್ಲಿ ಒಡಿಶಾದ ಅಂಜಲಿ ಮುಂಡಾ ಮೊದಲ ಚಿನ್ನ ಗೆದ್ದರು.
3800 ಕ್ರೀಡಾಪಟುಗಳು ಪಾಲ್ಗೊಂಡಿರುವ ಈ ಕ್ರೀಡಾಕೂಟದಲ್ಲಿ ಕರ್ನಾಟಕ ಮೊದಲ ದಿನಲ್ಲಿ ಏಳು ಪದಕಗಳನ್ನು ತನ್ನದಾಗಿಸಿಕೊಂಡಿತು.
200 ಮೀ. ಫ್ರೀಸ್ಟೈಲ್ನಲ್ಲಿ ಕರ್ನಾಟಕದ ಕೀರ್ತನ್ ಶರತ್ 2 ನಿಮಿಷ 10.99 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ಮಹಾರಾಷ್ಟ್ರದ ಭಕ್ಷಿತ್ ಕುಮಾರ್ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದರು,

ರಾಷ್ಟ್ರೀಯ ಮಟ್ಟದ ಯಾವುದೇ ಈಜು ಸ್ಪರ್ಧೆ ಇದ್ದರೂ ಕರ್ನಾಟಕ ಅಲ್ಲಿ ಮೇಲುಗೈ ಸಾಧಿಸುತ್ತದೆ. ಈಗ ಬುಡಕಟ್ಟು ಜನರ ಕ್ರೀಡಾಕೂಟದ ಈಜಿನಲ್ಲೂ ಪ್ರಭುತ್ವದ ಹೆಜ್ಜೆಯನ್ನಿಟ್ಟಿದೆ. ಮಣಿಕಂಠ ಎಲ್ ಹಾಗೂ ಮೇಘಾಂಜಲಿ 100 ಮೀ ಬ್ರೆಸ್ಟ್ ಸ್ಟ್ರೋಕ್ ಹಾಗೂ 50 ಮೀ ಬಟರ್ಫ್ಲೈನಲ್ಲಿ ತಲಾ ಎರಡು ಚಿನ್ನ ಗೆದ್ದು ದಾಖಲೆ ಬರೆದರು.
ಮಣಿಕಂಠ ಪುರುಷರ 100 ಮೀ, ಬ್ರೆಸ್ಟ್ಸ್ಟ್ರೋಕ್ ವಿಭಾಗದಲ್ಲಿ 1 ನಿಮಿಷ 07.41 ಸೆಕೆಂಡುಗಳಲ್ಲಿ ಗುರಿ ತಲುಪಿ ವೈಯಕ್ತಿಕ ಮೊದಲ ಚಿನ್ನ ಗೆದ್ದರು. ಮಹಾರಾಷ್ಟ್ರದ ಪಲಾಶ್ ಠಾಕೂರ್ ಬೆಳ್ಳಿ ಗೆದ್ದರು. ನಿಖಿಲ್ ಕ್ಸಾಲ್ಕೋ ಕಂಚಿನ ಪದಕ ಗೆದ್ದು ಆತಿಥೇಯ ಛತ್ತೀಸ್ಗಢದ ಪರ ಪದಕದ ಖಾತೆ ತೆರೆದರು.
ಮಣಿಕಂಠ 40 ಮೀ ಬಟರ್ಫ್ಲೈ ವಿಭಾಗದಲ್ಲಿ ಚಿನ್ನ ಗೆದ್ದು ಡಬಲ್ ಸ್ವರ್ಣ ಸಾಧನೆ ಮಾಡಿದರು. 26.06 ಸೆಕೆಂಡುಗಳಲ್ಲಿ ಗುರಿ ತಲಪುವ ಮೂಲಕ ಕರ್ನಾಟಕ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಅಸ್ಸಾಂನ ಫಿರ್ಮಿನೋ ಎಮೋನ್ ಲವುಂಗ್ 27.69 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ರಿಯಾಜ್ ತ್ರಿಪುರ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಬೀದರ್ನ ಮೇಘಾಂಜಲಿ 100 ಮೀ ಬ್ರೆಸ್ಟ್ಸ್ಟ್ರೋಕ್ ಹಾಗೂ 50 ಮೀ ಬಟರ್ ಫ್ಲೈ ವಿಭಾಗದಲ್ಲಿ ಅಗ್ರ ಸ್ಥಾನ ಗಳಿಸಿ ಸ್ವರ್ಣ ಡಬಲ್ ಸಾಧನೆ ಮಾಡಿದರು. 1 ನಿಮಿಷ 29.10 ಸೆಕೆಂಡುಗಳಲ್ಲಿ ಗುರಿ ತಲುಪಿ ಸ್ವರ್ಣ ಗೆದ್ದರು. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಮೇಘಾಂಜಲಿ 50 ಮೀ. ಬಟರ್ಫ್ಲೈ ವಿಭಾಗದಲ್ಲಿ 34.67 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ವರ್ಣ ಗೆದ್ದರು.

“ಓದಿನ ಜೊತೆಯಲ್ಲಿ ಕ್ರೀಡೆಯೂ ಇರಲಿ ಎಂದು ಹೆತ್ತವರು ಈಜು ತರಬೇತಿಗೆ ಸೇರಿಸಿದರು. ಅದರಲ್ಲಿ ಆಸಕ್ತಿ ಹೆಚ್ಚಾಗಿ ಉತ್ತಮ ರೀತಿಯಲ್ಲಿ ತರಬೇತಿ ಪಡೆದು ಎಸ್ಜಿಎಫ್ಐನಲ್ಲೂ ಪದಕ ಗೆದ್ದಿರುವೆ. ನನ್ನ ಓದಿಗೆ ಅಪ್ಪ ನೆರವು ನೀಡುತ್ತಾರೆ. ಕ್ರೀಡೆ ಮತ್ತು ಓದು ಎರಡರಲ್ಲೂ ಸಮಾನ ಯಶಸ್ಸು ಸಾಧಿಸುವುದು ಕಷ್ಟ. ಆದರೂ ಯಶಸ್ಸು ಕಾಣುತ್ತಿರುವೆ. ಮೊದಲ ಬುಡಕಟ್ಟು ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿರುವುದು ಖುಷಿ ಕೊಟ್ಟಿದೆ,” ಎಂದು ಮೇಘಾಂಜಲಿ ಹೇಳಿದ್ದಾರೆ.
ದಾವಣಗೆರೆಯ ನಿಧಿ ಎಸ್ ವನಿತೆಯರ 200 ಮೀ. ಫ್ರೀಸ್ಟೈಲ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

