ಪೆಟ್ರೋಲ್ ಬಂಕ್ನಲ್ಲಿ ದುಡಿವ ವೀಲ್ ಚೇರ್ ಟೆನಿಸ್ ತಾರೆ ಬಸವರಾಜ್
ಬೆಂಗಳೂರು: ಅಂಗವೈಕಲ್ಯದಿಂದಾಗಿ ದುಡಿಯಲಾರದೆ ಮನೆಯಲ್ಲೇ ಇರುವ ತಂದೆ, ಬೇರೆಯವರ ಮನೆಯಲ್ಲಿ ದಿನಗೂಲಿ ಕೆಲಸ ಮಾಡುವ ತಾಯಿ. ಇವರ ಬದುಕಿಗಾಗಿ ಪೆಟ್ರೋಲ್ ಬಂಕ್ನಲ್ಲಿ ದುಡಿದು ಜೊತೆಯಲ್ಲಿ ವೀಲ್ ಚೇರ್ ಟೆನಿಸ್ ಆಡುತ್ತಿರುವ ಚಾಂಪಿಯನ್. ಕಷ್ಟಗಳ ನಡುವೆ ಇಷ್ಟವಾದ ಆಟವನ್ನಾಡಿ ಪ್ಯಾರಿಸ್ನಲ್ಲಿ ನಡೆಯಲಿರುವ ವಿಶ್ವ ವೀಲ್ ಚೇರ್ ಚಾಂಪಿಯನ್ಷಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಲು ಏಷ್ಯಾ ಅರ್ಹತಾ ಸುತ್ತಿಗೆ ಆಯ್ಕೆಯಾಗಿರುವ ಧಾರವಾಡದ ವಿಶೇಷ ಚೇತನ ಟೆನಿಸ್ ತಾರೆ ಬಸವರಾಜ್ ಕುಂದರ್ಗಿ ಅವರೊಂದಿಗೆ ಮಾತನಾಡಿದಾಗ ಮತ್ತೆ ನೆನಪಾದದ್ದು ಅದೇ ಮಾತು, “ವಿಶೇಷಚೇತನರ ಬಗ್ಗೆ ಅನುಕಂಪ ಬೇಡ, ಸಾಧ್ಯವಾದರೆ ಸಹಾಯ ಮಾಡಿ,” ಎಂಬುದು. Basavaraj Kundargi, who worked at a petrol station and was selected for international wheelchair tennis
ಧಾರವಾಡ ಜಿಲ್ಲೆಯ ಧನ್ವಾಡ ಗ್ರಾಮದ ಹಮದೇವಪ್ಪ ಮತ್ತು ನೀಲವ್ವ ಅವರ ಮಗ ಬಸವರಾಜ್ ಆರನೇ ವಯಸ್ಸಿಲ್ಲಿ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಅಂಗವಿಲನಾದ. ಗೆಳೆಯ ಶಂಕರಲಿಂಗ ಅವರಿಂದಾಗಿ ವೀಲ್ ಚೇರ್ ಟೆನಿಸ್ಗೆ ಕಾಲಿಟ್ಟು ಈಗ ರಾಷ್ಟ್ರೀಯ ವೀಲ್ ಚೇರ್ ಟೆನಿಸ್ ಆಟಗಾರ. ರಾಷ್ಟ್ರೀಯ ಮಟ್ಟದಲ್ಲಿ ಸಿಂಗಲ್ಸ್, ಎಡಲ್ಸ್ ನಲ್ಲಿ ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದ ಆಟಗಾರ.

ಮಾರ್ಚ್ 2 ರಿಂದ 6 ರ ವರೆಗೆ ಶ್ರೀಲಂಕಾದ ಕೋಲಂಬೋದಲ್ಲಿ ನಡೆಯಲಿರುವ ಬಿಎನ್ಪಿ ಪಾರಿಬಾಸ್ ವಿಶ್ವ ಟೀಮ್ ಕಪ್ ಏಷ್ಯಾ ಅರ್ಹತಾ ಸುತ್ತಿನ ಪಂದ್ಯಗಳಿಗೆ ಪ್ರಕಟಿಸಿರುವ ಭಾರತ ತಂಡದಲ್ಲಿ ಐವರು ಕನ್ನಡಿಗರಿದ್ದಾರೆ, ಅವರಲ್ಲಿ ಬಸವರಾಜ್ ಕುಂದರ್ಗಿ ಕೂಡ ಒಬ್ಬರು.
ತಂದೆಯೂ ಅಂಗವಿಕಲರು: ಬಸವರಾಜ್ ಅವರ ಮನೆಯ ಪರಿಸ್ಥಿತಿ ಕ್ರೀಡೆಯ ನಡುವೆಯೂ ಕೆಲಸ ಮಾಡುವಂತೆ ಮಾಡಿದೆ. ಬೆಂಗಳೂರಿನಲ್ಲಿರುವ Gosports Foundation ಬಸವರಾಜು ಅವರ ಕ್ರೀಡಾ ಯಶಸ್ಸಿಗೆ ಬೇಕಾದ ಎಲ್ಲ ರೀತಿಯ ನೆರವನ್ನೂ ನೀಡುತ್ತಿದೆ. ಆದರೆ ತಾಯಿ ಮಾಡುವ ದಿನಗೂಲಿಯಿಂದ ಸಂಸಾರ ಸಾಗದು. ಅದಕ್ಕಾಗಿ ಬಸವರಾಜ್ ಬೇರೆ ದಾರಿ ಇಲ್ಲದೆ ಟೆನಿಸ್ ಆಟದ ನಡುವೆಯೂ ಪೆಟ್ರೋಲ್ ಬಂಕ್ನಲ್ಲಿ ದುಡಿಯುತ್ತಿದ್ದಾರೆ. “ನಾನು ಫಲ ನೀಡುವ ಯಾವುದೇ ಕೆಲಸವನ್ನು ಪ್ರೀತಿಯಿಂದ ಮಾಡುತ್ತೇವೆ. ಗೊ ಸ್ಪೋರ್ಟ್ಸ್ ಫೌಂಡೇಷನ್ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಚಿಕ್ಕಪುಟ್ಟ ಖರ್ಚಿಗಾಗಿ ಅಮ್ಮನನ್ನು ಕೇಳುವುದು ಸರಿಯಲ್ಲ. ಅದಕ್ಕಾಗಿ ಕಳೆದ ಒಂದು ತಿಂಗಳಿಂದ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿರುವೆ.

ಜೊತೆಯಲ್ಲಿ ಅಭ್ಯಾಸ ನಡೆಸುತ್ತಿರುವೆ, ಕರ್ನಾಟಕ ಟೆನಿಸ್ ಸಂಸ್ಥೆ ಹಾಗೂ ವೀಲ್ ಚೇರ್ ಟೆನಿಸ್ ಸಂಸ್ಥೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಕೊಲಂಬೋದಲ್ಲಿ ಜಯ ಗಳಿಸಿ ಪ್ಯಾರಿಸ್ನಲ್ಲಿ ಆಡಬೇಕೆಂಬ ಗುರಿ ಇದೆ,” ಎಂದು ಬಸವರಾಜ್ ಹೇಳಿದರು.

