Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಭಾರತಕ್ಕೆ ಟಿ೨೦ ಪರಿಚಯಿಸಿದ್ದು ಕನ್ನಡಿಗರು

ಸ್ಪೋರ್ಟ್ಸ್ ಮೇಲ್ ವರದಿ:ಕ್ರಿಕೆಟ್‌ನ ಚುಟುಕು ಮಾದರಿ ಭಾರತದಲ್ಲಿ ಈಗ ಎಲ್ಲೆಂದರಲ್ಲಿ ಲೀಗ್ ರೂಪದಲ್ಲಿ ಕಂಗೊಳಿಸುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಈಗ ಜಗತ್ತಿನ ಅತ್ಯಂತ ಶ್ರೀಮಂತ ಲೀಗ್‌ಗಳಲ್ಲಿ ಒಂದಾಗಿದೆ. ಆದರೆ ಈ ಪುಟ್ಟ ಮಾದರಿಯನ್ನು ಭಾರತಕ್ಕೆ ಪರಿಚಯಸಿದ್ದು ಕರ್ನಾಟಕ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ೨೦೦೬ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಟಿ೨೦ ಪಂದ್ಯವನ್ನು ಆಯೋಜಿಸುವ ಮೂಲಕ ದೇಶಕ್ಕೆ ಮಾದರಿ ಎನಿಸಿತು. ಅದೇ ರೀತಿ ದೇಶೀಯ ಟಿ೨೦ ಲೀಗ್ ಆಯೋಜಿಸಿದ ಕೀರ್ತಿಯೂ ಕರ್ನಾಟಕಕ್ಕೆ ಸಲ್ಲುತ್ತದೆ. ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಈಗ ಕರ್ನಾಟಕದ ಜನಪ್ರೀಯ ಲೀಗ್ ಆಗಿ ರೂಪುಗೊಂಡಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿದ ನಂತರ ದೇಶದ ಇತರ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳು ತಮ್ಮದೇ ಆದ ಲೀಗ್ ಪ್ರಾರಂಭಿಸಿದವು.
೧೨ ವರ್ಷಗಳ ಹಿಂದೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಜನಪ್ರಿಯವಾಗಿತ್ತು. ಈಗಲೂ ಈ ಎರಡು ಮಾದರಿಯನ್ನು ಜನ ಪ್ರೀತಿಸುತ್ತಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಯುನಿಬಿಕ್ ಪ್ರಾಯೋಜಕತ್ವದಲ್ಲಿ ಬ್ರಾಡ್ಮನ್ ಕಪ್ ಆಯೋಜಿಸುವ ಮೂಲಕ ಭಾರತಕ್ಕೆ ಚುಟುಕು ಕ್ರಿಕೆಟ್‌ನ ಪರಿಚಯ ಮಾಡಿತು. ಕರ್ನಾಟಕ ರಾಜ್ಯ ಕ್ರಿಕೆಟ್ ತಂಡ ಸೇರಿದಂತೆ ಜಗತ್ತಿನ ಪ್ರಮುಖ ಆಟಗಾರರು ಈ ಲೀಗ್‌ನಲ್ಲಿ ಪಾಲ್ಗೊಂಡರು. ಅಂದಿನ ಸ್ಟಾರ್ ಆಟಗಾರರಾದ ಲ್ಯಾನ್ಸ್ ಕ್ಲೂಸ್ನರ್, ಆ್ಯಡಂ ಹಾಲಿವೋಕ್, ಮೊಮ್ಮದ್ ಶಮಿ, ರಸೆಲ್ ಆರ್ನಾಲ್ಡ್, ಜಾವಗಲ್ ಶ್ರೀನಾಥ್, ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಪ್ರಮುಖ ಆಟಗಾರರು ಚೊಚ್ಚಲ ಟಿ೨೦ಯಲ್ಲಿ ಪಾಲ್ಗೊಂಡಿದ್ದರು. ಫೈನಲ್ ಪಂದ್ಯದಲ್ಲಿ ಕರ್ನಾಟಕವನ್ನು ಸೋಲಿಸಿದ ಏರ್ ಇಂಡಿಯಾ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
ಆರು ತಂಡಗಳು
ಭಾರತಕ್ಕೆ ಪರಿಚಯವಾದ ಈ ಟಿ೨೦ ಕ್ರಿಕೆಟ್‌ನಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಂಡಿದ್ದವು. ಬ್ರಾಡ್ಮನ್ ಇಲೆವೆನ್, ನ್ಯೂ ಸೌತ್ ವೇಲ್ಸ್, ಕೆಎಸ್‌ಸಿಎ ಇಲೆವೆನ್, ಬಂಗಾಳ, ಏರ್ ಇಂಡಿಯಾ ಹಾಗೂ ಕಾರ್ಪೋರೇಟ್ ವಲಯದಿಂದ ಕೆಮ್‌ಪ್ಲಾಸ್ಟ್ ತಂಡಗಳು ಸೇರಿದ್ದವು. 
ಬ್ರಾಡ್ಮನ್ ಅವರ ಹೆಸರನ್ನು ಹಸಿರಾಗಿರಿಸುವ ಉದ್ದೇಶದಿಂದ ಆಸ್ಟ್ರೇಲಿಯಾ ಮೂಲದ ಯುನಿಬಿಕ್ ಬಿಸ್ಕತ್ ಕಂಪೆನಿ ಈ ಟೂರ್ನಿಯ ಪ್ರಾಯೋಜಕತ್ವಕ್ಕೆ ಒಪ್ಪಿಕೊಂಡಿತ್ತು. 
  ರೂವಾರಿ ಬ್ರಿಜೇಶ್ ಪಟೇಲ್
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಕೆಎಸ್‌ಸಿಎನ ಅಂದಿನ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಅವರು ಈ ಟಿ೨೦ ಟೂರ್ನಿ ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದೊಂದು ಗೌರವದ ಕೆಲಸ ಎಂದು ಭಾವಿಸಿದ ಅವರು ಟೂರ್ನಿಯ ಯಶಸ್ಸಿಗೆ ದುಡಿದರು. ಟಿ ೨೦ ಕ್ರಿಕೆಟ್ ಭಾರತದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಬೇಕು. ಏಕದಿನ ಕ್ರಿಕೆಟ್ ಹುಟ್ಟಿಕೊಂಡಾಗ ಜನ ಇದನ್ನು ವಿರೋಧಿಸಿದ್ದರು. ಪಯ್ಜಾಮಾ ಕ್ರಿಕೆಟ್ ಎಂದು ಟೀಕಿಸಿದ್ದರು. ಆದರೆ ಏಕದಿನ ಕ್ರಿಕೆಟ್ ಜನಪ್ರಿಯತೆ ಕಂಡಿದೆ. ಅದೇ ರೀತಿ ಟಿ೨೦ ಕ್ರಿಕೆಟ್ ಕೂಡ ಜನಮನ ಗೆಲ್ಲಲಿದೆ ಎಂದು ಬ್ರಿಜೇಶ್ ಆಗಲೇ ‘ವಿಷಷ್ಯ ನುಡಿದು, ಅದಕ್ಕೊಂದು ವೇದಿಕೆ ಹುಟ್ಟುಹಾಕಿದರು. ಟಿ೨೦ ಕ್ರಿಕೆಟ್ ಜನರ ಪ್ರೀತಿಗೆ ಪಾತ್ರವಾಗಲಿದೆ. ಮೂರು ಗಂಟೆಗಳ ಅವಧಿಯ ಈ ಕ್ರಿಕೆಟ್ ನೋಡಿಕೊಂಡು ಜನ ಸಂಭ್ರಮದೊಂದಿಗೆ  ತಮ್ಮ ರಾತ್ರಿ ಊಟವನ್ನು ಸವಿಯಬಹುದು ಎಂದು ಬ್ರಿಜೇಶ್ ಅಂದೇ ನುಡಿದಿದ್ದರು. ಅದೇ ರೀತಿ ಚುಟುಕು ಮಾದರಿ ಯಶಸ್ಸು ಕಂಡಿತು. ಹೆಮ್ಮರವಾಗಿ ಬೆಳೆಯಿತು. ಅದೆಷ್ಟೋ ಕ್ರಿಕೆಟಿಗರ ಬದುಕನ್ನು ರೂಪಿಸಿತು. ಹಣದ ಹೊಳೆಯೇ ಹರಿದು ಬಂತು. ಪ್ರತಿಯೊಂದು ರಾಜ್ಯಗಳ ಪ್ರವಾಸೋದ್ಯಮ, ವ್ಯಾಪಾರ ಉತ್ತಮಗೊಂಡಿತು. ಗಲ್ಲಿಗಲ್ಲಿಯಲ್ಲೂ ಜನ ಟಿ೨೦ ಕ್ರಿಕೆಟ್ ಆಡತೊಡಗಿದರು. ಇತರ ದೇಶಗಳೂ ಲೀಗ್ ಆರಂಭಿಸಿದವು. ಇಂದು ಪ್ರತಿಯೊಬ್ಬರೂ ಟಿ೨೦ ಕ್ರಿಕೆಟ್ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆಯೇ ಹೊರತು ಟೆಸ್ಟ್ ಅಥವಾ ಏಕದಿನದ ಬಗ್ಗೆ ಹಿಂದಿನಂತಿದ್ದ ಆಸಕ್ತಿ ತೋರುತ್ತಿಲ್ಲ. ಕ್ರಿಕೆಟ್ ಅಭಿಮಾನಿಗಳಲ್ಲಿ ಈಗ ಕಾಯುವಿಕೆಯ ಕುತೂಹಲ ಹೊರಟಂತಿದೆ. ಟಿ೨೦ ಕ್ರಿಕೆಟ್‌ಗೆ ಸೇರಿದಷ್ಟು ಪ್ರೇಕ್ಷಕರು ಟೆಸ್ಟ್ ಅಥವಾ ಏಕದಿನ ಕ್ರಿಕೆಟ್‌ಗೆ ಸೇರುತ್ತಿಲ್ಲ ಎಂಬುದು ಗಮನಾರ್ಹ.
ಬ್ರಿಜೇಶ್ ಪಟೇಲ್ ಈಗ ಕ್ರಿಕೆಟ್ ಆಡಳಿತದಿಲ್ಲಿಲ್ಲ. ಆದರೆ ಅವರು ಬಿತ್ತಿದ ಟಿ೨೦ ಮರ ಹೆಮ್ಮರವಾಗಿ ಬೆಳೆದು ಫಲ ನೀಡುತ್ತಿದೆ.
ಆಗಸ್ಟ್ ೧೯, ೨೦ ಹಾಗೂ ೨೧ರಂದು ಮೂರು ದಿನಗಳ ಕಾಲ ಟೂರ್ನಿ ನಡೆಯಿತು. ಆರು ತಂಡಗಳನ್ನು ಎ ಮತ್ತು ಬಿ ಗುಂಪುಗಳನ್ನಾಗಿ ವಿಂಗಡಿಸಲಾಯಿತ. ಪ್ರತಿಯೊಂದು ಗುಂಪಿನಲ್ಲೂ ಮೂರು ತಂಡಗಳಿದ್ದವು. ಬ್ರಾಡ್ಮನ್ ಇಲೆವೆನ್ ತಂಡದಲ್ಲಿ ಶೋಯೇಬ್ ಮಲಿಕ್, ಕಮ್ರಾನ್ ಅಕ್ಮಲ್, ರಮೇಶ್ ಕಲುವಿತರಣ, ರಸೆಲ್ ಆರ್ನಾಲ್ಡ್, ಅಜಿತ್ ಅಗರ್ಕರ್, ಮಹೇಂದ್ರ ಸಿಂಗ್ ಧೋನಿ ಹಾಗೂ ಜಾವಗಲ್ ಶ್ರೀನಾಥ್ ಸೇರಿದ್ದರು. ಕೆಮ್‌ಪ್ಲಾಸ್ಟ್‌ನಲ್ಲಿ  ಭಾರತ ತಂಡದ ವೇಗದ ಬೌಲರ್ ಲಕ್ಷ್ಮೀಪತಿ ಬಾಲಾಜಿ ಸೇರಿದ್ದರು. ಟೂರ್ನಿ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಿತು.
ಮೊದಲ ದಿನ ಮೂರು ಪಂದ್ಯಗಳು ನಡೆದವು. ಬಂಗಾಳ ಎದುರಾಳಿ ಏರ್ ಇಂಡಿಯಾ, ನ್ಯೂಸೌತ್ ವೇಲ್ಸ್ ಎದುರಾಳಿ ಏರ್ ಇಂಡಿಯಾ ಮತ್ತು ಬ್ರಾಡ್ಮನ್ ಎದುರಾಳಿ ಕೆಎಸ್‌ಸಿಎ ಇಲೆವೆನ್ ಆಡಿದವು. ಶನಿವಾರ ನ್ಯೂಸೌತ್ ವೇಲ್ಸ್ ಎದುರಾಳಿ ಬಂಗಾಳ, ಬ್ರಾಡ್ಮನ್ ಇಲೆವೆನ್ ಎದುರಾಳಿ ಕೆಮ್‌ಪ್ಲಾಸ್ಟ್ ಪಂದ್ಯ ನಡೆಯಿತು. ಮೂರನೇ ದಿನದಲ್ಲಿ ಕೆಎಸ್‌ಸಿಎ ಇಲೆವೆನ್ ಹಾಗೂ ಕೆಮ್ ಪ್ಲಾಸ್ಟ್ ಹಾಗೂ ಫೈನಲ್ ಪಂದ್ಯ ನಡೆಯಿತು.
೭೫ ನಿಮಿಷಗಳಲ್ಲಿ ೨೦ ಓವರ್ ಪೂರ್ಣಗೊಳಿಸದಿದ್ದರೆ ೬ ರನ್‌ಗಳ ದಂಡ, ಬ್ಯಾಟ್ಸಮನ್ ಸಮಯ ಕೊಲ್ಲುವ ಯತ್ನ ಮಾಡಿದರೆ ೫ ರನ್‌ಗಳ ದಂಡ ವಿಧಿಸುವ ನಿಯಮ ಜಾರಿಗೆ ತರಲಾಯಿತು. ನೋಬಾಲ್‌ಗೆ ಫ್ರೀ ಹಿಟ್ ನಿಯಮವೂ ಇದೇ ವೇಳೆ ಜಾರಿಗೆ ಬಂತು.
ಪ್ರಮುಖ ಆಟಗಾರರು
ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ತಂಡದಲ್ಲಿ  ಡೌಗ್ಲಾಸ್ ಬೊಲಿಂಜರ್, ಡೇನಿಯಲ್ ಸ್ಮಿತ್, ಮರ್ರೆ ಕ್ರೀಡ್, ಮ್ಯಾಥ್ಯೂ ಫೆಲ್ಪ್ಸ್, ಜಾರ್ಡ್ ಬ್ರೂಕ್, ಡೆಮಿನಿಕ್ ಥೋಮಿ, ಎಡ್ವರ್ಡ್ ಕೊವಾನ್, ಜೇಮ್ಸ್ ಪ್ಯಾಕ್‌ಮನ್, ಜೆಸನ್ ಕ್ರೇಜಾ, ಮ್ಯಾಥ್ಯೂ ನಿಕೋಲ್ಸನ್, ಗ್ರ್ಯಾಂಟ್ ಲಾಂಬರ್ಟ್, ಏರೋನ್ ಒಬ್ರೇನ್, ಗ್ರೆಗ್‌ಮಾಲ್, ಆ್ಯಂಡ್ರ್ಯೂ ನೆಲ್ಸನ್, ಕ್ರೆಗ್ ಸಿಮ್ಸನ್, ನಥಾನ್ ಬ್ರೆಕನ್.
ಕೆಮ್‌ಪ್ಲಾಸ್ಟ್ ತಂಡದಲ್ಲಿ ಸುಜಿತ್ ಸೋಮ್‌ಸುಂದರ್, ಎಲ್. ಬಾಲಾಜಿ, ಟಿನು ಯೊಹಾನನ್, ಎಸ್. ಬದ್ರಿನಾಥ್, ಆರ್.ರಾಮ್‌ಕುಮಾರ್, ಅಜಯ್ ಎನ್. ಕುಡ್ವಾ, ಎಸ್. ಶ್ರೀರಾಮ್, ವಿಕ್ರಮ್ ಕುಮಾರ್, ಪಿ.ಜಯಚಂದ್ರನ್, ಮೊಹಮ್ಮದ್ ಸಯೀದ್, ಪ್ರವಂಜನ್ ಮಲಿಕ್, ಶಿವ ಕುಮಾರ್, ವಿಜಯ, ಡಿ.ವಾಸು ಮತ್ತು ಸುರೇಶ್ ರೈನಾ.
ಬಂಗಾಳ ತಂಡದಲ್ಲಿ ದೀಪ್ ದಾಸ್ ಗುಪ್ತಾ, ನಿಖಿಲ್ ಹಲ್ದೀಪುರ್, ಅರಿಂದಮ್ ದಾಸ್, ಶು‘ೋಮಯ್ ದಾಸ್, ಮನೋಜ್ ತಿವಾರಿ, ಸಂಜೀವ್ ಸನ್ಯಾಲ್, ರೋಹನ್ ಗವಾಸ್ಕರ್, ಅರಿಂದನ್ ಚಟರ್ಜೀ, ಸೌರಶಿಶ್ ಲಾಹಿರಿ, ಶಿವ ಸಾಗರ್ ಸಿಂಗ್, ಸೌರವ್ ಸರ್ಕಾರ್, ರಣದೇವ್ ಬೋಸ್, ರಾಹಲ್‌ದೇವ್, ಶುಭೋಜಿತ್ ಪೌಲ್, ಸೋಹಮ್ ಘೋಶ್, ಶಿವ ಸುಂದರ್ ದಾಸ್ ಸೇರಿದ್ದರು.
ಕೆಎಸ್‌ಸಿಎ ಇಲೆವೆನ್ ತಂಡದಲ್ಲಿ  ಜೆ. ಅರುಣ್ ಕುಮಾರ್, ದೊಡ್ಡ ಗಣೇಶ್, ರೊಲ್ಯಾಂಡ್ ಬ್ಯಾರಿಂಗ್ಟನ್, ಸುನಿಲ್ ಜೋಶಿ, ರಾಬಿನ್ ಉತ್ತಪ್ಪ, ‘ರತ್ ಚಿಪ್ಲಿ, ವಿಜಯ ಭಾರದ್ವಾಜ್, ಸುಧೀಂದ್ರ ಶಿಂದೆ, ಸ್ಟುವರ್ಟ್ ಬಿನ್ನಿ, ಉದಿತ್ ಪಟೇಲ್, ತಿಲಕ್ ನಾಯ್ಡು, ಎನ್.ಸಿ. ಅಯ್ಯಪ್ಪ, ಆರ್. ವಿನಯ್ ಕುಮಾರ್, ಸಿ. ರಾಘವೇಂದ್ರ, ಸಿ. ರಘು ಮತ್ತು ಗೌರವ್ ಧಿಮನ್ ಆಡಿದ್ದರು.
ಬ್ರಾಡ್ಮನ್ ಇಲೆವೆನ್ ತಂಡದಲ್ಲಿ ಶೋಯೇಬ್ ಮಲಿಕ್, ಸಲ್ಮಾನ್‌ಬಟ್, ಕಮ್ರಾನ್ ಅಕ್ಮಲ್, ಮೊಹಮ್ಮದ್ ಸಮಿ, ಎ್. ಮಹರ್‌ೂ, ಆರ್. ಕಲುವಿತರಣ, ಉಪಲ್ ಚಂದನ, ರಸೆಲ್ ಆರ್ನಾಲ್ಡ್, ಆ್ಯಡಂ ಹಾಲಿವೋಕ್, ಡೀನ್ ಜೋನ್ಸ್, ಅಜಿತ್ ಅಗರ್ಕರ್, ಎಂ.ಎಸ್. ಧೋನಿ ಹಾಗೂ ಜಾವಗಲ್ ಶ್ರೀನಾಥ್ ಸೇರಿದ್ದರು.
ಧೋನಿ ಅಜೇಯ ೯೧ ರನ್ ಗಳಿಸುವ ಮೂಲಕ ತಾನೊಬ್ಬ ‘ವಿಶ್ವದ  ಸ್ಫೋಟಕ ಟಿ೨೦ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದರು. ಧೋನಿ ಸಿಡಿಸಿದ ಸಿಕ್ಸರ್ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರ ಸಾಗಿದ್ದು, ಪ್ರೇಕ್ಷಕರನ್ನು ರಂಜಿಸಿತ್ತು. ಫೈನಲ್ ಪಂದ್ಯದಲ್ಲಿ ಏರ್ ಇಂಡಿಯಾ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.

administrator