ಕಿರಿಯರ ವಿಶ್ವಕಪ್ ಗೆಲ್ಲುವ ಕನಸಿನಲ್ಲಿ ಯಂಗ್ ಇಂಡಿಯಾ
ಕ್ರೈಸ್ಟ್ ಚರ್ಚ್: 19 ವರ್ಷದೊಳಗಿನವರ ಐಸಿಸಿ ವಿಶ್ವಕಪ್ ಟೂರ್ನಿ ನ್ಯೂಜಿಲೆಂಡ್‌ನಲ್ಲಿ ಶನಿವಾರ ಆರಂಭಗೊಂಡಿದ್ದು, ಆಫ್ಘಾನಿಸ್ತಾನ, ಜಿಂಬಾಬ್ವೆ, ಬಾಂಗ್ಲಾದೇಶ ಮತ್ತು ಆತಿಥೇಯ ನ್ಯೂಜಿಲೆಂಡ್ ತಂಡಗಳು ಶುಭಾರಂಭ ಮಾಡಿವೆ.
ಆಫ್ಘಾನಿಸ್ತಾನ ತಂಡ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿದರೆ, ಪಪುವಾ ನ್ಯೂಗಿನಿ ವಿರುದ್ಧ ಜಿಂಬಾಬ್ವೆ 10 ವಿಕೆಟ್‌ಗಳ ಸುಲಭ ಜಯ ದಾಖಲಿಸಿತು. ಇನ್ನು ನಮೀಬಿಯಾ ವಿರುದ್ಧ ಬಾಂಗ್ಲಾದೇಶ 87 ರನ್‌ಗಳಿಂದ ಗೆದ್ದರೆ, ಹಾಲಿ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡವನ್ನು ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಭರ್ಜರಿಯಾಗಿ ಬಗ್ಗು ಬಡಿಯಿತು.
ಮೂರು ಬಾರಿಯ ಚಾಂಪಿಯನ್ಸ್ ಭಾರತ ತಂಡದ ಅಭಿಯಾನ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಲಿದೆ. ಭಾರತ ತಂಡವನ್ನು ಮುಂಬೈ ಹುಡುಗ ಪೃಥ್ವಿ ಶಾ ಮುನ್ನಡೆಸಲಿದ್ದಾರೆ. ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿರುವ ಭಾರತ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 189 ರನ್‌ಗಳಿಂದ ಮಣಿಸಿರುವ ಭಾರತ ವಿಶ್ವಕಪ್ ಟೂರ್ನಿಗೆ ಉತ್ತಮ ರೀತಿಯಲ್ಲಿ ಸಜ್ಜಾಗಿದೆ.

PC: twitter ICC

2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋತು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು.
22 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿದ್ದು, 4 ಗ್ರೂಪ್‌ಗಳಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಫೈನಲ್ ಪಂದ್ಯ ಫೆ.3ರಂದು ಬೇ ಓವಲ್ ಮೈದಾನದಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ಅವರ ಪುತ್ರ ಆಸ್ಟಿನ್ ವಾ ಮತ್ತು ದಕ್ಷಿಣ ಆಫ್ರಿಕಾ ತಂಡದ ಮಾಜಿ ವೇಗದ ಬೌಲರ್ ಮಖಾಯ ಎನ್‌ಟಿನಿ ಅವರ ಪುತ್ರ ಥಂಡೊ ಎನ್‌ಟಿನಿ ಈ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ಅಲ್ಲದೆ ಉತ್ತಮ ಆಟವಾಡುವ ಮೂಲಕ ತಮ್ಮ ರಾಷ್ಟ್ರೀಯ ತಂಡಗಳಿಗೆ ಆಯ್ಕೆಯಾಗುವ ಕನಸು ಹೊಂದಿದ್ದಾರೆ.

ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ತಂಡಗಳು
‘ಎ’ ಗ್ರೂಪ್: ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಕೀನ್ಯಾ, ದಕ್ಷಿಣ ಆಫ್ರಿಕಾ
‘ಬಿ’ ಗ್ರೂಪ್: ಭಾರತ, ಆಸ್ಟ್ರೇಲಿಯಾ, ಪಪುವಾ ನ್ಯೂಗಿನಿ, ಜಿಂಬಾಬ್ವೆ
‘ಸಿ’ ಗ್ರೂಪ್: ಬಾಂಗ್ಲಾದೇಶ, ನಮೀಬಿಯಾ, ಕೆನಡಾ, ಇಂಗ್ಲೆಂಡ್
‘ಡಿ’ ಗ್ರೂಪ್: ಅಫಘಾನಿಸ್ತಾನ, ಪಾಕಿಸ್ತಾನ, ಐರ್ಲೆಂಡ್, ಶ್ರೀಲಂಕಾ