ಮರಿನ್ ಮಿಂಚು, ಫೈನಲ್ ಹೈದರಾಬಾದ್

0
232

ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್: ಹಂಟರ್ಸ್‌ಗೆ ಜಯ ತಂದ ಸ್ಪೇನ್‌ನ ಆಟಗಾರ್ತಿ

PC: twitter PBL

ಹೈದರಾಬಾದ್: ವಿಶ್ವದ ಮಾಜಿ ನಂ. 1 ಆಟಗಾರ್ತಿ ಕರೋಲಿನ್ ಮರಿನ್ ಒಂದು ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿಯೂ ದಿಟ್ಟ ಹೋರಾಟ ನೀಡಿ ಸನ್ ಜಿ ಹನ್ ವಿರುದ್ಧ 13-15, 15-10, 15-9 ಅಂತರದಲ್ಲಿ ಜಯ ಗಳಿಸಿ ತಮ್ಮ ತಂಡ ಹೈದರಾಬಾದ್ ಹಂಟರ್ಸ್‌ಗೆ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಫೈನಲ್ ಅವಕಾಶ ಕಲ್ಪಿಸಿಕೊಟ್ಟರು.
ಮನೆಯಂಗಣದ ಪ್ರೇಕ್ಷಕರ ಮುಂದೆ ಮನೋಬಲವನ್ನು ಹೆಚ್ಚಿಸಿಕೊಂಡ ಮರಿನ್, ಆರಂಭದ ಗೇಮ್‌ನಲ್ಲಿ 13-15ರ ಅಂತರದಲ್ಲಿ ಸೋನುಭವಿಸಿದರೂ ನಂತರದ ಎರಡು ಗೇಮ್‌ಗಳಲ್ಲಿ ಪ್ರಭುತ್ವ ಸಾಧಿಸಿ ಪಂದ್ಯ ಗೆದ್ದರು. ಡೆಲ್ಲಿ ಡ್ಯಾಷರ್ಸನ ಆಟಗಾರ್ತಿ ಹನ್ ಟ್ರಂಪ್ ಗೇಮ್‌ನಲ್ಲಿ ಸೋತಿದ್ದರಿಂದ ಮರಿನ್‌ಗೆ 2 ಅಂಕ ಲಭಿಸಿತು.
ದಿನದ ಇನ್ನೊಂದು ಪಂದ್ಯದಲ್ಲಿ ಸ್ಥಳೀಯ ಆಟಗಾರ ಬಿ ಸಾಯಿ ಪ್ರಣೀತ್ ಡ್ಯಾಷರ್ಸನ ಟ್ರಂಪ್ ಆಟಗಾರ ತಿಯಾನ್ ಹೌವೈ ವಿರುದ್ಧ 15-9, 15-8 ಅಂತರದಲ್ಲಿ ಗೆದ್ದು ತಂಡಕ್ಕೆ 1-0 ಮುನ್ನಡೆ ಕಲ್ಪಿಸಿದರು. ಹೈದರಾಬಾದ್ ಹಂಟರ್ಸ್ ಆರಂಭ ಉತ್ತಮವಾಗಿರಲಿಲ್ಲ. ಡಬಲ್ಸ್‌ನಲ್ಲಿ ಪಿಯಾ ಜೆಬಾದಿಹಾ ಬೆರ್ನಾಡೆಟ್ ಹಾಗೂ ಸಾತ್ವಿಕ್‌ರಾಜ್ ರಾಂಕಿರೆಡ್ಡಿ ಜೋಡಿ ಸೋಲನುಭವಿಸಿ ಹೈದರಾಬಾದ್‌ಗೆ ಆಘಾತ ನೀಡಿದರು. ಅಶ್ವಿನಿ ಪೊನ್ನಪ್ಪ ಹಾಗೂ ವ್ಲಾಡಿಮಿರ್ ಇವಾನೊವ್ ಜೋಡಿಗೆ ಶರಣಾದರು. ಅಶ್ವಿನಿ ಜೋಡಿ 13-15, 15-10, 15-10 ಅಂತರದಲ್ಲಿ ಜಯ ಗಳಿಸಿತು. ಮೊದಲ ಗೇಮ್‌ನಲ್ಲಿ ಅಶ್ವಿನಿ ರಷ್ಯಾದ ಆಟಗಾರನೊಂದಿಗೆ ಸೋಲನುಭವಿಸಿದರೂ ನಂತರದ ಎರಡು ಗೇಮ್‌ಗಳಲ್ಲಿ ಯಶಸ್ಸು ಕಂಡರು.
ಮರಿನ್ ಹಾಗೂ ಸನ್ ಜಿ ಅವರ ನಡುವಿನ ಹೋರಾಟ ಅತ್ಯಂತ ಕುತೂಹಲದಿಂದ ಕೂಡಿತ್ತು. ಇಬ್ಬರೂ ಆಟಗಾರ್ತಿಯರು ಅನುಭವದ ಆಟ ಪ್ರದರ್ಶಿಸಿದರು. ಆರಂಭಿಕ ಗೇಮ್‌ನಲ್ಲಿ ಮರಿನ್ ಹಿನ್ನಡೆ ಅನುಭವಿಸಿದರು. ಸನ್ ಜಿ ಉತ್ತಮ ಡ್ರಾಪ್‌ಗಳ ಮೂಲಕ ಮರಿನ್ ಅವರನ್ನು ಹಿಮ್ಮೆಟ್ಟುವಲ್ಲಿ ಯಶಸ್ವಿಯಾದರು. ಆದರೆ ವಿಶ್ವದ ಮಾಜಿ ನಂ. 1 ಆಟಗಾರ್ತಿ ಮರಿನ್ ನಂತರದ ಎರಡೂ ಗೇಮ್‌ಗಳಲ್ಲಿ ಸನ್ ಜಿಯ ತಂತ್ರ ನಡೆಯದಂತೆ ಮಾಡಿದರು.
ಎರಡನೇ ಗೇಮ್ ಕೂಡ ಅತ್ಯಂತ ಕುತೂಹಲದಿಂದ ಕೂಡಿತ್ತು. ಇದು ಹೈದರಾಬಾದ್‌ನ ಪ್ರೇಕ್ಷಕರಿಗೆ ರಸದೌತಣವನ್ನು ನೀಡಿತು. ಅದಕ್ಕೆ ಪೂರಕವೆಂಬಂತೆ ಮರಿನ್ ಜಯ ಗಳಿಸಿದರು. ಮೂರನೇ ಗೇಮ್‌ನಲ್ಲಿ ಸನ್ ಜಿ ಬಳಲಿದಂತೆ ಕಂಡು ಬಂದರು. ಇದರ ಸದುಪಯೋಗಪಡೆದುಕೊಂಡ ಮರಿನ್ ಡ್ರಾಪ್‌ಗಳ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಎರಡನೇ ಸೆಮಿಫೈನಲ್‌ನಲ್ಲಿ ವಿಶ್ವದ ಇಬ್ಬರು ನಂ.1 ಆಟಗಾರ್ತಿಯರು ಮುಖಾಮುಖಿಯಾದದ್ದು ವಿಶೇಷ. ಎರಡನೇ ಸೆಮಿಫೈನಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಅಹಮದಾಬಾದ್ ತಂಡಗಳು ಮುಖಾಮುಖಿಯಾಗಲಿವೆ. 17 ಅಂಕಗಳನ್ನು ಗಳಿಸಿರುವ ಅಹಮದಾಬಾದ್ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 14 ಅಂಕ ಗಳಿಸಿರುವ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ.