ಡೆಲ್ಲಿಯಲ್ಲಿ ಬೆಂಗಳೂರಿಗೆ ಸೋಲಿನ ಶಾಕ್

0
206

ಹೊಸದಿಲ್ಲಿ, ಜನವರಿ 14
ಸತತ ಜಯದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬೆಂಗಳೂರು ತಂಡಕ್ಕೆ ಸೋತು ಕಂಗಾಲಾಗಿದ್ದ ಡೆಲ್ಲಿ ಡೈನಾಮೋಸ್ ವಿರುದ್ಧ ಸೋಲಿನ ಆಘಾತ. ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್‌ನ 47ನೇ ಪಂದ್ಯದಲ್ಲಿ ಲಾಲಿಯಾನ್ಜುವಾಲಾ ಚಾಂಗ್ಟೆ (72ನೇ ನಿಮಿಷ) ಹಾಗೂ ಗಯಾನ್ ಫೆರ್ನಾಂಡೀಸ್ (97ನೇ ನಿಮಿಷ) ಗಳಿಸಿದ ಗೋಲಿನಿಂದ ಡೆಲ್ಲಿ ಡೈನಾಮೋಸ್ ತಂಡ ಬೆಂಗಳೂರು ಎಫ್‌ಸಿ ತಂಡಕ್ಕೆ 2-0 ಗೋಲಿನಿಂದ ಆಘಾತ ನೀಡಿತು.
ಈ ಸೋಲಿನೊಂದಿಗೆ ಬಿಎಫ್‌ಸಿ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿಯಿತು. ಡೈಲ್ಲಿ ಡೈನಾಮೋಸ್ ಕೂಡ ಕೊನೆಯ ಸ್ಥಾನವನ್ನೇ ಕಾಯ್ದುಕೊಂಡಿತು.
ದ್ವಿತಿಯಾರ್ಧದಲ್ಲಿ ಡೆಲ್ಲಿ ದರ್ಬಾರ್
ಬೆಂಗಳೂರಿನ ಶಕ್ತಿಯನ್ನು ಸಮರ್ಥವಾಗಿ ಅರ್ಥೈಸಿಕೊಂಡ ಡೆಲ್ಲಿ ಡೈನಾಮೋಸ್ ಹಿಂದಿನ ಸೋಲುಗಳ ಬಗ್ಗೆ ಹೆಚ್ಚು ಯೋಚನೆ ಮಾಡಲಿಲ್ಲ. ಅಂದಿನ ಪಂದ್ಯಗಳ ಬಗ್ಗೆ ಅಂಗಣದಲ್ಲೇ ಯೋಜನೆ ರೂಪಿಸುವ ಡೆಲ್ಲಿ ತಂಡ ಪ್ರಥಮಾರ್ಧದಲ್ಲಿ ಗೋಲು ಗಳಿಸುವ ಅವಕಾಶವನ್ನು ಕೈ ಚೆಲ್ಲಿದರೂ ದ್ವಿತಿಯಾರ್ಧದಲ್ಲಿ ಯಶಸ್ಸು ಕಂಡಿತು. 72ನೇ ನಿಮಿಷದಲ್ಲಿ ಲಾಲಿಯಾನ್ಜುವಾಲಾ ಚಾಂಗ್ಟೆ ಗಳಿಸಿದ ಗೋಲು ತಂಡಕ್ಕೆ 1-0 ಗೋಲಿನ ಮುನ್ನಡೆ ಕಲ್ಪಿಸಿತು. ಇದು ಜಯಕ್ಕೆ ಹಾಕಿದ ವೇದಿಕೆಯಂತಿತ್ತು. ಸೋತು ಸುಣ್ಣವಾಗಿದ್ದ ಡೆಲ್ಲಿ ತಂಡಕ್ಕೆ ಈ ಗೋಲು ಅತ್ಯಂತ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು, ಪ್ರೀತಮ್ ಕೊತಾಲ್ ಬಲಭಾಗದಲ್ಲಿ ಸಿಕ್ಕ ಪಾಸ್ ಅನ್ನು ನಿಯಂತ್ರಿಸುತ್ತ ಕೆಲ ಹೊತ್ತು ತಡೆದು ನಂತರ ಚಾಂಗ್ಟೆಗೆ ಪಾಸ್ ಮಾಡಿದರು. ಬಂದ ರೀತಿಯಲ್ಲೇ ಚೆಂಡನ್ನು ನೇರವಾಗಿ ಗೋಲ್‌ಬಾಕ್ಸ್‌ಗೆ ತಲುಪಿಸಿದ ಚಾಂಗ್ಟೆ ಡೆಲ್ಲಿಗೆ ಅಚ್ಚರಿಯ ಮುನ್ನಡೆ ಕಲ್ಪಿಸಿದರು. ಬೆಂಗಳೂರು ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್‌ಗೆ ಯಾವುದೇ ರೀತಿಯಲ್ಲಿ ಚೆಂಡನ್ನು ತಡೆಯಲಾಗಲಿಲ್ಲ. ಡೆಲ್ಲಿ ತಂಡದ ಪ್ರದರ್ಶನದ ಬಗ್ಗೆ ಬೇಸರಗೊಂಡಿದ್ದ ಮನೆಯಂಗಣದ ಅಭಿಮಾನಿಗಳಿಗೆ ಈಗ ಎಲ್ಲಿಲ್ಲಂದ ಸಂಭ್ರಮ. 97ನೇ ನಿಮಿಷದಲ್ಲಿ ಪೆನಾಲ್ಡಿ ಮೂಲಕ ಗಯಾನ್ ಫೆರ್ನಾಂಡೀಸ್ ಗಳಿಸಿದ ಗೋಲಿನಿಂದ ಡೆಲ್ಲಿ ತಂಡ 2-0 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು.
ಗೋಲಿಲ್ಲದ ಪ್ರಥಮಾರ್ಧ
ಡೆಲ್ಲಿ ಉತ್ತಮ ಹೋರಾಟ ನೀಡಿತು. ಅರ್ನಬ್‌ದಾಸ್ ಶರ್ಮಾ ಪ್ರಥಮಾರ್ಧದಲ್ಲಿ ತಂಡದ ರಕ್ಷಣೆ ಮಾಡಿದರೆಂದರೆ ತಪ್ಪಾಗಲಾರದು. ಆತಿಥೇಯ ತಂಡ ಉತ್ತಮ ಆರಂಭ ಕಂಡು ಕೆಲವು ಗೋಲು ಗಳಿಸುವ ಅವಕಾಶವನ್ನು ಸೃಷ್ಟಿಸಿಕೊಂಡಿತು. ಆದರೆ ಅವಕಾಶವನ್ನು ಗೋಲಾಗಿಸುವಲ್ಲಿ ವಿಫಲವಾಯಿತು. ಹರ್ಮನ್‌ಜೋತ್ ಖಬ್ರಾ ಗೋಲು ಗಳಿಸುವ ಅವಕಾಶ ಕಂಡಿದ್ದರು. ಆದರೆ ಅದೃಷ್ಟ ಅವರ ಪಾಲಿಗೆ ಒಲಿಯಲಿಲ್ಲ. ಎದುರಾಳಿ ತಂಡದ ಕೀಪರ್ ಅರ್ನಬ್‌ದಾಸ್ ಶರ್ಮಾ ಉತ್ತಮ ರೀತಿಯಲ್ಲಿ ತಡೆದು ಬೆಂಗಳೂರಿನ ಮುನ್ನಡೆಗೆ ತಡೆಯೊಡ್ಡಿದರು. ಇದರಿಂದ ಪ್ರವಾಸಿ ತಂಡ ಪ್ರಥಮಾರ್ಧದಲ್ಲಿ ಗೋಲು ಗಳಿಸುವ ಉತ್ತಮ ಅವಕಾಶವನ್ನು ಕೈ ಚೆಲ್ಲಿತು.
ಡೆಲ್ಲಿಯ ಭರವಸೆಯ ಸ್ಟ್ರೈಕರ್ ಲಾಲಿಯಾನ್ಜುವಾಲಾ ಚಾಂಗ್ಟೆ ಹತಾಶೆಯಿಂದ ಬೆಂಗಳೂರು ಆಟಗಾರರನ್ನು ಉದ್ದೇಶಪೂರ್ವಕವಾಗಿ ತಡೆದರು. ಆಕ್ರಮಣಕಾರಿಯಾಗಿ ಹಾಗೂ ಉದ್ದೇಶಪೂರ್ವಕವಾಗಿ ಮಾಡಿದ ಈ ವರ್ತನೆ ರೆಫರಿಗೆ ಸರಿಕಾಣಲಿಲ್ಲ. ಹಳದಿ ಕಾರ್ಡು ತೋರಿಸಿ ಎಚ್ಚರಿಕೆ ನೀಡಿದರು.
ಕೆಳ ಸ್ಥಾನದಲ್ಲಿರುವ ಡೆಲ್ಲಿ ಹಾಗೂ ಅಗ್ರ ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಎಫ್‌ಸಿ ತಂಡಗಳು ಸೂಪರ್ ಸಂಡೆಯ ಮೊದಲ ಪಂದ್ಯದಲ್ಲಿ ಎದುರಾದವು. ಋತುವಿನ ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸಿ ಅಂತಿಮ ನಾಲ್ಕರ ಹಂತವನ್ನು ತಲಪುವುದು ಪ್ರತಿಯೊಂದು ತಂಡದ ಗುರಿಯಾಗಿದೆ. ಡೆಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದು, ನಾಕೌಟ್ ಹಂತದಿಂದ ದೂರ ಉಳಿಯುವ ಆತಂಕದಲ್ಲಿದೆ. ಈ ಹಿಂದೆ ಬೆಂಗಳೂರಿನಲ್ಲಿ ಮುಖಾಮುಖಿಯಾಗಿದ್ದಾಗ ಡೆಲ್ಲಿ ತಂಡ 1-4 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು. ಅಗ್ರ ಸ್ಥಾನದಲ್ಲಿ ಈಗ ಚೆನ್ನೈ ಇದೆ. ಬೆಂಗಳೂರು ಜಯ ಗಳಿಸಿದರೆ ಮತ್ತೆ ಅಗ್ರ ಸ್ಥಾನಕ್ಕೆ ಏರಲಿದೆ. ಹಿಂದಿನ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿದ ಆತ್ಮವಿಶ್ವಾಸದಲ್ಲಿ ಬೆಂಗಳೂರೂ ಎಫ್‌ಸಿ ಡೆಲ್ಲಿಗೆ ಆಗಮಿಸಿದೆ. ಐಎಸ್‌ಎಲ್‌ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಬೆಂಗಳೂರು ತಂಡ ಅತ್ಯಂತ ಆತ್ಮವಿಶ್ವಾಸದಲ್ಲಿದೆ. ಸಿಕ್ಕ ಅವಕಾಶವನ್ನು ಸೂಕ್ತ ಸಮಯದಲ್ಲಿ ಸದುಪಯೋಗಪಡಿಸಿಕೊಂಡು ಯಶಸ್ಸಿನ ಹಾದಿ ತುಳಿಯುತ್ತಿದೆ.
ಬೆಂಗಳೂರು ತಂಡದ ನಾಯಕ ಸುನಿಲ್ ಛೆಟ್ರಿ ಉತ್ತಮ ರೀತಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮಿಕು ಅತಿ ಹೆಚ್ಚು ಗೋಲು ಗಳಿಸಿದರೆ, ಛೆಟ್ರಿ ಹೆಚ್ಚು ಗೋಲು ಗಳಿಸಲು ನೆರವು ನೀಡುತ್ತಿದ್ದಾರೆ. ಕಳೆದ ಐದು ಪಂದ್ಯಗಳಲ್ಲಿ ಛೆಟ್ರಿ ನಾಲ್ಕು ಗೋಲುಗಳನ್ನು ಗಳಿಸಿ ನಾಯಕನ ಜವಾಬ್ದಾರಿಯನ್ನು ಸ್ಪದರ್ಶಿಸಿದ್ದಾರೆ. 19 ಶಾಟ್‌ಗಳಲ್ಲಿ 14 ನಿಖರವಾಗಿತ್ತು. ಲೀಗ್‌ನಲ್ಲಿ ಇದುವರೆಗೂ 21 ಬಾರಿ ಗೋಲ್‌ಗೆ ಗುರಿ ಇಟ್ಟು ಹೊಡೆದಿದ್ದಾರೆ. ಲಾನ್ಜರೋಟ್ 18 ಬಾರಿ ಈ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ. ಡೆಲ್ಲಿಯ ಡಿಫೆನ್ಸ್ ದುರ್ಬಲವಾಗಿರುವುದರಿಂದ ಇಲ್ಲಿ ಬೆಂಗಳೂರು ತಂಡಕ್ಕೆ ಹೆಚ್ಚು ಗೋಲು ಗಳಿಸುವ ಅವಕಾಶ ಇದೆ.
ಮನೆಯಂಗಣದಲ್ಲಿ ಡೆಲ್ಲಿ ತಂಡ ಇದುವರೆಗೂ ನಾಲ್ಕು ಪಂದ್ಯಗಳನ್ನಾಡಿದ್ದು, ನಾಲ್ಕರಲ್ಲೂ ಸೋಲನುಭವಿಸಿದೆ. ಇದರೊಂದಿಗೆ ಮನೆಯಂಗಣದಲ್ಲಿ ಅಂಕ ಗಳಿಸಲು ಬಾಕಿ ಇರುವ ಏಕೈಕ ತಂಡವೆಂಬ ಕುಖ್ಯಾತಿಗೆ ಡೆಲ್ಲಿ ಹೆಸರಾಯಿತು. ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಎಲ್ಲಾ ತಂಡಗಳು ಜಯದೊಂದಿಗೆ ಖಾತೆ ತೆರೆದಿವೆ. ಬೆಂಗಳೂರು ಎಫ್‌ಸಿ ಮನೆಯಿಂದ ಹೊರಗೆ ನಡೆದಿರುವ ಮೂರು ಪಂದ್ಯಗಳಲ್ಲಿ ಜಯ ಗಳಿಸಿದೆ, ಎಫ್‌ಸಿ ಪುಣೆ ಸಿಟಿ ಕೂಡ ಇದೇ ಸಾಧನೆ ಮಾಡಿದೆ. ಮನೆಯಂಗಣದಲ್ಲಿ ನಡೆದ ಎಲ್ಲ ಪಂದ್ಯಗಳಲ್ಲೂ ಡೆಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ಮನೆಯಂಗಣದಲ್ಲಿ ಡೆಲ್ಲಿ ಇದುವರೆಗೂ ಎದುರಾಳಿ ತಂಡಕ್ಕೆ 11 ಗೋಲು ಗಳಿಸುವ ಅವಕಾಶ ನೀಡಿದೆ. ಮನೆಯಂಗಣದಲ್ಲಿ ಗೆದ್ದು ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಬೇಕೆಂಬ ಹಂಬಲದೊಂದಿಗೆ ಡೆಲ್ಲಿ ತಂಡ ಅಂಗಣಕ್ಕಿಳಿಯಿತು.